ಮಣಿಪುರಕ್ಕೆ ಮೋದಿ ಭೇಟಿ?; ಹಲವು ನಿರೀಕ್ಷೆಯಲ್ಲಿ ಕಣಿವೆ- ಗುಡ್ಡಗಾಡು

Date:

ಹಿಂಸಾಚಾರ ಶುರುವಾಗಿ 79 ದಿನಗಳವರೆಗೂ ಮೋದಿ ಮಾತನಾಡಿರಲಿಲ್ಲ. ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆಯ ವಿಡಿಯೊ ವೈರಲ್ ಆದ ಬಳಿಕ ಇಡೀ ದೇಶವೇ ಮಣಿಪುರಕ್ಕೆ ಸಂಬಂಧಿಸಿದಂತೆ ಮಾತನಾಡಲು ಶುರುಮಾಡಿತ್ತು. ಆಗ ಪ್ರತಿಕ್ರಿಯಿಸಿದ್ದ ಮೋದಿ ರಾಜಕೀಯ ಹೇಳಿಕೆ ನೀಡಿದ್ದರು!

ಮಣಿಪುರದಲ್ಲಿ ಹಿಂಸಾಚಾರ ಶುರುವಾಗಿ ಎರಡು ವರ್ಷದ ಮೇಲೆ ಮೂರು ತಿಂಗಳಾಯಿತು. ಚುನಾವಣೆಗಳು ಬಂದವು, ಚುನಾವಣೆಗಳು ಹೋದವು. ಆದರೆ ಹಿಂಸಾಚಾರ ಶುರುವಾದ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಿರಲಿಲ್ಲ. ಜನಾಂಗೀಯ ಕಲಹದಲ್ಲಿ ತೊಡಗಿರುವ ನೆಲಕ್ಕೆ ಅಂತೂ ಇಂತೂ ಕೊನೆಗೂ ಕಾಲಿಡುವ ಚಿಂತನೆಯನ್ನು ಮೋದಿ ನಡೆಸಿದ್ದಾರೆ. ಇದೇ ಸೆಪ್ಟೆಂಬರ್ ಎರಡನೇ ವಾರದಲ್ಲಿ ಮಣಿಪುರಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ. ಅಧಿಕೃತ ದಾಖಲೆಗಳು ಹೇಳುವ ಪ್ರಕಾರ ಮೋದಿಯವರು ಮಣಿಪುರಕ್ಕೆ ಹೋಗುವುದು ಬಹುತೇಕ ಖಚಿತವಾಗಿದೆ.

