MNREGA | ಹೇ ರಾಮ್… ಈ ಸರ್ಕಾರ ಎಷ್ಟೊಂದು ದಯಾಮಯಿ!

Date:

ಈ ಕಾಯ್ದೆಗೆ ರಾಮ್‍ಜಿ ಎಂದು ಹೆಸರು ಬರುವಂತೆ ಮಾಡಲು ಪದಗಳನ್ನು ಪ್ರಯಾಸದಿಂದ ಜೋಡಿಸಿದ್ದು, ಅದನ್ನು ಹೇಳಲು ಸುಲಭವಾಗಿಲ್ಲ. ಆದರೆ, ರಾಮ್‍ಜಿ ಎಂದು ಸುಲಭವಾಗಿ ಹೇಳಬಹುದಾಗಿದ್ದು, ಉದ್ಯೋಗದ ಹಕ್ಕನ್ನು ಕಸಿದುಕೊಂಡರೂ ಪರವಾಗಿಲ್ಲ, ಬಡವರು ನಿತ್ಯವೂ ರಾಮನ ಜಪ ಮಾಡುವುದರಿಂದ ಪುಣ್ಯ ಗಳಿಸಬಹುದೆಂದು ಸರ್ಕಾರದ ಅಲೋಚನೆ ಇರಬಹುದಾಗಿದೆ; ಹೇ ರಾಮ್ ಈ ಸರ್ಕಾರ ಎಷ್ಟೊಂದು ದಯಾಮಯಿ!

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯು ಉದ್ಯೋಗ ಖಾತ್ರಿ ಯೋಜನೆಯಾಗಿ ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕ ನೂರು ದಿನಗಳ ಉದ್ಯೋಗ ಒದಗಿಸುವ ಗ್ಯಾರಂಟಿ ನೀಡಿದೆ. ಅಗತ್ಯವಿದ್ದಾಗ, ಈ ಉದ್ಯೋಗವನ್ನು ಬೇಡಿಕೆ ಆಧಾರದಲ್ಲಿ ಪಡೆಯುವ ಸಂವಿಧಾನಿಕ ಹಕ್ಕನ್ನು ಕಾಯ್ದೆಯು ಗ್ರಾಮೀಣ ಕುಟುಂಬಗಳಿಗೆ ಒದಗಿಸಿರುತ್ತದೆ.
ಕೇಂದ್ರ ಸರ್ಕಾರವು ಈ ಉದ್ಯೋಗ ಖಾತ್ರಿ ಕಾಯ್ದೆಯ ಬದಲಾಗಿ ಹೊಸ ಮಸೂದೆಯನ್ನು ಸಂಸತ್ತಿನಲ್ಲಿ 16 ಡಿಸೆಂಬರ್ 2025ರಂದು ಮಂಡಿಸಿದ್ದು, ವಿರೋಧ ಪಕ್ಷಗಳು ಅದಕ್ಕೆ ಭಾರಿ ವಿರೋಧವನ್ನು ವ್ಯಕ್ತಪಡಿಸಿವೆ. ಮಹಾತ್ಮ ಗಾಂಧಿ ಹೆಸರನ್ನು ಹೊಂದಿರುವ ಈ ಕಾನೂನಿನ ಹೆಸರನ್ನು ಬದಲಿಸಿ ‘ವಿಬಿ-ಜಿ ರಾಮ್-ಜಿ’ ಎಂಬ ಹೆಸರನ್ನು ಈ ಹೊಸ ಮಸೂದೆಗೆ ನೀಡಲಾಗಿದೆ. ಇದನ್ನು ಬಿಡಿಸಿದಾಗ “ವಿಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)” ಎಂದಾಗುತ್ತದೆ. ಈ ಕಾಯ್ದೆಗೆ ರಾಮ್‍ಜಿ ಎಂದು ಹೆಸರು ಬರುವಂತೆ ಮಾಡಲು ಪದಗಳನ್ನು ಪ್ರಯಾಸದಿಂದ ಜೋಡಿಸಿದ್ದು, ಅದನ್ನು ಹೇಳಲು ಸುಲಭವಾಗಿಲ್ಲ. ಆದರೆ, ರಾಮ್‍ಜಿ ಎಂದು ಸುಲಭವಾಗಿ ಹೇಳಬಹುದಾಗಿದ್ದು, ಉದ್ಯೋಗದ ಹಕ್ಕನ್ನು ಕಸಿದುಕೊಂಡರೂ ಪರವಾಗಿಲ್ಲ, ಬಡವರು ನಿತ್ಯವೂ ರಾಮನ ಜಪ ಮಾಡುವುದರಿಂದ ಪುಣ್ಯ ಗಳಿಸಬಹುದೆಂದು ಸರ್ಕಾರದ ಅಲೋಚನೆ ಇರಬಹುದಾಗಿದೆ; ಹೇ ರಾಮ್ ಈ ಸರ್ಕಾರ ಎಷ್ಟೊಂದು ದಯಾಮಯಿ!

