ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಲಿಯೋನೆಲ್ ಮೆಸ್ಸಿ ಅವರ GOAT ಟೂರ್ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಅವ್ಯವಸ್ಥೆ ಮತ್ತು ಗಲಾಟೆ ಕುರಿತು ತನಿಖೆಗೆ ಪಶ್ಚಿಮ ಬಂಗಾಳ ಸರ್ಕಾರ ಆದೇಶಿಸಿದೆ. ಈ ನಡುವೆ, ಘಟನೆಯ ನೈತಿಕ ಹೊಣೆಹೊತ್ತು ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಅವ್ಯವಸ್ಥೆಗೆ ಸಂಬಂಧಿಸಿದಂತೆ ಬಿಸ್ವಾಸ್ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿವೆ. ಈ ಬೆನ್ನಲ್ಲೇ, ಬಿಸ್ವಾಸ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೈಬರಹದಲ್ಲಿ ರಾಜೀನಾಮೆ ಪತ್ರ ಬರೆದಿದ್ದಾರೆ. “ಘಟನೆ ಕುರಿತು ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಯುವುದನ್ನು ಖಾತ್ರಿಪಡಿಸಲು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಹೇಳಿದ್ದಾರೆ. ಅವರ ರಾಜೀನಾಮೆಯನ್ನು ಮಮತಾ ಬ್ಯಾನರ್ಜಿ ಅಂಗೀಕರಿಸಿದ್ದಾರೆ.
ಶನಿವಾರ ಬೆಳಗ್ಗೆ, ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮೆಸ್ಸಿ ಅವರ 2 ಗಂಟೆಗಳ ಕಾರ್ಯಕ್ರಮ ಅಯೋಜಿಸಲಾಗಿತ್ತು. ಮೆಸ್ಸಿ ಅವರನ್ನು ಕ್ರೀಡಾಂಗಣದಲ್ಲಿ ಸುತ್ತು ಹಾಕುವಾಗ, ಅವರನ್ನು ಹಲವು ರಾಜಕಾರಣಿಗಳು ಮತ್ತು ಪ್ರಭಾವಿಗಳು ಸುತ್ತುವರಿದಿದ್ದರು. ಪರಿಣಾಮ, ಕ್ರೀಡಾಂಗಣಕ್ಕೆ ಟಿಕೆಟ್ ಪಡೆದು ಬಂದಿದ್ದ ಅಭಿಮಾನಿಗಳು ಮೆಸ್ಸಿಯನ್ನು ನೋಡಲು ಸಾಧ್ಯವಾಗದೆ ಗಲಾಟೆ ನಡೆಸಿದರು. ಈ ಬೆನ್ನಲ್ಲೇ, ಕ್ರೀಡಾಂಗಣದ ಕಾರ್ಯಕ್ರಮವು ಕೇವಲ 20 ನಿಮಿಷದಲ್ಲೇ ಮೊಟಕುಗೊಂಡಿತ್ತು. ಮೆಸ್ಸಿ ಕ್ರೀಡಾಂಗಣದಲ್ಲಿ ಹೊರಹೋದರು. ಕೋಪಗೊಂಡ ಅಭಿಮಾನಿಗಳು ಸ್ಟೇಡಿಯಂನಲ್ಲಿದ್ದ ಕುರ್ಚಿಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಲೇಖನ ಓದಿದ್ದೀರಾ?: ನಿರುದ್ಯೋಗದ ಪ್ರಶ್ನೆಗೆ ನಿಗ್ರಹವೇ ಉತ್ತರವೇ?; ಉದ್ಯೋಗಾಕಾಂಕ್ಷಿಗಳಿಗೆ ಉತ್ತರಿಸುವವರಾರು?
ಘಟನೆ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಅಸಿಮ್ ಕುಮಾರ್ ರಾಯ್ ನೇತೃತ್ವದ ವಿಚಾರಣಾ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಪ್ರಾಥಮಿಕ ವರದಿ ಸಲ್ಲಿಸಿದ್ದು, ಸರ್ಕಾರವು ಹಿರಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕುಮಾರ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅಂತೆಯೇ, ಬಿಧಾನ್ನಗರ ಪೊಲೀಸ್ ಮುಖ್ಯಸ್ಥರು ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ನೋಟಿಸ್ ನೀಡಲಾಗಿದ್ದು, 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ. ಉಪ ಪೊಲೀಸ್ ಆಯುಕ್ತ ಅನೀಶ್ ಸರ್ಕಾರ್ ಅವರನ್ನು ಅಮಾನತು ಮಾಡಲಾಗಿದೆ.
ಮಮತಾ ಅವರ ಅತ್ಯಂತ ವಿಶ್ವಾಸಾರ್ಹರೂ, ಟಿಎಂಸಿಯ ಪ್ರಭಾವಿ ನಾಯಕರೂ ಆಗಿರುವ ಬಿಸ್ವಾಸ್ ಅವರ ರಾಜೀನಾಮೆಯು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗಮನಾರ್ಹ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ರಾಜೀನಾಮೆಯನ್ನು ನೈತಿಕತೆ ಮತ್ತು ಹೊಣೆಗಾರಿಕೆಯನ್ನು ಪ್ರದರ್ಶಿಸಿದ ಪಕ್ಷವೆಂದು ಜನರ ಗಮನ ಸೆಳೆಯಲೂ ಟಿಎಂಸಿಗೆ ಇದು ಅವಕಾಶ ನೀಡಬಹುದು ಎನ್ನಲಾಗುತ್ತಿದೆ.