ಮೈತೇಯಿ ಮತ್ತು ಕುಕಿಗಳ ನಡುವೆ ಶುರುವಾದ ಕಲಹದಿಂದಾಗಿ 2023ರ ಮೇ 3ರಂದು ಮಣಿಪುರದ ಕಣಿವೆ ಮತ್ತು ಗುಡ್ಡಗಾಡುಗಳು ಮಾನಸಿಕವಾಗಿ ಹಾಗೂ ಭೌತಿಕವಾಗಿ ಬೇರ್ಪಟ್ಟವು. ಇಂಫಾಲ ಕಣಿವೆಗೆ ಹೊಂದಿಕೊಂಡಂತೆ ಆರು ಜಿಲ್ಲೆಗಳು, ಗುಡ್ಡಗಾಡಿಗೆ ಹೊಂದಿಕೊಂಡಂತೆ 10 ಜಿಲ್ಲೆಗಳಿವೆ. ಬಹುಸಂಖ್ಯಾತ ಮೈತೇಯಿಗಳು ಪ್ರಧಾನವಾಗಿ ಪೂರ್ವ ಇಂಫಾಲ, ಪಶ್ಚಿಮ ಇಂಫಾಲ, ತೌಬಲ್, ಕಕ್ಚಿಂಗ್‌, ಬಿಷ್ಣುಪುರ್ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಕಣಿವೆಯೇ ಮೈತೇಯಿಗಳ ನೆಲೆ. ಇಂಫಾಲ ಕಣಿವೆಯಲ್ಲಿ 10 ಪರ್ಸೆಂಟ್ ಭೂಪ್ರದೇಶವಿದ್ದರೂ ಅದು ಫಲವತ್ತಾದ ಭೂಭಾಗ. ಶೇ. 90ರಷ್ಟು ಭೂಭಾಗ ಗುಡ್ಡಗಾಡು ಜಿಲ್ಲೆಗಳಲ್ಲಿದೆ. ಕುಕಿ ಸಮುದಾಯವು ಗುಡ್ಡಗಾಡು ಜಿಲ್ಲೆಗಳಲ್ಲಿ ನೆಲೆಸಿದೆ. ಪ್ರಧಾನವಾಗಿ ದಕ್ಷಿಣದ ಚುರಾಚಾಂದ್ಪುರ, ಕಾಂಗ್‌ಪೋಕ್ಪಿ, ಚಾಂದೇಲ್‌ ಮತ್ತು ತೆಂಗ್‌ನೌಪಾಲ್ ಜಿಲ್ಲೆಗಳಲ್ಲಿ ಕುಕಿಗಳು ಹೆಚ್ಚಿದ್ದಾರೆ. ಚೂರಾಚಾಂದ್ಪುರ ಜಿಲ್ಲೆಯನ್ನು ಕುಕಿಗಳ ರಾಜಧಾನಿಯೆಂದೇ ಹೇಳಬಹುದು. ಈಗ ಪ್ರಧಾನಿಯವರು ಚೂರಾಚಾಂದ್ಪುರ ಹಾಗೂ ಇಂಫಾಲ ಎರಡಕ್ಕೂ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಆ ಮೂಲಕ ಉಭಯ ಸಮುದಾಯಗಳ ಶಕ್ತಿ ಕೇಂದ್ರಗಳಿಗೆ ಮೋದಿ ಕಾಲಿಡುತ್ತಿದ್ದಾರೆ. ಈವರೆಗೆ ಸುಮಾರು 60,000 ಜನರು ತಮ್ಮ ಮನೆ, ಆಸ್ತಿಪಾಸ್ತಿ ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಅವರನ್ನು ಮೋದಿಯವರು ಭೇಟಿಯಾಗಿ, ಆ ಪ್ರದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಘೋಷಿಸುವ ಮತ್ತು ಕೆಲವು ಯೋಜನೆಗಳನ್ನು ಉದ್ಘಾಟಿಸುವ ಸಾಧ್ಯತೆ ಇದೆ.

ಸೆಪ್ಟೆಂಬರ್ 12ರಿಂದ 14ರವರೆಗೆ ಮೋದಿಯವರು ಮಿಜೋರಾಂ ಮತ್ತು ಅಸ್ಸಾಂ ಪ್ರವಾಸ ಕೈಗೊಳ್ಳುತ್ತಿರುವುದು ನಿಶ್ಚಿತ. ಎರಡೂ ರಾಜ್ಯಗಳಲ್ಲಿ ರೈಲ್ವೆ ಹಾಗೂ ಇತರ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಮಣಿಪುರಕ್ಕೂ ತೆರಳಲಿದ್ದಾರೆ ಎಂದು ವರದಿಯಾಗಿದೆ. “ಯಾವುದೇ ರೀತಿಯ ಹಿಂಸಾಚಾರವನ್ನು ತಡೆಗಟ್ಟಲು ಮಣಿಪುರದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗುತ್ತಿದೆ. ಪ್ರಧಾನಿಯವರ ಭೇಟಿಯ ದಿನಾಂಕವನ್ನು ನಿಗದಿಪಡಿಸಲು ನೋಡಲಾಗುತ್ತಿದೆ. ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನಗಳು ನಡೆಯಬಹುದು. ಆದರೆ ನಾವು ಇಡೀ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ‘ದಿ ಹಿಂದೂ’ಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಪ್ರಧಾನಿ ಮೋದಿಗೆ ಕಳ್ಳತನದ ಅಭ್ಯಾಸವಿದೆ: ಮಲ್ಲಿಕಾರ್ಜುನ ಖರ್ಗೆ ಆರೋಪ

ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಬೇರೆ ರಾಜ್ಯಗಳಿಗೆ ಭೇಟಿ ನೀಡಿದರೂ ಮಣಿಪುರಕ್ಕೆ ಹೋಗುವ ಸಾಹಸವನ್ನು ಮೋದಿ ಪ್ರದರ್ಶಿಸಲಿಲ್ಲ. ಹೇಳಬೇಕೆಂದರೆ ಹಿಂಸಾಚಾರ ಶುರುವಾಗಿ 79 ದಿನಗಳವರೆಗೂ ಮೋದಿ ಮಾತನಾಡಿರಲಿಲ್ಲ. ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆಯ ವಿಡಿಯೊ ವೈರಲ್ ಆದ ಬಳಿಕ ಇಡೀ ದೇಶವೇ ಮಣಿಪುರಕ್ಕೆ ಸಂಬಂಧಿಸಿದಂತೆ ಮಾತನಾಡಲು ಶುರುಮಾಡಿತ್ತು. ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಮೋದಿ, “ಇಂತಹ ಘಟನೆಗಳು ಛತ್ತೀಸ್‌ಗಡದಲ್ಲೇ ಆಗಲೀ, ರಾಜಸ್ಥಾನದಲ್ಲಿಯೇ ಆಗಲೀ, ಮಣಿಪುರದಲ್ಲಿಯೇ ಆಗಲೀ, ಎಲ್ಲೇ ನಡೆದರೂ ಕಠಿಣ ಕ್ರಮ ಜರುಗಿಸಬೇಕು” ಎಂದಿದ್ದರು. ರಾಜಸ್ಥಾನ, ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾರಣ ಉದ್ದೇಶಪೂರ್ವಕವಾಗಿಯೇ ಆ ರಾಜ್ಯಗಳನ್ನು ತಮ್ಮ ಪ್ರತಿಕ್ರಿಯೆಯಲ್ಲಿ ಮೋದಿ ಉಲ್ಲೇಖಿಸಿದ್ದಂತಿತ್ತು. ಕ್ರೂರ ಘಟನೆಯೊಂದನ್ನು ಖಂಡಿಸುವಾಗಲೂ ರಾಜಕೀಯ ಹೇಳಿಕೆಯನ್ನು ಮೋದಿ ನೀಡಿದ್ದಾರೆಂಬ ಟೀಕೆಗಳು ವ್ಯಕ್ತವಾಗಿದ್ದವು.

manipur 4 2
ಮಣಿಪುರದ ಸಂತ್ರಸ್ತರೊಂದಿಗೆ ರಾಹುಲ್ ಗಾಂಧಿ

ಮಣಿಪುರಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪದೇಪದೇ ಭೇಟಿ ನೀಡಿದ್ದಾರೆ. ಭಾರತ ಜೋಡೋ ನ್ಯಾಯ ಯಾತ್ರೆಯನ್ನು ಮಣಿಪುರದಿಂದಲೇ ಆರಂಭಿಸಿದ್ದರು. ಸಂಘರ್ಷ ಪೀಡಿತ ಪ್ರದೇಶಗಳಲ್ಲಿಯೇ ಅವರು ಹಾದು ಹೋಗಿ ಕುಕಿ ಮತ್ತು ಮೈತೇಯಿ ಸಮುದಾಯಗಳೆರಡರ ವಿಶ್ವಾಸವನ್ನು ಗಳಿಸಿದ್ದರು. ಅದರ ಫಲವಾಗಿಯೇ ಲೋಕಸಭಾ ಚುನಾವಣೆಯಲ್ಲಿ ಮಣಿಪುರ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಭಾರಿಸಿತ್ತು. ಕಳೆದ ಚುನಾವಣೆಗಳಲ್ಲಿ ಕಳೆದುಕೊಂಡಿದ್ದ ಮತಗಳನ್ನು ಭಾರೀ ಮಟ್ಟದಲ್ಲಿ ಕಾಂಗ್ರೆಸ್ ಹೆಚ್ಚಿಸಿಕೊಂಡಿತ್ತು.