ಸುಮಾರು 2005 ರಿಂದ 2010ರ ಐದು ವರ್ಷಗಳ ಅವಧಿಯಲ್ಲಿ ಹಲವು ಸಂಸ್ಥೆಗಳ ಮತ್ತು ವ್ಯಕ್ತಿಗಳ ನಿರಂತರ ಹೋರಾಟದ ಫಲವಾಗಿ ಮೂರು ಮುಖ್ಯ ಜನಪರ ಕಾನೂನುಗಳು ಹೊರಬಂದವು; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ – 2005, ಮಾಹಿತಿ ಹಕ್ಕು ಕಾಯ್ದೆ -2005, ಹಾಗೂ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಅಧಿನಿಯಮ -2009. ಈ ಮೂರು ಕಾಯ್ದೆಗಳು ಉದ್ಯೋಗ, ಮಾಹಿತಿ ಮತ್ತು ಶಿಕ್ಷಣವನ್ನು ಜನರ ಹಕ್ಕಾಗಿ ಪರಿಗಣಿಸಿದ್ದಲ್ಲದೆ, ಎಲ್ಲರನ್ನು ಅಭಿವೃದ್ಧಿಯಲ್ಲಿ ಒಳಗೊಳ್ಳುವಂತೆ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಜನರು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಿದವು. ಈ ಕಾಯ್ದೆಗಳು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿದ್ದಲ್ಲದೆ, ಆಡಳಿತದಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸಲು ಸಹಕಾರಿಯಾದವು. ಇಂತಹ ಪ್ರಗತಿಪರ ಕಾಯ್ದೆಗಳ ಮೇಲೆ ಸರ್ಕಾರಗಳು ಉದ್ದೇಶಪೂರ್ವಕ ಪ್ರಹಾರಗಳನ್ನು ನಡೆಸುವ ಮೂಲಕ ಅವುಗಳು ತಾವಾಗಿಯೇ ನಿಷ್ಕ್ರಿಯವಾಗುವಂತೆ ಮಾಡುವ ವ್ಯವಸ್ಥಿತ ಸಂಚಾಗಿದೆ. ಇಂತಹ ಸಂಚಿನಲ್ಲಿ ಯಾವ ಸರ್ಕಾರಗಳೂ ಸಹ ಹಿಂದೆ ಬಿದ್ದಿಲ್ಲ. ಉದಾಹರಣೆಗೆ, ಕರ್ನಾಟಕದಲ್ಲಿನ ಕಾಂಗ್ರೆಸ್‌ ಸರ್ಕಾರವು ದೊಡ್ಡ ಶಾಲೆಗಳೊಂದಿಗೆ ವಿಲೀನತೆ ಎಂಬ ಹೆಸರಿನಲ್ಲಿ ಸಣ್ಣ ಸರ್ಕಾರಿ ಶಾಲೆಗಳನ್ನು ಮುಚ್ಚಿ ಮಕ್ಕಳು ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕಿನಿಂದ ವಂಚಿತರಾಗುವಂತೆ ಮಾಡಲಾಗುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯಂತೂ ಯಾವುದೇ ಸರ್ಕಾರಕ್ಕಾಗಲಿ ಮತ್ತದರ ಅಧಿಕಾರಿ ವರ್ಗಕ್ಕೆ ಬೇಕಿಲ್ಲವಾಗಿದ್ದು, ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದಂತೆ ಮಾಡಲಾಗಿದ್ದರೆ, ಕೇಂದ್ರದ ಬಿಜೆಪಿ ಸರ್ಕಾರವು ಮುಂದುವರೆದು ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ ಅದನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಈಗ, ಇದೇ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ರದ್ದುಗೊಳಿಸುವ ಸಲುವಾಗಿ ಈ ‘ವಿಬಿ-ಜಿ ರಾಮ್-ಜಿ’ ಮಸೂದೆ ಮಂಡಿಸುವ ಮೂಲಕ ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುವ ಪ್ರಯತ್ನ ನಡೆಸುತ್ತಿದೆ.

