ಪಂಚಾಯತಿ ಸಭೆಯಲ್ಲಿಯೇ ತನ್ನ ಪತ್ನಿಗೆ ಚಾಕು ಇರಿದು, ಅತ್ತೆ ಮತ್ತು ಭಾವನನ್ನು ಕೊಂದಿದ್ದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ. ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಮೃತ ಆರೋಪಿಯನ್ನು ಅಫ್ಸರ್ ಖಾನ್ (40) ಎಂದು ಗುರುತಿಸಲಾಗಿದೆ. ಅಫ್ಸರ್ ಮತ್ತು ಸೈಮಾ (28) ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಸುಮಾರು ಐದು ದಿನಗಳ ಹಿಂದೆ ಕುಟುಂಬದ ಜಗಳದ ಹಿನ್ನೆಲೆಯಲ್ಲಿ ಸೈಮಾ ತನ್ನ ತವರು ಮನೆಗೆ ಬಂದಿದ್ದರು. ಕುಟುಂಬದ ಜಗಳವನ್ನು ಪರಿಹರಿಸಲು ಸೋಮವಾರ ಪಂಚಾಯತಿ ಸಭೆ ಕರೆಯಲಾಗಿತ್ತು. ವೃತ್ತಿಯಲ್ಲಿ ಆಂಬ್ಯುಲೆನ್ಸ್ ಚಾಲಕನಾಗಿದ್ದ ಅಫ್ಸರ್ ಖಾನ್, ಸಭೆಯ ನಡುವೆಯೇ ತನ್ನ ಅತ್ತೆ ಅಸ್ಮಾ (54) ಮತ್ತು ಭಾವ ಆದಿಲ್ (20) ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಜಗಳ ಬಿಡಿಸಲು ಬಂದ ತನ್ನ ಪತ್ನಿಯ ಮೇಲೂ ಅಫ್ಸರ್ ಹಲ್ಲೆ ನಡೆಸಿದ್ದಾನೆ. ಆಕೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಮಾ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದನು. ಮಂಗಳವಾರ ಬೆಳಿಗ್ಗೆ, ಮುಡಿಯಾ ಅಹ್ಮದ್‌ನಗರದ ಸಹಾರಾ ಮೈದಾನದಲ್ಲಿದ್ದಾನೆ. ಆತ ಅಕ್ರಮ ಆಯುಧ ಹೊಂದಿದ್ದು, ಪತ್ನಿಯನ್ನು ಕೊಲ್ಲಲು ಆಸ್ಪತ್ರೆಗೆ ಹೋಗುವ ಸಾಧ್ಯತೆಯಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಪೊಲೀಸರು ಅವನನ್ನು ಶರಣಾಗುವಂತೆ ಪದೇ ಪದೇ ಸೂಚಿಸಿದರೂ, ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದು, ಅಫ್ಸರ್ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗೆ ಆತ ಮೃತಪಟ್ಟಿದ್ದ” ಎಂದು ಹಿರಿಯ ಪೊಲೀಸ್ ಅಧೀಕ್ಷಕ (SSP) ಅನುರಾಗ್ ಆರ್ಯ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್ ಯುದ್ಧ: ಭಾರತ ಕಲಿಯಬೇಕಿರುವ ಪಾಠವೇನು?
ಆರೋಪಿ ಅಫ್ಸರ್ ಮತ್ತು ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ ರೂಪೇಂದ್ರ ಮತ್ತು ಅನುರಾಗ್ ಎಂಬ ಇಬ್ಬರು ಕಾನ್‌ಸ್ಟೆಬಲ್‌ಗಳಿಗೂ ಗಾಯಗಳಾಗಿವೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯಿಂದ ಒಂದು ಪಿಸ್ತೂಲ್, ಮದ್ದುಗುಂಡುಗಳು ಹಾಗೂ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಅಫ್ಸರ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದನು. ಆತ, 2009ರಲ್ಲಿ ತನ್ನ ಸೋದರಮಾವನನ್ನೇ ಕೊಲೆ ಮಾಡಿದ್ದನೆಂದು ತಿಳಿದುಬಂದಿದೆ.