ಬಿರೇನ್ ಸಿಂಗ್ ದುರಾಡಳಿತದ ವಿರುದ್ಧ ಕೇಂದ್ರದ ನಾಯಕರಿಗೆ  ಬಿಜೆಪಿ ಶಾಸಕರೇ ಪದೇಪದೇ ದೂರುಗಳನ್ನು ನೀಡಿದ್ದರಿಂದ ಅಂತಿಮವಾಗಿ ಮುಖ್ಯಮಂತ್ರಿ ಸ್ಥಾನದಿಂದ ಬಿರೇನ್ ಅವರನ್ನು ಇಳಿಸಿ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. ರಾಜ್ಯಪಾಲ ಅಜಯ್‌ ಕುಮಾರ್ ಭಲ್ಲಾ ಕೆಲವು ಕಾನೂನು ಕ್ರಮಗಳನ್ನು ಜರುಗಿಸಿದ್ದರಿಂದ ಗಂಭೀರ ಹಿಂಸಾಚಾರಗಳು ನಡೆದಿಲ್ಲ ಎನ್ನುತ್ತಿವೆ ವರದಿಗಳು. ಸುಲಿಗೆ ದಂಧೆ ನಡೆಸುತ್ತಿರುವ ಸಂಘಟಿತ ಗುಂಪುಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. 2023 ರಲ್ಲಿ ಪೊಲೀಸ್ ಶಸ್ತ್ರಾಗಾರಗಳಿಂದ ಲೂಟಿ ಮಾಡಲಾದ ನೂರಾರು ಶಸ್ತ್ರಾಸ್ತ್ರಗಳನ್ನು ನಾಗರಿಕರಿಂದ ವಶಕ್ಕೆ ಪಡೆಯುವ ಕೆಲಸವನ್ನು ರಾಜ್ಯಪಾಲರು ಮಾಡಿದ್ದಾರೆ. ಆದರೆ ಪೊಲೀಸ್ ಶಸ್ತ್ರಾಗಾರಗಳಿಂದ 6,020 ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದ್ದು, ಇಲ್ಲಿಯವರೆಗೆ ಸುಮಾರು 3,000 ವಶಪಡಿಸಿಕೊಳ್ಳಲಾಗಿದೆ. ಈ ಕೆಲಸವೂ ನಿರೀಕ್ಷಿತ ಮಟ್ಟದಲ್ಲಿ ತಲುಪಿಲ್ಲ. ಕಣಿವೆ ಮತ್ತು ಗುಡ್ಡಗಾಡುಗಳ ನಡುವೆ ಬಸ್ ಸಂಚಾರ ಆರಂಭಿಸುವ ಕೆಲಸಕ್ಕೂ ಗವರ್ನರ್ ಕೈಹಾಕಿ ತೀವ್ರ ಪ್ರತಿರೋಧವನ್ನು ಎದುರಿಸಿದರು. ಮಣಿಪುರ ಎಂದಿಗೂ ಬೂದಿಮುಚ್ಚಿದ ಕೆಂಡವಾಗಿಯೇ ಇದೆ. ಗೃಹ ಸಚಿವ ಅಮಿತ್ ಶಾ ಆಗಾಗ್ಗೆ ಮಣಿಪುರಕ್ಕೆ ಭೇಟಿ ನೀಡಿದ್ದರೂ ಅಂತಹ ಬದಲಾವಣೆಯೇನೂ ಆಗಿಲ್ಲ.