MNREGA

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಜನರು ಅದರಲ್ಲೂ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಗ್ರಾಮೀಣ ಬದುಕಿನ ಜೀವನಾಡಿಯಾಗಿದೆ. ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾಗಿದ್ದು, ಕೋವಿಡ್ ಸಮಯದಲ್ಲಿ ಹಳ್ಳಿಗರನ್ನು (ಪಟ್ಟಣದಿಂದ ಹಳ್ಳಿಗಳಿಗೆ ಮರಳಿದವರಿಗೂ ಸಹ) ಕೈ ಹಿಡಿದಿದ್ದು ಎಲ್ಲೆಡೆ ದಾಖಲಾಗಿದೆ. ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಯಲ್ಲಿಯೂ ಇದು ತನ್ನ ಪ್ರಭಾವ ಬೀರಿದೆಯೆಂದು ತಜ್ಞರ ವರದಿಗಳು ತಿಳಿಸುತ್ತವೆ. ಈ ಎಲ್ಲಾ ಉತ್ತಮತೆಗಳ ನಡುವೆ, ಹಲವು ಆಡಳಿತಾತ್ಮಕ ಸಮಸ್ಯೆಗಳನ್ನು ಮತ್ತು ಭ್ರಷ್ಟಾಚಾರವನ್ನು ಇದು ಒಳಗೊಂಡಿರುವುದನ್ನು ಮರೆಮಾಚುವಂತಿಲ್ಲ. ಇದರ ಸುಧಾರಣೆಯ ಅಗತ್ಯವಿದ್ದು, ಕೆಲವು ಆಡಳಿತಾತ್ಮಕ ಕ್ರಮಗಳ ಜೊತೆಗೆ ಸಣ್ಣ ಪುಟ್ಟ ಕಾನೂನು ತಿದ್ದುಪಡಿಗಳನ್ನು ಸಮಾಲೋಚಿಸಿ ಅಳವಡಿಸಿಕೊಳ್ಳಬೇಕಾಗಿದೆ. ಮಾನ್ಯ ಪ್ರಧಾನಮಂತ್ರಿಗಳು ಈ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರದ ವಿಫಲತೆಯ ಸ್ಮಾರಕವಾಗಿದ್ದು, ಇದೊಂದು ಗುಂಡಿ ತೊಡುವ ಯೋಜನೆಯಾಗಿದೆ ಎಂದು ಟೀಕಿಸಿದ್ದಾರೆ. ಹಾಗಿದ್ದಾಗಿಯೂ, ಹೆಸರು ಬದಲಾಯಿಸಿ, ಕೆಲವು ಬದಲಾವಣೆಗಳೊಂದಿಗೆ ಅದೇ ಗುಂಡಿ ತೋಡುವ ವಿಫಲತೆಯ ಸ್ಮಾರಕವನ್ನು ಉಳಿಸಿಕೊಳ್ಳಲು ಬಿಜೆಪಿ ಸರ್ಕಾರವು ಈ ಹೊಸ ಮಸೂದೆಯನ್ನು ಮಂಡಿಸಿದೆ ಎನ್ನುವುದೇ ಸೋಜಿಗ.

ಕ್ರಾಂತಿಕಾರಕ ಸುಧಾರಣೆ ತರುವಂತಹ ಬದಲಾವಣೆಗಳೇನೂ ಈ ಮಸೂದೆ ಹೊಂದಿಲ್ಲವಾದರೂ, ಆ ಕಾಯ್ದೆಯ ಮೂಲಭೂತ ಆಶಯಕ್ಕೆ ಧಕ್ಕೆ ತರುವಂತಹ ಕೆಲವು ಆತಂಕಕಾರಿ ಬದಲಾವಣೆಗಳನ್ನು ಹೊಂದಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಕಾಯ್ದೆಯ ಹೆಸರು ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯ ಅಗತ್ಯವೇನಿತ್ತು ಎಂಬುದು ಪ್ರಮುಖವಲ್ಲದಿದ್ದರೂ, ಪ್ರಸ್ತುತದ ರಾಜಕೀಯ ಆಗುಹೋಗುಗಳ ಹಿನ್ನೆಲೆಯಲ್ಲಿ ಅದರ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಗ್ರಾಮ-ಸ್ವರಾಜ್ ವಿಚಾರಧಾರೆ ಹೊಂದಿದ್ದ ಮಹಾತ್ಮ ಗಾಂಧಿಯವರ ಹೆಸರು ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಗೆ ಬಹು ಸೂಕ್ತವಾಗಿದ್ದರೂ, ಅದರ ಬದಲಾವಣೆಯ ಹಿಂದಿನ ಮರ್ಮವೇನು? ಸರ್ವ ಧರ್ಮಗಳ ಜನರೂ ಸಹಜೀವನ ನಡೆಸಬೇಕೆಂದು ಬಯಸುತ್ತಿದ್ದ ಗಾಂಧೀಜಿ ಎಂದೊಬ್ಬ ರಾಜಕೀಯ ಸಂತನಿದ್ದನೆಂದು ಮುಂದಿನ ಪೀಳಿಗೆಗಳಿಗೆ ಗೊತ್ತಾಗದಂತೆ ಮಾಡುವ ತಂತ್ರವೇ? ಅಥವಾ ಕೋವಿಡ್ ಸಮಯದಲ್ಲಿ ಕೋಟ್ಯಂತರ ಜನರಿಗೆ ಕೆಲಸ ನೀಡಿದ ಈ ಯೋಜನೆಯ ಯಶಸ್ಸು ತಮ್ಮದಾಗಿಲ್ಲವೆಂದೆ? ಹಳೆ ಯೋಜನೆಗಳಿಗೆ ಹೊಸ ಹೆಸರಿಡುವ ಪ್ರವೃತ್ತಿಯನ್ನು ಎಲ್ಲಾ ಸರ್ಕಾರಗಳೂ ಮಾಡಿವೆಯಾದರೂ, ಬಿಜೆಪಿ ಸರ್ಕಾರ ಅದರಲ್ಲಿ ಅಗ್ರಗಣ್ಯ ಎಂಬುದಕ್ಕೆ ಉದಾಹರಣೆಯ ಪಟ್ಟಿ ಬಲು ಉದ್ದವಿದೆ. ಹೇ ರಾಮ್, ಈ ಮಸೂದೆಗೆ ಸದ್ಯ ನಿನ್ನ ಹೆಸರಿಟ್ಟರು, ಗೋಡ್ಸೆಯ ಹೆಸರಿಡಲಿಲ್ಲವಲ್ಲ ಎಂಬುದೇ ಸಮಾಧಾನ.

