ಬಿಜೆಪಿಯ ಗೆಲುವಿಗೆ ಅನೇಕ ಕಾರಣಗಳಿವೆ. ಆದರೆ ಪ್ರಾದೇಶಿಕ ಪಕ್ಷಗಳೇ ಮರಾಠಿ ಮತಗಳನ್ನು ಒಟ್ಟುಗೂಡಿಸುವಲ್ಲಿ ಸೋತಿವೆ ಎಂದು ಸಹ ವಿಶ್ಲೇಷಿಸಲಾಗಿದೆ. ಶಿವಸೇನಾ(ಯುಬಿಟಿ) ಮತ್ತು ಎಂಎನ್ಎಸ್ ಹಾಗೂ ಶರದ್ ಪವಾರ್ ನೇತೃತ್ವದ (NCP) ಮೈತ್ರಿಯೂ ಫಲಿಸಲಿಲ್ಲ. ಹಿಂದಿ ಕೇಂದ್ರಿತ ಪಕ್ಷವಾದ ಬಿಜೆಪಿಯು ಮರಾಠಿ ನೆಲದಲ್ಲಿ ತನ್ನ ನೆಲೆಯನ್ನು ಬೀಡುಬಿಟ್ಟಿದೆ.
ದೇಶದ ಗಮನ ಸೆಳೆದಿದ್ದ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಜಯ ಸಾಧಿಸಿದೆ. ಕಳೆದ ಮೂರು ದಶಕದಿಂದ ಮುಂಬೈ ಪಾಲಿಕೆಯಲ್ಲಿ ಅವಿಭಜಿತ ಶಿವಸೇನಾ ಹೊಂದಿದ್ದ ಪ್ರಾಬಲ್ಯ ಮುಕ್ತಾಯಗೊಂಡಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಶಿವಸೇನಾ (ಯುಬಿಟಿ) ಪ್ರತ್ಯೇಕವಾಗಿ ಸ್ಪರ್ಧಿಸಿದ್ದೆ ಕಾರಣ ಎನ್ನಲಾಗುತ್ತಿದೆ.
ಭಾರತದಲ್ಲಿಯೇ ಅತ್ಯಂತ ಶ್ರೀಮಂತ ನಗರವಾದ ಮುಂಬೈನ ಮಹಾನಗರ ಪಾಲಿಕೆಯ ಬಜೆಟ್ ಗಾತ್ರ ₹74,427 ಕೋಟಿ. ಈ ಶ್ರೀಮಂತ ನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಹವಣಿಸುತ್ತಿದ್ದ ಬಿಜೆಪಿಯ ಕನಸು ನನಸಾಗುತ್ತಿದೆ. ಒಟ್ಟು 227 ಸದಸ್ಯ ಬಲ ಇರುವ ಬಿಎಂಸಿಯಲ್ಲಿ ಬಿಜೆಪಿ ಹಾಗೂ ಶಿವಸೇನಾ (ಶಿಂದೆ ಬಣ) ಒಳಗೊಂಡ ಮೈತ್ರಿಯು 118 ಸ್ಥಾನಗಳನ್ನು ಪಡೆದಿದೆ. ಅದರಲ್ಲಿ ಬಿಜೆಪಿ 89, ಶಿವಸೇನಾ (ಶಿಂಧೆ ಬಣ) 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಳ ಬಹುಮತ ಪಡೆದಿದೆ.
ಅದೇ ರೀತಿ ಕಾಂಗ್ರೆಸ್ 24 ಸ್ಥಾನ, ಶಿವಸೇನಾ(ಯುಬಿಟಿ) 65 ಸ್ಥಾನ ಹಾಗೂ ಇತರ ಅಭ್ಯರ್ಥಿಗಳು 20 ಸ್ಥಾನಗಳನ್ನು ಪಡೆದು ತೃಪ್ತಿಪಟ್ಟಿದ್ದಾರೆ. ವಿಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ ಅಘಾಡಿ (ಎಂವಿಎ) ಯಲ್ಲಿನ ಪಕ್ಷಗಳ ಭಿನ್ನಮತವೇ ಕಳಪೆ ಸಾಧನೆಗೆ ಕಾರಣ ಎನ್ನಲಾಗುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಶಿವಸೇನಾ(ಯುಬಿಟಿ) ಪಕ್ಷ ಮೈತ್ರಿ ಮಾಡಿಕೊಳ್ಳದೆ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಈ ಸ್ಪರ್ಧೆಯು ಮತವನ್ನು ವಿಭಜನೆಗೊಳಿಸಿದೆ. ಇದೇ ಬಿಜೆಪಿ ಗೆಲುವಿನ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ಮಹಾರಾಷ್ಟ್ರ ಚುನಾವಣೆ | ಮತಗಟ್ಟೆಗಳ ಬಳಿ ಚಪ್ಪಲಿ ನಿಷೇಧಿಸಲು ಅಭ್ಯರ್ಥಿ ಮನವಿ!