ಫೆಬ್ರವರಿ 13ರಂದು ಹೇರಲಾದ ರಾಷ್ಟ್ರಪತಿ ಆಳ್ವಿಕೆಗೆ ಆಗಸ್ಟ್ ತಿಂಗಳಲ್ಲಿ ಆರು ತಿಂಗಳು ತುಂಬಿತು. ಗೃಹ ಸಚಿವ ಅಮಿತ್ ಶಾ ಮಂಡಿಸಿದ ಶಾಸನಬದ್ಧ ನಿರ್ಣಯವನ್ನು ಸಂಸತ್ತಿನ ಎರಡೂ ಸದನಗಳು ಅನುಮೋದಿಸಿದ ನಂತರ ಆಗಸ್ಟ್ 5 ರಂದು ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳ ಕಾಲ ವಿಸ್ತರಿಸಲಾಯಿತು. ಮಣಿಪುರ ವಿಧಾನಸಭೆಯನ್ನು ವಿಸರ್ಜಿಸದೆ ಇರುವುದರಿಂದ ಚುನಾಯಿತ ಸರ್ಕಾರವನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಗುಮಾನಿಗಳಂತೂ ಇದ್ದೇ ಇವೆ.

ಮೇ 3, 2023 ರಂದು ಭುಗಿಲೆದ್ದ ಹಿಂಸಾಚಾರದ ಬಳಿಕ ಕನಿಷ್ಠ 250 ಜನರು ಸಾವನ್ನಪ್ಪಿದ್ದಾರೆ. ಆಗಾಗ್ಗೆ ಜನಾಂಗೀಯ ದ್ವೇಷದ ಬಂದೂಕು ಶಬ್ದ ಮೊಳಗುವುದು ಸಾಮಾನ್ಯವಾಗಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಮೋದಿಯವರು ಮಣಿಪುರಕ್ಕೆ ಭೇಟಿ ನೀಡಿಲ್ಲ, ದೇಶವಿದೇಶಗಳನ್ನು ಸುತ್ತುವ ಪ್ರಧಾನಿಗೆ ಮಣಿಪುರದ ಹಾದಿ ಮರೆತು ಹೋಗಿದೆ ಎಂಬ ಟೀಕೆಗಳನ್ನು ವಿರೋಧ ಪಕ್ಷಗಳು ಮತ್ತು ಸ್ಥಳೀಯರು ಮಾಡುತ್ತಲೇ ಬಂದಿದ್ದರು. ಈಗಲಾದರೂ ಮೋದಿ ಮಣಿಪುರಕ್ಕೆ ಕಾಲಿಡಲು ನಿರ್ಧರಿಸಿರುವುದು ಚರ್ಚೆಗೆ ಕಾರಣವಾಗಿದೆ.

manipur 28
ಹಿಂಸಾಚಾರದ ಸಂದರ್ಭದಲ್ಲಿ ಮಣಿಪುರ

ಬರೋಬ್ಬರಿ ಎರಡು ವರ್ಷ ಮೂರು ತಿಂಗಳ ಬಳಿಕ ಮಣಿಪುರಕ್ಕೆ ಬರುತ್ತಿರುವ ಮೋದಿಯವರ ಎದುರು ಸಾಲುಸಾಲು ಬೇಡಿಕೆಗಳಂತೂ ಇವೆ. “ಮೈತೇಯಿಗಳೊಂದಿಗೆ ಅಧಿಕಾರ ಹಂಚಿಕೊಳ್ಳುವುದಿಲ್ಲ. ನಮಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಬೇಕೇಬೇಕು. ಕೇಂದ್ರಾಡಳಿತ ಪ್ರದೇಶವಾಗಿ ಕುಕಿಗಳಿರುವ ಪ್ರದೇಶಗಳನ್ನು ಘೋಷಿಸಬೇಕು. ಇನ್ನ್ಯಾವುದೇ ಕ್ರಮವು ಮಣಿಪುರದ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ” ಎಂಬುದು ಕುಕಿ ಸಂಘಟನೆಗಳ ಆಗ್ರಹ. ಮತ್ತೊಂದೆಡೆ ಮೈತೇಯಿಗಳು ಚುನಾಯಿತ ಸರ್ಕಾರವನ್ನು ಮರುಸ್ಥಾಪಿಸುವಂತೆ ಆಗ್ರಹಿಸುತ್ತಲೇ ಇದ್ದಾರೆ.