ಹೆಸರಲ್ಲೇನಿದೆ ಎಂದು ಉದಾಸೀನ ಮಾಡಬಹುದಿತ್ತೇನೋ. ಆದರೆ ಉದ್ಯೋಗ ಖಾತ್ರಿ ಕಾಯ್ದೆಯ ಆತ್ಮವಾದ ‘ಉದ್ಯೋಗದ ಹಕ್ಕು’ ಎಂಬ ಗ್ಯಾರಂಟಿಯ ಬುಡವನ್ನೇ ಅಲುಗಾಡಿಸುತ್ತದೆ ಈ ಹೊಸ ಮಸೂದೆಯು. ಈ ಕಾಯ್ದೆಯಲ್ಲಿದ್ದ ‘ಬೇಡಿಕೆ-ಆಧಾರಿತ ಮತ್ತು ಹಕ್ಕು-ಸಂಬಂಧಿತವಾದ’ ವಿಚಾರವನ್ನು ಈಗ ‘ಯೋಜಿತ, ಮೂಲಸೌಕರ್ಯ-ಸಂಬಂದಿತ ಖಾತ್ರಿ’ ಎಂದು ಮಾಡಲಾಗಿದ್ದು, ಇದು ಉದ್ಯೋಗ ಖಾತ್ರಿ ಕಾನೂನಿನ ಸ್ವರೂಪ ಮತ್ತು ಪರಿಣಾಮಕಾರಿತ್ವವನ್ನು ಮೂಲಭೂತವಾಗಿ ಬದಲಾಯಿಸುತ್ತದೆ. ಉದಾಹರಣೆಗೆ, ಹೊಸೂರು ಎಂಬ ಗ್ರಾಮದಲ್ಲಿ ಬರ ಬಂದ ಕಾರಣ ಜನರಿಗೆ ಕೆಲಸವಿಲ್ಲದಂತಾಗಿದೆ ಎಂದುಕೊಳ್ಳೋಣ. ಆಗ, ಆ ಹಳ್ಳಿಯ ಜನರು ಪಂಚಾಯಿತಿಯಲ್ಲಿ ತಮಗೆ ದೊರೆಯಬೇಕಿದ್ದ ನೂರು ದಿನಗಳ ಕೆಲಸವನ್ನು ಪಡೆಯಬಹುದು. ಆದರೆ, ಹೊಸ ಮಸೂದೆಯ ಪ್ರಕಾರ, ಈ ಅವಧಿಯಲ್ಲಿ ಹೊಸೂರು ಪಂಚಾಯಿತಿಯು ಕೇಂದ್ರದ ಯೋಜನೆಯಲ್ಲಿ ಸೇರಿರದಿದ್ದರೆ, ಅಥವಾ ಈಗಾಗಲೇ ಯೋಜಿತ ಕೆಲಸಗಳು ಮುಗಿದಿದ್ದಲ್ಲಿ, ಹೊಸೂರಿನ ಜನರು ಅಗತ್ಯದ ಸಮಯದಲ್ಲಿ ತಮ್ಮ ನೂರು ದಿನಗಳ ಕೆಲಸವನ್ನು ಪಡೆಯುವಂತಿಲ್ಲ. ಅಂದರೆ, ಜನರು ತಮ್ಮ ಉದ್ಯೋಗದ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈಗ ಶೇ.90 ರಷ್ಟು ಧನಸಹಾಯವನ್ನು ಕೇಂದ್ರ ಸರ್ಕಾರವೂ, ಶೇ.10ರಷ್ಟು ರಾಜ್ಯ ಸರ್ಕಾರವು ಭರಿಸುತ್ತಿದೆ. ಹೊಸ ಮಸೂದೆಯಲ್ಲಿ ಶೇ.60ನ್ನು ಕೇಂದ್ರವು ಮತ್ತು ಶೇ.40ರಷ್ಟು ಭಾಗವನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗುತ್ತದೆ. (ವಿಶೇಷ ಸಂದರ್ಭದ ಕೆಲ ರಾಜ್ಯಗಳಿಗೆ ರಿಯಾಯಿತಿ ಇದೆ). ಈಗಾಗಲೇ ರಾಜ್ಯ ಸರ್ಕಾರಗಳು, ಅದರಲ್ಲೂ ದಕ್ಷಿಣ ರಾಜ್ಯಗಳು ಮತ್ತು ಕೆಲವು ಉತ್ತರದ ರಾಜ್ಯಗಳು ತಮ್ಮ ತೆರಿಗೆಯ ಹೆಚ್ಚಿನ ಭಾಗವನ್ನು ಕೇಂದ್ರಕ್ಕೆ ನೀಡುತ್ತಿದ್ದು, ಹಣದ ಕೊರತೆಯಿಂದ ಬಳಲುತ್ತಿವೆ. ಇಂತಹ ಸಂದರ್ಭದಲ್ಲಿ ಶೇ.40ರಷ್ಟು ಭಾರವನ್ನು ರಾಜ್ಯ ಸರ್ಕಾರದ ಮೇಲೆ ಹೇರುತ್ತಿರುವುದು ನ್ಯಾಯವಲ್ಲ. ಅನೇಕ ರಾಜ್ಯ ಸರ್ಕಾರಗಳು ತಮ್ಮ ಭಾಗವನ್ನು ಭರಿಸುವ ಸಾಧ್ಯತೆ ಇಲ್ಲವಾಗಿದ್ದು, ಅದರ ಪರಿಣಾಮವಾಗಿ ಈ ಕಾಯ್ದೆಯು ತನ್ನ ಅಸ್ತಿತ್ವವನ್ನು ಕಳೆದುಕೊಂಡು ನಿಷ್ಕ್ರಿಯವಾಗಬಹುದು.

