ಪ್ರಧಾನಿ ಮೋದಿ ಅವರು ತಮ್ಮ ಅತ್ಯಾಪ್ತರಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತ ಉದ್ಯಮಿಗಳಿಗೆ ಅನುಕೂಲ ಆಗುವಂತೆ ‘ಮನರೇಗಾ’ವನ್ನು ದುರ್ಬಲಗೊಳಿಸಿದ್ದಾರೆ. ಬಡವರು ಮತ್ತು ವಂಚಿತರು ಹಸಿವಿನಿಂದ ಬಳಸುವಂತೆ ಮಾಡುತ್ತಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ರಾಯ್ ಬರೇಲಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. “ಪ್ರಧಾನಿ ಮೋದಿ ಪಂಚಾಯತ್ ಮಟ್ಟದ ಆಡಳಿತವನ್ನು ನಾಶ ಮಾಡುವ ಎಲ್ಲ ಅಧಿಕಾರವನ್ನು ಕೇಂದ್ರೀಕರಿಸಲು ಯತ್ನಿಸುತ್ತಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA)-2005ಅನ್ನು ಬದಲಾಯಿಸುವ ಮೂಲಕ ಕಾರ್ಮಿಕರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ನೀಡಲಾಗಿದ್ದ ಸಾಮಾಜಿಕ ಭದ್ರತೆಯನ್ನು ಕಿತ್ತುಕೊಳ್ಳುತ್ತಿದ್ದಾರೆ. ಬಡವರನ್ನು ಹಸಿವಿನಿಂದ ಕೊಲ್ಲಲು ಬಯಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮನರೇಗಾದಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವ ಮೂಲಕ ಪ್ರಧಾನಿ ಮತ್ತು ಬಿಜೆಪಿ ಸರ್ಕಾರ ಅವರಿಗೆ ಅಗೌರವ ತೋರಿಸಿದೆ. ಮಾತ್ರವಲ್ಲದೆ, ಅವರ ಸಿದ್ಧಾಂತವನ್ನು ಅಳಿಸಿಹಾಕಲು ಬಯಸಿದೆ. ಮನರೇಗಾಅನ್ನು ಬದಲಾಯಿಸುವ ಕ್ರಮವು ಬಡವರಿಗೆ ಒದಗಿಸಲಾದ ರಕ್ಷಣೆಗಳ ನಾಶಕ್ಕೆ ಕಾರಣವಾಗುತ್ತವೆ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ರೋಹಿತ್ ವೇಮುಲ ಕಾಯ್ದೆಯ ಉದ್ದೇಶವೇನು? ಸಮರ್ಪಕ ಅನುಷ್ಠಾನವಾಗುವುದೇ?
“ಕಾಂಗ್ರೆಸ್ ಪಕ್ಷವು ಸಾರ್ವಜನಿಕರನ್ನು ರಕ್ಷಿಸಲು ಕೆಲಸ ಮಾಡುತ್ತಿದ್ದರೆ, ಮೋದಿ ಸರ್ಕಾರ ಈ ದೇಶದ ಬಡ ಜನರಿಗೆ ನೀಡಲಾಗಿದ್ದ ಭದ್ರತೆಯನ್ನು ನಾಶಪಡಿಸಿದೆ. ದೇಶದ ಸಂಪತ್ತನ್ನು ಕೆಲವು ಕಾರ್ಪೊರೇಟ್‌ಗಳಿಗೆ ಮೋದಿ ತಿರುಗಿಸುತ್ತಿದ್ದಾರೆ. ಮನರೇಗಾವನ್ನು ಉಳಿಸಲು ಕಾರ್ಮಿಕರು ಮತ್ತು ಕಾರ್ಮಿಕರೊಂದಿಗೆ ಪಕ್ಷವು ದೃಢವಾಗಿ ನಿಲ್ಲುತ್ತದೆ ಮತ್ತು ರಾಷ್ಟ್ರವ್ಯಾಪಿ ಚಳುವಳಿ ಪ್ರಾರಂಭಿಸಿದೆ” ಎಂದು ತಿಳಿಸಿದ್ದಾರೆ.
“ಕಾರ್ಮಿಕರಿಗೆ ಮೀಸಲಾದ ಹಣವು ನೇರವಾಗಿ ಅಂಬಾನಿ, ಅದಾನಿ ಹಾಗೂ ಇತರ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಹೋಗುವಂತೆ ಮಾಡಲಾಗುತ್ತಿದೆ. ಅವರು ಇದನ್ನು ಬಹಿರಂಗವಾಗಿ ಮಾಡಲು ಸಾಧ್ಯವಾಗದ ಕಾರಣ, ಮನರೇಗಾವನ್ನು ಬದಲಿಸಿ, ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುತ್ತಿದ್ದಾರೆ. ಮನರೇಗಾದ ಕತ್ತು ಹಿಸುಕುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂವಿಧಾನವನ್ನು ರದ್ದುಗೊಳಿಸಲು, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಸಿದ್ಧಾಂತಗಳನ್ನು ಅಳಿಸಿಹಾಕಲು ಬಯಸುತ್ತಿವೆ. ಸ್ವಾತಂತ್ರ್ಯ ಪೂರ್ವದ ಪರಿಸ್ಥಿತಿಗೆ ಭಾರತವನ್ನು ಹಿಂದೊಯ್ಯಲು ಬಿಜೆಪಿ-ಆರ್‌ಎಸ್‌ಎಸ್ ಬಯಸಿವೆ. ಸ್ವಾತಂತ್ರ್ಯ ಪೂರ್ವದ ಪರಿಸ್ಥಿತಿಯಲ್ಲಿ ಜನರ ಭೂಮಿಯನ್ನು ಕಸಿದುಕೊಳ್ಳಬಹುದು, ಅವರ ಹಕ್ಕುಗಳನ್ನು ಕಸಿದುಕೊಳ್ಳಬಹುದು ಹಾಗೂ ಅವರನ್ನು ಹಸಿವಿಗೆ ದೂಡಬಹುದು. ಇಂತಹ ಶಕ್ತಿಗಳ ವಿರುದ್ಧ ಜನರು ಒಗ್ಗೂಡಬೇಕು” ಎಂದು ಕರೆಕೊಟ್ಟಿದ್ದಾರೆ.