ಇದನ್ನೂ ಓದಿರಿ: ಬಿಜೆಪಿಗರೇ ಸಿದ್ಧರಾಗಿ, ಹೈಡ್ರೋಜನ್ ಬಾಂಬ್ ಬರುತ್ತಿದೆ: ರಾಹುಲ್ ಗಾಂಧಿ

ಮೋದಿಯವರು ನಿರಾಶ್ರಿತರನ್ನು ಮಾತನಾಡಿಸುವುದಾಗಿ ವರದಿಯಾಗಿದೆ. ನಿರಾಶ್ರಿತರು ಎದುರಿಸಿದ ಮತ್ತು ಈಗಲೂ ಎದುರಿಸುತ್ತಿರುವ ಸಂಕಷ್ಟಗಳನ್ನು ಗಂಭೀರವಾಗಿ ನೋಡಬೇಕಾಗುತ್ತದೆ.

ಹಿಂಸಾಚಾರ ಭುಗಿಲೆದ್ದಾಗ ಕೇಂದ್ರ ಸರ್ಕಾರವು, “ಸಂತ್ರಸ್ತರಿಗೆ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಸಾಮರ್ಥ್ಯ ಮತ್ತು ಸೌಲಭ್ಯ ಹೊಂದಿದ್ದೇವೆ” ಎಂದು ಹೇಳಿಕೊಂಡಿತ್ತು. ಆದರೆ ವೈದ್ಯರ ಕೊರತೆ, ಔಷಧಿಗಳ ಅಲಭ್ಯತೆ ಕುರಿತು ವರದಿಯಾಯಿತು. ಇದಲ್ಲದೆ ರಾಜ್ಯದ ಪ್ರಮುಖ ಆರೋಗ್ಯ ಸೌಲಭ್ಯಗಳು ಕಣಿವೆಯಲ್ಲಿದ್ದ ಕಾರಣ ಗುಡ್ಡಗಾಡು ಜನರು ಚಿಕಿತ್ಸೆಗಾಗಿ ಒದ್ದಾಡುವಂತಾಯಿತು. ಪಕ್ಕದ ಮಿಜೊರಾಂ ರಾಜ್ಯವನ್ನು ಕುಕಿಗಳು ಆಶ್ರಯಿಸಿದರು. ಸ್ವಯಂಸೇವಕರು ಮತ್ತು ಲಾಭರಹಿತವಾಗಿ ಸಿಗುವ ಪರಿಹಾರ ಕ್ರಮಗಳಷ್ಟೇ ಅನೇಕರಿಗೆ ಏಕೈಕ ಆಶ್ರಯವಾಗಿತ್ತು. ಆರೋಗ್ಯ ಕಾರ್ಯಕರ್ತರು ಉದ್ರಿಕ್ತ ಗುಂಪುಗಳಿಂದ ತೊಂದರೆಗಳನ್ನು ಎದುರಿಸಿದ್ದರು.

