ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದಂದು ಕಾಶ್ಮೀರ ವಿಷಯದಲ್ಲಿ ಮಾಡಿದ ಹೇಳಿಕೆ ಕುರಿತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿದಂಬರಂ ಅವರು ತಮ್ಮ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಇತಿಹಾಸಕಾರ ಮತ್ತು ಪ್ರೊಫೆಸರ್ ‘ಡಾ. ಜಿ. ರಾಮಚಂದ್ರನ್’ ಅವರ ಬರಹವನ್ನು ಹಂಚಿಕೊಂಡು, “ಮೋದಿ ಅವರು ಪಂಡಿತ್ ಜವಾಹರಲಾಲ್ ನೆಹರೂ ಬಗ್ಗೆ ಕೆಟ್ಟದಾಗಿ ಇತಿಹಾಸವನ್ನು ತಿರುಚಿದ್ದಾರೆ” ಎಂದು ಹೇಳಿದ್ದಾರೆ.
ಡಾ. ರಾಮಚಂದ್ರನ್ ಅವರ ಲೇಖನದ ಪ್ರಕಾರ, ಮೋದಿ ಅವರು ಏಕತಾ ದಿವಸ್‌ನಲ್ಲಿ ಮಾತನಾಡಿ, ಸರ್ದಾರ್ ವಲ್ಲಬಾಯ್ ಪಟೇಲ್ ಅವರು ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತಕ್ಕೆ ಸೇರಿಸಬೇಕೆಂದಿದ್ದರು, ಆದರೆ ನೆಹರೂ ಅದನ್ನು ಸಾಧ್ಯವಾಗದಂತೆ ಮಾಡಿದರು. ನಾನು ಅವರ ಅಪೂರ್ಣ ಕಾರ್ಯವನ್ನು ಪೂರ್ಣಗೊಳಿಸಿದ್ದೇನೆ” ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಡಿಕೆಶಿ – ತೇಜಸ್ವಿ ಸೂರ್ಯ ಕಚ್ಚಾಟದಲ್ಲಿ ಬೆಂಗಳೂರಿಗಿಲ್ಲ ಲಾಭ!
ಇತಿಹಾಸಕಾರ ಡಾ. ರಾಮಚಂದ್ರನ್ ಅವರ ಲೇಖನದ ಪ್ರಕಾರ ವಾಸ್ತವವಾಗಿ ಪಟೇಲ್ ಅವರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಸಿದ್ಧರಿದ್ದರು. ಅವರ ಕಾರ್ಯದರ್ಶಿ ವಿ. ಶಂಕರ್ ಪ್ರಕಾರ, ಜಿನ್ನಾ ಹೈದರಾಬಾದ್ ಮತ್ತು ಜುನಾಗಢ್ ಅನ್ನು ಭಾರತಕ್ಕೆ ಬಿಟ್ಟಿದ್ದರೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡುವುದಾಗಿ ಪಟೇಲ್ ಯೋಚಿಸಿದ್ದರು. ಆದರೆ ಜಿನ್ನಾ ಒಪ್ಪಲಿಲ್ಲ. ಪಟೇಲ್ ಅವರೇ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ 370ನೇ ವಿಧಿಯನ್ನು ಸಂವಿಧಾನಕ್ಕೆ ಸೇರಿಸಲು ಒಪ್ಪಿದ್ದರು ಎಂದು ಚಿದಂಬರಂ ಅವರು ತಿಳಿಸಿದ್ದಾರೆ.
ಮೋದಿ ಅವರು 370ನೇ ವಿಧಿಯನ್ನು ರದ್ದುಗೊಳಿಸಿದಷ್ಟೇ ಅಲ್ಲದೆ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಒಕ್ಕೂಟ ಪ್ರದೇಶಗಳಾಗಿ ವಿಭಜಿಸಿದ್ದು ರಾಜಕೀಯ ಉದ್ದೇಶಕ್ಕಾಗಿ ಮಾತ್ರ. ಈ ಕ್ರಮವು ಶಾಶ್ವತ ಪರಿಹಾರಕ್ಕೆ ವಿರುದ್ಧವಾದದ್ದು ಎಂದು ಅವರು ಡಾ. ರಾಮಚಂದ್ರನ್ ಅವರ ಹೇಳಿಕೆಯನ್ನು ಚಿದಂಬರಂ ತಿಳಿಸಿದ್ದಾರೆ
ಚಿದಂಬರಂ ತಮ್ಮ ಟ್ವೀಟ್‌ನ ಅಂತ್ಯದಲ್ಲಿ, ಪಟೇಲ್ ಮತ್ತು ನೆಹರೂ ಇಬ್ಬರೂ ಮಹಾನ್ ದೇಶಭಕ್ತರು. 1947-1950ರಲ್ಲಿ ದೇಶದ ಹಿತಕ್ಕಾಗಿ ಒಟ್ಟಾಗಿ ನಿರ್ಧಾರ ತೆಗೆದುಕೊಂಡರು. ಇಬ್ಬರಿಗೂ ನಮನ. ಈ ವಿವಾದ ರಾಜಕೀಯದಲ್ಲಿ ಐತಿಹಾಸಿಕ ಸತ್ಯಗಳನ್ನು ಚರ್ಚಿಸುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.





