ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಜಾಗತಿಕ ಮಟ್ಟದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಅಮೆರಿಕವು ಇರಾನ್ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಡಿಸಿದ ಬೆನ್ನಲ್ಲೇ, ಭಾರತ ಮತ್ತು ಇತರ ಏಷ್ಯಾದ ತೈಲ ಸಂಸ್ಕರಣಾ ಕಂಪನಿಗಳು ಇರಾನ್‌ನಿಂದ ಕಚ್ಚಾ ತೈಲ ಖರೀದಿಸಲು ಮುಂದಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈಗಾಗಲೇ ಸಾಗಣೆಯಲ್ಲಿರುವ ಇರಾನ್ ತೈಲವನ್ನು ಖರೀದಿಸಲು ಟ್ರಂಪ್ ಆಡಳಿತವು 30 ದಿನಗಳ ವಿನಾಯಿತಿಯನ್ನು ನೀಡಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸನ್ ಶುಕ್ರವಾರ ತಿಳಿಸಿದ್ದಾರೆ. ಭಾರತೀಯ ತೈಲ ಕಂಪನಿಗಳು ಈ ಕುರಿತು ಸರ್ಕಾರದ ಮಾರ್ಗಸೂಚಿಗಳು ಮತ್ತು ವಾಷಿಂಗ್ಟನ್‌ನಿಂದ ಪಾವತಿ ನಿಯಮಗಳ ಸ್ಪಷ್ಟನೆಗಾಗಿ ಕಾಯುತ್ತಿವೆ. ಇದಕ್ಕೂ ಮುನ್ನ, ಅಮೆರಿಕ ನೀಡಿದ್ದ ಅಲ್ಪಾವಧಿಯ ವಿನಾಯಿತಿಯನ್ನು ಬಳಸಿಕೊಂಡು ಭಾರತವು ರಷ್ಯಾದ ತೈಲವನ್ನು ಕಾಯ್ದಿರಿಸಿತ್ತು.
ಮತ್ತೊಂದೆಡೆ, ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಯುದ್ಧ ಸಾರಿ ಮೂರು ವಾರಗಳು ಕಳೆಯುತ್ತಿದ್ದು, ಇದರ ಬಿಸಿ ದುಬೈನ ಸ್ಥಿರಾಸ್ತಿ (ರಿಯಲ್ ಎಸ್ಟೇಟ್) ಮಾರುಕಟ್ಟೆಗೆ ತಟ್ಟಲಾರಂಭಿಸಿದೆ. ವಹಿವಾಟು ಪ್ರಮಾಣದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಕೆಲವು ರಿಯಲ್ ಎಸ್ಟೇಟ್ ಏಜೆಂಟ್‌ಗಳು ಬೆಲೆ ಕಡಿತದ ವರದಿ ನೀಡುತ್ತಿದ್ದಾರೆ. ಇಸ್ರೇಲ್, ಅಮೆರಿಕದ ಸೇನಾ ನೆಲೆಗಳು ಮತ್ತು ಯುಎಇ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಮೇಲೆ ಇರಾನ್ ನಡೆಸಿದ ಪ್ರತಿದಾಳಿಗಳಿಂದಾಗಿ, ಜಾಗತಿಕ ಹೂಡಿಕೆದಾರರ ಪಾಲಿಗೆ ‘ಸುರಕ್ಷಿತ ತಾಣ’ ಎಂಬ ದುಬೈನ ಖ್ಯಾತಿಗೆ ಭಾರಿ ಧಕ್ಕೆಯಾಗಿದೆ.