ಮಹಿಳೆಯರ ಸಮಸ್ಯೆಗಳು ಹೇಳತೀರದಾದವು. ನೂರಾರು ಗರ್ಣಿಣಿಯರು ನಿರಾಶ್ರಿತ ಶಿಬಿರಗಳಲ್ಲೇ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹಿಂಸಾಚಾರದ ವೇಳೆ ಮಹಿಳೆಯರು ದೈಹಿಕ ಮತ್ತು ಲೈಂಗಿಕ ಹಲ್ಲೆಗಳಿಗೆ ಒಳಗಾಗಿದ್ದಾರೆ. ಅಸ್ಸಾಂ ಟೈಮ್ಸ್ ವರದಿಯ ಪ್ರಕಾರ, “ಬಾಣಂತಿಯರು ತಮ್ಮ ಮಕ್ಕಳಿಗೆ ಹಾಲುಣಿಸಲಾಗದಷ್ಟು ಹಾಲು ಉತ್ಪಾದನಾ ಸಾಮರ್ಥ್ಯ ಕಳೆದುಕೊಂಡರು. ನೈರ್ಮಲ್ಯ ಮತ್ತು ಖಾಸಗಿ ಬದುಕು ಮರೀಚಿಕೆಯಾಯಿತು. ವಯಸ್ಸಾದ ಮಹಿಳೆಯರು ಅತಿಯಾದ ದೇಹದ ಉಷ್ಣತೆ ಮತ್ತು ನಿದ್ರಾಹೀನತೆಯನ್ನು ಅನುಭವಿಸುವಂತಾಯಿತು.”

ಮಣಿಪುರದಲ್ಲಿ ಕೃಷಿಯು ಜೀವನೋಪಾಯದ ಪ್ರಾಥಮಿಕ ಮೂಲ. ಕಣಿವೆಯಲ್ಲಿ ವಾಸಿಸುವ ಸಮುದಾಯಗಳು ಶಾಶ್ವತ ಕೃಷಿಯನ್ನು ಅವಲಂಬಿಸಿದರೆ, ಗುಡ್ಡಗಾಡಿನ ಜನರು ತಮ್ಮ ಭೌಗೋಳಿಕ ಸ್ಥಳಕ್ಕೆ ಸೂಕ್ತವಾದ ಸ್ಥಳಾಂತರ ಕೃಷಿಯನ್ನು ಆಶ್ರಯಿಸಿದ್ದರು. ಗುಡ್ಡಗಾಡಿನಲ್ಲಿ ಕಡಿಮೆ ಆಹಾರ ಉತ್ಪಾದನೆಯಾಗುವುದರಿಂದ ಹೆಚ್ಚುವರಿ ಆಹಾರಕ್ಕಾಗಿ ಕಣಿವೆಯನ್ನು ಆಶ್ರಯಿಸಿದ್ದರು. ಹೀಗಾಗಿಯೇ  ಕಣಿವೆಯು ಆರ್ಥಿಕ ವ್ಯಾಪಾರದ ಕೇಂದ್ರವಾಗಿತ್ತು. ಗಲಭೆಗಳು ಪ್ರಾರಂಭವಾದಾಗಿನಿಂದ, ಕೃಷಿ ಭೂಮಿಗೆ ಬೆಂಕಿ ಹಚ್ಚುವುದು, ಜಾನುವಾರುಗಳನ್ನು ಕೊಲ್ಲುವುದು ನಡೆಯಿತು.

manipur2
ಹಿಂಸಾಚಾರದ ಸಂದರ್ಭದಲ್ಲಿ ಮಣಿಪುರ

“ನೀರಾವರಿ ಮತ್ತು ಸಂಗ್ರಹಣಾ ಮೂಲಸೌಕರ್ಯಗಳನ್ನು ಹಾನಿ ಮಾಡಲಾಗಿದೆ. ಶಾಂತಿ ಕಾಲದಲ್ಲಿ, ಕೃಷಿ ಚಟುವಟಿಕೆಗಳು ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಪ್ರಾರಂಭವಾಗುತ್ತಿದ್ದವು. ಈಗ ತಡವಾಗಿಯೂ ಮತ್ತು ಭದ್ರತಾ ಸಿಬ್ಬಂದಿ ಬಂದ ನಂತರವೇ ಕೃಷಿ ಚಟುವಟಿಕೆಯನ್ನು ನಡೆಸುವಂತಾಯಿತು”.