ಈಗಿನ ವಾರ್ಷಿಕ ನೂರು ದಿನಗಳ ಉದ್ಯೋಗವನ್ನು 125 ದಿನಗಳಿಗೆ ಹೆಚ್ಚಿಸಲು ಹಾಗೂ ವಾರಕ್ಕೊಮ್ಮೆ ವೇತನ ನೀಡುವ ಪ್ರಸ್ತಾಪ ಮಾಡಲಾಗಿದೆ. ಇದು ಉತ್ತಮ ಬದಲಾವಣೆ ಆಗಿದೆ. ಆದರೆ, ತಜ್ಞರ ಪ್ರಕಾರ ವೇತನ ಹೆಚ್ಚಿಸುವುದು ಇದಕ್ಕಿಂತ ಮುಖ್ಯವಾದ ಅವಶ್ಯಕತೆಯಾಗಿದೆ. ಅಲ್ಲದೆ, ಶೇ.40ರಷ್ಟು ಧನಸಹಾಯವನ್ನು ರಾಜ್ಯವು ನೀಡಬೇಕಾದ ಕಾರಣ, ಇದು ರಾಜ್ಯ ಸರ್ಕಾರಗಳ ಭಾರವನ್ನು ಹೆಚ್ಚಿಸುತ್ತದೆಯೇ ಹೊರತು, ಕೇಂದ್ರದ ಹೊರೆ ಹೆಚ್ಚೇನೂ ಆಗುವುದಿಲ್ಲ. ಈಗಾಗಲೇ ಇರುವ 100 ದಿನಗಳ ಉದ್ಯೋಗ ಕಲ್ಪಿಸಲು ಕೇಂದ್ರಕ್ಕೆ ಸಾಧ್ಯವಾಗದೆ, ಹಣ ಬಿಡುಗಡೆಯ ವಿಳಂಬವು ಮೀತಿ ಮೀರಿದ ಪರಿಸ್ಥಿತಿ ಇರುವಾಗ ಹೆಚ್ಚಿನ 25 ದಿನಗಳಿಗೆ ಕೇಂದ್ರವು ಹಣ ನಿಗದಿ ಪಡಿಸುತ್ತದೆಂದು ನಂಬಲು ಕಷ್ಟ. ಬಹುಶಃ ಆ ಹೊಣೆಯನ್ನೂ ಸಹ ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಬಹುದು. ಅಂತೆಯೇ ಪ್ರತಿವಾರ ವೇತನ ನೀಡುವ ಪ್ರಸ್ತಾಪವೂ ಸಹ ಒಳ್ಳೆಯದಿದ್ದರೂ, ಹಿಂದಿನ ಅನುಭವಗಳು ಅದರ ಅನುಷ್ಠಾನತೆಯ ಬಗ್ಗೆ ಸಂಶಯ ಮೂಡಿಸುತ್ತವೆ.