ತೈಲ ಬೆಲೆ ಏರಿಕೆಯ ಭೀತಿಯು ವಿಮಾನಯಾನ ವಲಯವನ್ನೂ ತೀವ್ರವಾಗಿ ಕಾಡುತ್ತಿದೆ. ಯುನೈಟೆಡ್ ಏರ್‌ಲೈನ್ಸ್ ಸಿಇಒ ಸ್ಕಾಟ್ ಕಿರ್ಬಿ ಅವರು ತಮ್ಮ ಸಿಬ್ಬಂದಿಗೆ ಬರೆದ ಪತ್ರದಲ್ಲಿ,2027ರ ಅಂತ್ಯದವರೆಗೆ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಕ್ಕಿಂತ ಹೆಚ್ಚಿರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 175 ಡಾಲರ್ ವರೆಗೆ ತಲುಪುವ ಸಾಧ್ಯತೆಯ ಬಗ್ಗೆಯೂ ವಿಮಾನಯಾನ ಸಂಸ್ಥೆ ಎಚ್ಚರಿಕೆ ವಹಿಸಿದೆ. ಫೆಬ್ರವರಿ ಅಂತ್ಯದಿಂದ ವಿಮಾನಯಾನ ಇಂಧನ ಬೆಲೆಗಳು ಬಹುತೇಕ ದುಪ್ಪಟ್ಟಾಗಿದ್ದು, ಹೀಗೆಯೇ ಮುಂದುವರಿದರೆ ಸಂಸ್ಥೆಯ ವಾರ್ಷಿಕ ಇಂಧನ ವೆಚ್ಚವು ಹನ್ನೊಂದು ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಬಹುದು. ಈ ಹಿನ್ನೆಲೆಯಲ್ಲಿ ಕಡಿಮೆ ಲಾಭದಾಯಕ ಮಾರ್ಗಗಳನ್ನು ಕಡಿತಗೊಳಿಸಲು ಸಂಸ್ಥೆ ಯೋಜಿಸಿದ್ದು, ಟೆಲ್ ಅವಿವ್ ಮತ್ತು ದುಬೈಗೆ ವಿಮಾನ ಹಾರಾಟ ಸ್ಥಗಿತಗೊಳಿಸುವುದನ್ನು ಮುಂದುವರಿಸಲಿದೆ.
ಇದನ್ನು ಓದಿದ್ದೀರಾ? ಟ್ರಂಪ್‌ಗೆ ಚಿತ್ತಭ್ರಮೆಯೇ?; ಅಮೆರಿಕ ಅಧ್ಯಕ್ಷರ ಮಾನಸಿಕ ಆರೋಗ್ಯದ ಸುತ್ತ ಅನುಮಾನದ ಹುತ್ತ
ಈ ಎಲ್ಲಾ ಉದ್ವಿಗ್ನತೆಗಳ ನಡುವೆಯೂ, ಇರಾನ್ ಕೆಲವು ಸರಕು ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಸೀಮಿತ ಅವಕಾಶ ನೀಡಿದೆ. ಮಾರ್ಚ್ 2ರ ನಂತರ ಮೊದಲ ಬಾರಿಗೆ, ಗ್ರೀಕ್ ಒಡೆತನದ ಬೃಹತ್ ಹಡಗೊಂದು ತನ್ನ ಆಟೋಮ್ಯಾಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್ (AIS) ಆನ್ ಇಟ್ಟುಕೊಂಡೇ ಜಲಸಂಧಿ ದಾಟಲು ಇರಾನ್ ಅನುಮತಿ ನೀಡಿದೆ ಎಂದು ‘ಲಾಯ್ಡ್ಸ್ ಲಿಸ್ಟ್’ ಮತ್ತು ‘ಫೈನಾನ್ಷಿಯಲ್ ಟೈಮ್ಸ್’ ವರದಿ ಮಾಡಿವೆ. ಮಾರ್ಚ್ 15 ಮತ್ತು 16ರ ನಡುವೆ ಕನಿಷ್ಠ ಆರು ಹಡಗುಗಳು ಇರಾನ್‌ನ ಖುಜೆಸ್ತಾನ್ ಪ್ರಾಂತ್ಯದ ಖೊಮೇನಿ ಬಂದರಿನಲ್ಲಿ ಸರಕುಗಳನ್ನು ಇಳಿಸಿ, ಹಾರ್ಮುಜ್ ಜಲಸಂಧಿಯನ್ನು ದಾಟಿವೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿಯನ್ನು ಮರುತೆರೆಯಲು ಸಹಾಯ ಮಾಡಲು ವಿಶ್ವಸಂಸ್ಥೆ ಸಿದ್ಧವಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ. 2022ರಲ್ಲಿ ಕಪ್ಪು ಸಮುದ್ರದ ಮೂಲಕ ಉಕ್ರೇನಿಯನ್ ಧಾನ್ಯ ಸಾಗಣೆಗೆ ಮಾಡಿಕೊಂಡ ಒಪ್ಪಂದದ ಮಾದರಿಯಲ್ಲೇ, ಹಾರ್ಮುಜ್ ಜಲಸಂಧಿಯಲ್ಲೂ ಹಿಂದಿನಂತಹುದೇ ವಾತಾವರಣ ನಿರ್ಮಿಸಲು ಕೊಲ್ಲಿ ರಾಷ್ಟ್ರಗಳು ಮತ್ತು ಯುರೋಪಿಯನ್ ಕೌನ್ಸಿಲ್‌ನೊಂದಿಗೆ ವಿಶ್ವಸಂಸ್ಥೆಯು ಮಾತುಕತೆ ನಡೆಸುತ್ತಿದೆ ಎಂದು ಅವರು ‘ಪೊಲಿಟಿಕೊ’ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.





