ಮಿಜೋರಾಂ ರಾಜ್ಯವು ದೇಶದ ಶುಂಠಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವುದರಿಂದ ಶೀಘ್ರದಲ್ಲೇ ಭಾರತದ ಶುಂಟಿ ರಾಜಧಾನಿ ಎಂಬ ಸ್ಥಾನಮಾನ ಪಡೆಯಲಿದೆ.
ಸೋಮವಾರ ನವದೆಹಲಿಯಲ್ಲಿ ನಡೆದ ಸಮಾಲೋಚನಾಯಲ್ಲಿ ಸಭೆಯಲ್ಲಿ ಮಿಜೋರಾಂ ಅನ್ನು ‘ಭಾರತದ ಶುಂಠಿ ರಾಜಧಾನಿ’ ಎಂದು ಘೋಷಿಸಲು ನೀತಿ ಆಯೋಗ ಶಿಫಾರಸು ಮಾಡಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ನೀತಿ ಆಯೋಗ ಮತ್ತು ಮಿಜೋರಾಂ ಸರ್ಕಾರ ಜಂಟಿಯಾಗಿ ಆಯೋಜಿಸಿದ್ದವು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಲಾಲ್ದುಹೋಮ, ಕಳೆದ ಎರಡು ವರ್ಷಗಳಲ್ಲಿ ಮಿಜೋರಾಂ ಭಾರತದ ಪ್ರಮುಖ ಶುಂಠಿ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಶುಂಠಿ ಬೆಳೆಗಾರರು ಮತ್ತು ಹೂಡಿಕೆದಾರರನ್ನು ಬೆಂಬಲಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು, ಈಗ ಪ್ರತಿ ಕಿಲೋಗ್ರಾಂ ಶುಂಠಿಗೆ ಕನಿಷ್ಠ ₹50 ಬೆಂಬಲ ಬೆಲೆ ನೀಡುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಶುಂಠಿಯ ಜೊತೆಗೆ ಇತರ ಕೃಷಿ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳಲ್ಲಿಯೂ ಹೂಡಿಕೆ ಮಾಡಲು ರಾಜ್ಯ ಕೈಗಾರಿಕಾ–ಹೂಡಿಕೆ ನೀತಿಗಳನ್ನು ಸುಗಮಗೊಳಿಸಿರುವುದನ್ನು ಅವರು ವಿವರಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್ ಹಿತಕ್ಕಾಗಿ ಕಾರ್ಮಿಕರ ಹಕ್ಕುಗಳ ಹತ್ತಿಕ್ಕುತ್ತಿರುವ ಮೋದಿ
ಡಿಸೆಂಬರ್ 5–6 ರಂದು ಐಜ್ವಾಲ್‌ನಲ್ಲಿ ನಡೆಯಲಿರುವ ‘ಶುಂಠಿ ಖರೀದಿದಾರ–ಮಾರಾಟಗಾರ’ ಸಭೆಗೆ ಭಾಗವಹಿಸಲು ಅವರು ಹೂಡಿಕೆದಾರರನ್ನು ಸಿಎಂ ಆಹ್ವಾನಿಸಿದರು.
60 ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ವಲಯದ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ರೋಹಿತ್ ಕುಮಾರ್, ಎಪೆಡಾ ಅಧ್ಯಕ್ಷ ಅಭಿಷೇಕ್ ದೇವ್, ಆಹಾರ ಸಂಸ್ಕರಣಾ ಕಾರ್ಯದರ್ಶಿ ಎ.ಪಿ. ದಾಸ್ ಜೋಶಿ, ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಹಾಗೂ ಇತರ ಗಣ್ಯರು ಸಭೆಯನ್ನುದ್ದೇಶಿಸಿ ಮಾತನಾಡಿದರು.