ಪ್ರಸ್ತುತ, ವರ್ಷದ ಎಲ್ಲಾ ದಿನಗಳಲ್ಲಿಯೂ ಪಂಚಾಯಿತಿಗಳು ಉದ್ಯೋಗ ನೀಡಬಹುದಾಗಿದೆ. ಆದರೆ, ಹೊಸ ಮಸೂದೆ ಪ್ರಕಾರ ಕೃಷಿ ಕೆಲಸಗಳು ಇರುವಾಗ ಅಂದರೆ ಕಟಾವು ಕಾಲದಲ್ಲಿ 60 ದಿನಗಳ ಕಾಲ ಉದ್ಯೋಗಗಳನ್ನು ನಿಲ್ಲಿಸಬೇಕೆಂದು ಮಸೂದೆ ಹೇಳಿದೆ. ಅಂದರೆ ಕೃಷಿ ಕೆಲಸಗಳಿಗೆ ಕೂಲಿಕಾರರು ಸಿಗಲಿ ಎಂಬುದು ಸರಿಯಾದ ಅಲೋಚನೆ ನಿಜ. ಆದರೆ, ಸದ್ಯದಲ್ಲಿ ಭೂರಹಿತ ಕೂಲಿಕಾರರಿಗೆ ಉದ್ಯೋಗ ಖಾತ್ರಿಯಡಿ ಕನಿಷ್ಠ ವೇತನ ದೊರೆಯುವ ಕಾರಣ ಕೃಷಿ ವೇತನವೂ ಸಹ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿದೆ. ಮಸೂದೆ ಪ್ರಕಾರ, ಕಟಾವು ಸಂದರ್ಭದಲ್ಲಿ ಉದ್ಯೋಗ ಖಾತ್ರಿಯನ್ನು ನಿಲ್ಲಿಸಿರುವ ಕಾರಣ ಮತ್ತೆ ಕೃಷಿ ವೇತನದ ದರಗಳು ಕಡಿಮೆಯಾಗುವ ಸಂಭವ ಹೆಚ್ಚಿದೆ ಅನ್ನುವುದು ಅನೇಕರ ಕಳಕಳಿಯಾಗಿದೆ.

ಈಗಿರುವ ವ್ಯವಸ್ಥೆಯಲ್ಲಿ ಕೆಲಸಗಳು ಸ್ಥಳೀಯ ಅವಶ್ಯಕತೆಗಳಿಗೆ ತಕ್ಕಂತೆ ವಿಶಾಲ ಪಟ್ಟಿಯನ್ನು ಹೊಂದಿರುವ ಕಾರಣ ಎಲ್ಲರೂ ತೊಡಗಿಕೊಳ್ಳಲು ಉದ್ಯೋಗಗಳು ದೊರೆಯುತ್ತವೆ. ಆದರೆ, ಹೊಸ ಮಸೂದೆಯಡಿ, ಇದನ್ನು ನಾಲ್ಕು ಮುಖ್ಯ ಭಾಗಗಳಾಗಿ ವಿಂಗಡಿಸಿದ್ದು, ನೀಡುವ ಕೆಲಸಗಳು ಕೇಂದ್ರವು ನಿರ್ಣಯಿಸುವ ಗ್ರಾಮ ಪಂಚಾಯಿತಿಯ ವಿಕ್ಷಿತ್ ಯೋಜನೆಯಡಿ ಗುರುತಿಸಿರುವ ಕೆಲಸಗಳ ಮಿತಿಯೊಳಗೆ ಇರಬೇಕಾಗುತ್ತದೆ. ಲೇಖಕಿಯ ಅನುಭವದ ಪ್ರಕಾರ, ಕೇವಲ 500 ಹೆಕ್ಟರ್ ಭೂಮಿಯ ಕಿರು ಜಲಾನಯನ ಪ್ರದೇಶದ ವಾರ್ಷಿಕ ಯೋಜನೆಯನ್ನು ಅಲ್ಲಿನ ಜನರ ಸಹಭಾಗಿತ್ವದಲ್ಲಿಯೇ ಮಾಡಲಾಗುತ್ತಿತ್ತು. ಅಷ್ಟಾದರೂ ಅದನ್ನು ಅನುಷ್ಠಾನಗೊಳಿಸುವಾಗ ವಾಸ್ತವ ಕಾರಣಗಳಿಂದ ಅನೇಕ ಸಂದರ್ಭಗಳಲ್ಲಿ ಚಟುವಟಿಕೆಗಳನ್ನು ಬದಲಾಯಿಸುವ ಅನಿವಾರ್ಯತೆ ಉಂಟಾಗುತಿತ್ತು. ಇಂತಹ ಅತಿ ಸಣ್ಣ ಮಟ್ಟದ ಯೋಜನೆಗಳಲ್ಲಿಯೇ ಬದಲಾವಣೆಗಳು ಇರುವಾಗ, ರಾಷ್ಟ್ರಮಟ್ಟದಿಂದ ಕೆಳ ಹಂತಕ್ಕೆ ಹರಿದ ಯೋಜನೆಗಳು ಎಂದಿಗೂ ಸ್ಥಳೀಯತೆಗೆ ಹೊಂದಿಕೆಯಾಗುವುದಿಲ್ಲ. ಕಳೆದ ಸುಮಾರು ಮೂರು ದಶಕಗಳಿಂದ ತಳಮಟ್ಟದಲ್ಲಿ ಜನ ಸಹಭಾಗಿತ್ವದೊಂದಿಗೆ ತಯಾರಾಗುವ ಕಿರು ಯೋಜನೆಯ ಪರಿಕಲ್ಪನೆಗಳು ಅಭಿವೃದ್ಧಿಗೊಂಡು, ಅವು ಮೇಲಿನ ಹಂತದಲ್ಲಿ ಕ್ರೂಢೀಕೃತಗೊಳ್ಳುತ್ತಿರುವ ಪ್ರಕ್ರಿಯೆಗಳನ್ನು ಸರ್ಕಾರವೂ ಸಹ ಒಪ್ಪಿಕೊಳ್ಳುತ್ತಿದೆ. ಈ ವಿಕೇಂದ್ರೀಕರಣ ಮಾದರಿಯು ಗಟ್ಟಿಗೊಳ್ಳುತ್ತಿರುವ ಸಂದರ್ಭದಲ್ಲಿ ಮತ್ತೇ 80ರ ದಶಕದ ಹಿಂದಿನಂತೆ ಮೇಲಿನಿಂದ ತಳಕ್ಕೆ ಹರಿದು ಬರುವ ಕೇಂದ್ರಿಕೃತ ವ್ಯವಸ್ಥೆಗೆ ಮರಳುತ್ತಿರುವುದು ದುರಂತವಲ್ಲದೆ ಮತ್ತೇನು? ಹೇ ರಾಮ್ ಈ ಸರ್ಕಾರವು ಎಷ್ಟೊಂದು ಕರಣಾಮಯಿ, ಜನರಿಗೆ ಏನು ಬೇಕೆಂದು ತಾನೇ ಯೋಚಿಸಿ, ನಮ್ಮನ್ನು ಕೈಹಿಡಿದು ನಡೆಸಲು ಮುಂದಾಗಿದೆ!!!