ಇದನ್ನೂ ಓದಿರಿ: ಮೂರ್ಖರಿಗೆ ನುಡಿಗಟ್ಟುಗಳು ಅರ್ಥವಾಗಲ್ಲ: ಎಫ್‌ಐಆರ್ ಬೆನ್ನಲ್ಲೇ ಮಹುವಾ ಮೊಯಿತ್ರಾ ಟೀಕೆ

ಮಣಿಪುರದ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಮರೀಚಿಕೆಯಾಯಿತು. ರಾಜ್ಯದ ಒಳಗೆ ಮತ್ತು ಹೊರಗೆ ಸುಮಾರು 4,700 ವಿದ್ಯಾರ್ಥಿಗಳು ಹಿಂಸಾಚಾರದಿಂದಾಗಿ ಸ್ಥಳಾಂತರಗೊಳ್ಳಬೇಕಾಯಿತು. ನೆರೆಯ ರಾಜ್ಯಗಳನ್ನು ವಿದ್ಯಾಭ್ಯಾಸಕ್ಕಾಗಿ ಅವಲಂಬಿಸುವಂತಾಯಿತು. ಇಂತಹ ನೂರೆಂಟು ಸಮಸ್ಯೆಗಳು ಈಗಲೂ ಮಣಿಪುರದಲ್ಲಿ ಜೀವಂತವಾಗಿವೆ. ಚಿಕ್ಕಚಿಕ್ಕ ಮಕ್ಕಳೆಲ್ಲ ಬಂದೂಕು ತರಬೇತಿಗಳನ್ನು ಪಡೆದಿದ್ದಾರೆ. ಇದೆಕ್ಕೆಲ್ಲ ಸರ್ಕಾರ ಹೊಣೆ ಹೊತ್ತುಕೊಳ್ಳುತ್ತದೆಯೇ? ಮಾತನಾಡುವ ಪ್ರಧಾನಿ ಎಂದೇ ಖ್ಯಾತರಾದ ಮೋದಿ, ಮಣಿಪುರ ವಿಚಾರದಲ್ಲಿ ಮೌನ ವಹಿಸಿದ್ದೇಕೆ? ಸ್ಥಳೀಯ ಮಿಲಿಟೆಂಟ್‌ಗಳನ್ನು ನಿಯಂತ್ರಿಸಲಾಗಿದೆ ಎಂದು ಕೇಂದ್ರದ ನಾಯಕರು ಹೇಳಿಕೊಂಡರೂ, ಮತೀಯವಾದಿ ಗುಂಪುಗಳು ಬೇರೊಂದು ರೂಪದಲ್ಲಿ ಸಕ್ರಿಯವಾಗಿವೆ. ಸಂಘರ್ಷದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಆರಂಬೈ ತೆಂಗೋಲ್ ಸಂಘಟನೆಯ ಸೃಷ್ಟಿಕರ್ತನೇ ಬಿಜೆಪಿ ಸಂಸದ ಲೀಶಂಬಾ ಸನಜೋಬಾ ಎಂಬುದನ್ನು ಗಮನಿಸಬೇಕು. ಮಣಿಪುರದ ಸಮಸ್ಯೆಯನ್ನು ಇಷ್ಟು ದೀರ್ಘಕಾಲ ಉಳಿಸಿಕೊಂಡಿದ್ದೇ ದೊಡ್ಡ ಪ್ರಮಾದ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಇಲ್ಲಿ ದೊಡ್ಡಮಟ್ಟದಲ್ಲಿ ಕಾಣಿಸಿಕೊಂಡಿದೆ. ಅಂತೂ ಮೋದಿಯವರು ಮಣಿಪುರಕ್ಕೆ ಭೇಟಿ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಕುಕಿ ಮತ್ತು ಮೈತೇಯಿ ಸಮುದಾಯಗಳ ಬೇಡಿಕೆಗಳು ಸದ್ಯದಲ್ಲೇ ಮತ್ತೆ ಮುನ್ನೆಲೆಗೆ ಬರುವುದಂತೂ ಖಚಿತ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...