ಶ್ರೀಮಂತ ನಗರವಾದ ಮುಂಬೈ ರಾಜಕಾರಣವು ಸಂಪ್ರಾದಾಯಿಕವಾಗಿ ‘ಮರಾಠಿ ಅಸ್ಮಿತೆ’ಯನ್ನು ಆಧರಿಸಿದೆ. ಹಲವಾರು ದಶಕಗಳಿಂದ ಪ್ರಾದೇಶಿಕ ಪಕ್ಷಗಳೇ ಯಜಮಾನರಂತೆ ಆಳ್ವಿಕೆ ನಡೆಸಿದ್ದಾರೆ. ಈ ಚುನಾವಣೆಗಾಗಿ ಉದ್ಧವ್ ಠಾಕ್ರೆಯ ಶಿವಸೇನಾ(ಯುಬಿಟಿ) ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಮುರಿದು ಬಿದ್ದ ಪರಿಣಾಮ, ಎರಡು ದಶಕಗಳ ವೈಮನಸ್ಸು ಮರೆತು ಶಿವಸೇನಾ(ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಹಾಗೂ ‘ಎಂಎನ್ಎಸ್’ನ ರಾಜ್ ಠಾಕ್ರೆ ಒಂದಾಗಿದ್ದರು. ಆದರೂ ಮತದಾರರು ಪ್ರಾದೇಶಿಕ ಪಕ್ಷಗಳ ಕಡೆಗೆ ಒಲವನ್ನು ತೋರದೆ, ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಗೆಲುವಿಗೆ ಕಾರಣರಾದರು.
ಯುಬಿಟಿ ಮತ್ತು ಕಾಂಗ್ರೆಸ್ ಪ್ರತ್ಯೇಕ ಸ್ಪರ್ಧೆ : ಮತ ವಿಭಜನೆ
ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಶಿವಸೇನಾ(ಯುಬಿಟಿ) ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿ ಮತ ವಿಭಜನೆಗೆ ಕಾರಣರಾದರು. ಮುಂಬೈನ ಕನಿಷ್ಠ 32 ವಾರ್ಡ್‌ಗಳಲ್ಲಿ ಈ ಮತ ವಿಭಜನೆಯಿಂದ ಬಿಜೆಪಿ ಮತ್ತು ಏಕನಾಥ್ ಶಿಂಧೆಯ ಶಿವಸೇನೆಗೆ ನೇರವಾಗಿ ಸಹಾಯವಾಗಿದೆ ಎಂದು ವರದಿಗಳು ಹೇಳುತ್ತಿವೆ.
ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಭ್ಯರ್ಥಿವಾರು ಮತದಾನದ ದತ್ತಾಂಶದ ವಿಶ್ಲೇಷಣೆಯು, “ವಿರೋಧ ಪಕ್ಷದ ವಿಭಜನೆಯು ಬಿಜೆಪಿಗೆ 21 ವಾರ್ಡ್‌ಗಳನ್ನು ಮತ್ತು ಶಿಂಧೆ ನೇತೃತ್ವದ ಶಿವಸೇನೆಗೆ 10 ವಾರ್ಡ್‌ಗಳನ್ನು ಗೆಲ್ಲಲು ನೇರವಾಗಿ ಸಹಾಯ ಮಾಡಿದೆ ಎಂದು ಹೇಳುತ್ತದೆ. ಇದರ ಜೊತೆಗೆ ಯಾವ ಮೈತ್ರಿಕೂಟದ ಭಾಗವಾಗಿರದ ಅಜಿತ್ ಪವಾರ್ ನೇತೃತ್ವದ NCP ಕೂಡ, ಒಂದು ವಾರ್ಡ್ ನಲ್ಲಿ ಮತದ ಲಾಭ ಗಳಿಸಿದೆ” ಎಂದು ಹೇಳಿದೆ.
ಶಿವಸೇನಾ (ಯುಬಿಟಿ) ಯಿಂದ ಹೊರಬಂದ ಕಾಂಗ್ರೆಸ್ ಪಕ್ಷವು ಈ ಚುನಾವಣೆಗಾಗಿ, ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ್ ಅಘಾಡಿ(ವಿಬಿಎ) ಜೊತೆ ಮೈತ್ರಿ ಮಾಡಿಕೊಂಡಿತು. ಆದರೆ ಈ ಮೈತ್ರಿ ಎರಡೂ ಪಕ್ಷಗಳಿಗೂ ವರವಾಗಿ ಪರಿಣಮಿಸಲಿಲ್ಲ.

ವಾರ್ಡ್ ನಂ. 173 ಮತ್ತು 225ರಲ್ಲಿ ಶಿಂಧೆ ನೇತೃತ್ವದ ಶಿವಸೇನಾ ಅಭ್ಯರ್ಥಿಗಳ ಪ್ರಚಾರವೂ ಬಿಜೆಪಿಯ ಗೆಲುವಿಗೆ ಕಾರಣ ಎಂದು ಬಣ್ಣಿಸಲಾಗಿದೆ. ಮತ ವಿಭಜನೆಯಿಂದ ಕಾಂಗ್ರೆಸ್ ಮತ್ತು ವಿಬಿಎ ಗೆ ಭಾರಿ ಹೊಡೆತ ಬಿದ್ದಿದೆ. ಬಹುತೇಕ ಕಡೆಯಲ್ಲಿ ಬಿಜೆಪಿ ಮತ್ತು ಯುಬಿಟಿ ಪಕ್ಷಗಳು ನೇರಾನೇರ ಪೈಪೋಟಿಯಲ್ಲಿದ್ದವು. ವಾರ್ಡ್ ನಂ.63 ಅಂದೇರಿಯಲ್ಲಿ ಬಿಜೆಪಿಯ ರೂಪೇಶ್ ಸಾವರ್ಕರ್ 9.193 ಮತಗಳನ್ನು ಪಡೆದರೇ, ಯುಬಿಟಿಯ ಅಭ್ಯರ್ಥಿ ದೇವೇಂದ್ರ ಅಂಬರ್ಕರ್ 8,655 ಮತಗಳನ್ನು ಪಡೆದರು. ಬಿಜೆಪಿಯು ಕೇವಲ 538 ಮತಗಳ ಅಂತರರಿಂದ ಗೆಲುವು ಕಂಡಿತು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಸನಪ್ 4,380 ಮತಗಳನ್ನು ಪಡೆದು, ