ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (MGNREGA) ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವ್ಯವಸ್ಥಿತವಾಗಿ ನಿರ್ನಾಮ ಮಾಡುತ್ತಿದ್ದು, ಈ ಅನ್ಯಾಯದ ವಿರುದ್ಧ ಜನವರಿ 10ರಿಂದ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ‘ವಿಕಸಿತ ಭಾರತ’ದ (ಅಭಿವೃದ್ಧಿ ಹೊಂದಿದ ಭಾರತ) ಕಲ್ಪನೆಯನ್ನು ಬಿತ್ತುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಅವರ ಆಡಳಿತವು ದೇಶವನ್ನು ‘ವಿನಾಶ ಭಾರತ’ದತ್ತ (ವಿನಾಶದಂಚಿಗೆ) ಕೊಂಡೊಯ್ಯುತ್ತಿದೆ ಎಂದು ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಗ್ರಾಮೀಣ ಬಡವರ ಜೀವನಾಡಿಯಾಗಿದ್ದ ನರೇಗಾ ಯೋಜನೆಯನ್ನು ಮೋದಿ ಸರ್ಕಾರ ಕತ್ತು ಹಿಸುಕುತ್ತಿದೆ. ಬಜೆಟ್ ಕಡಿತ, ವೇತನ ಪಾವತಿಯಲ್ಲಿ ವಿಳಂಬ ಮತ್ತು ತಾಂತ್ರಿಕ ನೆಪಗಳನ್ನು ಒಡ್ಡಿ ಬಡವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಅಭಿವೃದ್ಧಿಯಲ್ಲ, ಇದು ವಿನಾಶದ ಹಾದಿ” ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ‘ಕಾಮುಕರ’ ವಿರುದ್ಧ ಕುಡುಗೋಲು ಹಿಡಿದ ಮಹಿಳಾ ಶಕ್ತಿ!
ಜ.10ರಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ಕೆ.ಸಿ. ವೇಣುಗೋಪಾಲ್
ನರೇಗಾ ಯೋಜನೆಯನ್ನು ಉಳಿಸಲು ಕಾಂಗ್ರೆಸ್ ಪಕ್ಷವು ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಅವರು, ಮೋದಿ ಸರ್ಕಾರದ ಬಡವರ ವಿರೋಧಿ ನೀತಿಗಳನ್ನು ಖಂಡಿಸಿ ಜನವರಿ 10 ರಂದು ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಸಮಿತಿಗಳು ಪ್ರತಿಭಟನೆ ನಡೆಸಲಿವೆ. ಈ ಕುರಿತು ಈಗಾಗಲೇ ಎಲ್ಲ ರಾಜ್ಯ ಘಟಕಗಳಿಗೆ ಸೂಚನೆ ನೀಡಲಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಡಿಜಿಟಲೀಕರಣದ ಹೆಸರಿನಲ್ಲಿ ರದ್ದುಪಡಿಸಲಾದ ಉದ್ಯೋಗ ಚೀಟಿಗಳನ್ನು ಮರುಸ್ಥಾಪಿಸಬೇಕು, ಬಾಕಿ ಇರುವ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಗೊಂದಲಗಳನ್ನು ನಿವಾರಿಸಬೇಕು ಎಂದು ಕೆ ಸಿ ವೇಣುಗೋಪಾಲ್ ಒತ್ತಾಯಿಸಿದ್ದಾರೆ.
”ಗ್ರಾಮೀಣ ಭಾರತದ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಸರ್ಕಾರ, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕೋಟ್ಯಂತರ ಕಾರ್ಮಿಕರನ್ನು ಉದ್ಯೋಗದಿಂದ ವಂಚಿತರನ್ನಾಗಿ ಮಾಡುತ್ತಿದೆ” ಎಂದು ವೇಣುಗೋಪಾಲ್ ಕಿಡಿಕಾರಿದ್ದಾರೆ.