ಎನ್.ಆರ್.ಇ.ಜಿ.ಎ ಸಂಘರ್ಷ ಮೋರ್ಚಾದ ಜೀನ್ ಡ್ರೇಜ್‍ರವರು ವೈಯರ್ ಯೂಟ್ಯೂಬ್‍ಗೆ ನೀಡಿದ ತಮ್ಮ ಸಂದರ್ಶನದಲ್ಲಿ ಹೀಗೆ ಹೇಳುತ್ತಾರೆ. ಈ ಮಸೂದೆಯಲ್ಲಿ ಕೇಂದ್ರವು ತನಗೆ ಬೇಕಾದ ಸಮಯದಲ್ಲಿ ಮತ್ತು ಬೇಕಾದ ರಾಜ್ಯಗಳಿಗೆ /ಸ್ಥಳಗಳಿಗೆ ಅನ್ವಯಿಸಬಹುದಾದ ಸ್ವ-ವಿವೇಚನಾ ಅಥವಾ ಸ್ವಿಚ್ ಆಫ್ (ಬೇಡವಾದಾಗ ನಿಲ್ಲಿಸುವ, ಬೇಕಾದಾಗ ಚಾಲ್ತಿಗೆ ತರುವ) ಅಧಿಕಾರವನ್ನು ಬಳಸಬಹುದಾಗಿದೆ. ಕೇಂದ್ರವು ಈ ಅಧಿಕಾರವನ್ನು ಯಾವಾಗ ಹೇಗೆ ಬೇಕಾದರೂ ಬಳಸಿಕೊಳ್ಳಬಹುದಾಗಿದೆ. ಉದಾಹರಣೆ: ವೆಸ್ಟ್ ಬೆಂಗಾಲ್ ರಾಜ್ಯಕ್ಕೆ 2022 ರಿಂದ ಕೇಂದ್ರವು ಉದ್ಯೋಗ ಖಾತ್ರಿ ಹಣ ಬಿಡುಗಡೆ ಮಾಡದೆ ಇದ್ದಿದ್ದು). ವೇತನ ನಿಗದಿ, ಅನುಷ್ಠಾನವು ಯಾವ ರಾಜ್ಯಗಳಲ್ಲಿ, ಇಡೀ ರಾಜ್ಯದಲ್ಲಿಯೇ ಅಥವಾ ಅಲ್ಲಿನ ಕೆಲ ಭಾಗಗಳಲ್ಲಿ ಮಾತ್ರವೇ, ಯಾವ ಸಮಯದಲ್ಲಿ, ಮತ್ತು ಯಾವ ರಾಜ್ಯಗಳಿಗೆ ಎಷ್ಟು ಅನುದಾನ ಇತ್ಯಾದಿಗಳು ಕೇಂದ್ರದಿಂದ ನಿರ್ಧರಿತವಾಗಲಿದೆ. ಅದೇ ವೇಳೆಗೆ ಕೇಂದ್ರವು ತನ್ನೆಲ್ಲ ಬಾಧ್ಯತೆಗಳನ್ನು ಅಂದರೆ ಉದ್ಯೋಗ ಒದಗಿಸುವ, ಸಮಯಕ್ಕೆ ಸರಿಯಾಗಿ ವೇತನ ನೀಡುವ, ವಿಳಂಬಕ್ಕೆ ಪರಿಹಾರ ಒದಗಿಸುವಂತಹ ಹೊಣೆಗಾರಿಗಳನ್ನು ರಾಜ್ಯಕ್ಕೆ ವರ್ಗಾಯಿಸುವ ಸಾಧ್ಯತೆ ಇರಬಹುದು. ಈ ಸ್ವ-ವಿವೇಚನಾ ಅಧಿಕಾರವು ಉದ್ಯೋಗ ಗ್ಯಾರಂಟಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ. ಮತ್ತು ಇದು ಹೇಗೆಂದರೆ ‘ನಾನು ಉದ್ಯೋಗದ ಗ್ಯಾರಂಟಿ ನೀಡುತ್ತೇನೆ, ಆದರೆ ಈ ಗ್ಯಾರಂಟಿಯನ್ನು ಕಾರ್ಯರೂಪಕ್ಕೆ ತರುತ್ತೇನೆಂಬ ಗ್ಯಾರಂಟಿ ಕೊಡುವುದಿಲ್ಲ’ ಎಂಬಂತಿದೆ ಈ ಸ್ವಿಚ್ ಆಫ್ ಅಧಿಕಾರವು ಎನ್ನುತ್ತಾರೆ ಜೀನ್‍ರವರು. ಇದೇ ಸಂಸ್ಥೆಯ ಅರುಣಾ ರಾವ್ ಮತ್ತು ನಿಖಿಲ್ ಡೇ ಇವರು ಇದು ಸುಧಾರಣೆ ಅಲ್ಲ, ಬದಲಿಗೆ ದಶಕಗಳ ನಿರಂತರ ಹೋರಾಟದ ಫಲವಾಗಿ ಕಾರ್ಮಿಕರು ಗಳಿಸಿಕೊಂಡಿದ್ದ ಪ್ರಜಾಸತ್ತಾತ್ಮಕ ಮತ್ತು ಸಂವಿಧಾನಾತ್ಮಕ ಭರವಸೆಗಳನ್ನು ಹಿಂದೆಗೆದುಕೊಳ್ಳುವುದಾಗಿದೆ ಎಂದು ಟೀಕಿಸಿದ್ದಾರೆ. (ದಿ ಟೈಮ್ಸ್ ಆಫ್ ಇಂಡಿಯಾ, 16, ಡಿಸೆಂಬರ್).

ಸದ್ಯಕ್ಕೆ ಹೊಸ ಮಸೂದೆಯಲ್ಲಿ ಈ ಕೆಲ ಬದಲಾವಣೆಗಳನ್ನು ವಿರೋಧ ಪಕ್ಷಗಳು ಗಮನಿಸಿವೆಯಾದರೂ, ಒಳಹೊಕ್ಕು ನೋಡಿದಾಗಲೇ ಮತ್ತೇನಿದೆಯೆಂದು ತಿಳಿಯುವುದು. ಇದರ ಹೆಚ್ಚಿನ ಪರಿಶೀಲನೆಯ ಜವಾಬ್ದಾರಿಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ನೀಡಬೇಕೆಂದು ವಿರೋಧ ಪಕ್ಷಗಳು ಆಗ್ರಹ ಪಡಿಸಿವೆ. ಇಷ್ಟರಲ್ಲಾಗಲೇ ಅನೇಕ ಜನಪರ ಸಂಘಟನೆಗಳು ಈ ವಿಚಾರವನ್ನು ತಮ್ಮ ಕ್ಷೇತ್ರಗಳಲ್ಲಿ ಚರ್ಚಿಸುತ್ತಿದ್ದು, ಹೊಸ ಮಸೂದೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ. 2005ರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾಯ್ದೆಯನ್ನು ಬಲಪಡಿಸಲು ಅನೇಕ ಸುಧಾರಣೆಗಳ ಅಗತ್ಯವಿದ್ದು, ಅವೆಲ್ಲವೂ ಈ ಕಾಯ್ದೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ದಿಸೆಯಲ್ಲಿರಬೇಕೆ ಹೊರತು, ಅದರಲ್ಲಿನ ಸಂವಿಧಾನಿಕ ಆಶಯಗಳನ್ನು ಹೊಸಕಿ ಹಾಕುವಂತಿರಬಾರದು. ಕೇಂದ್ರ ಸರ್ಕಾರವು ಸೂಚಿಸಿರುವ ಬದಲಾವಣೆಗಳು, (125 ದಿನಗಳ ಉದ್ಯೋಗ, ವಾರದ ವೇತನ ಇವನ್ನು ಹೊರತುಪಡಿಸಿ) ಚಾಲ್ತಿಯಲ್ಲಿರುವ ಕಾಯ್ದೆಯ ಸುಧಾರಣೆಗೆ ಪೂರಕವಲ್ಲದ ಕಾರಣ ಈ ಹೊಸ ಮಸೂದೆಯ ಅವಶ್ಯಕತೆ ಇಲ್ಲವಾಗಿದೆ.

WhatsApp Image 2025 11 17 at 5.18.52 PM
ಲತಾಮಾಲ
+ posts

ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...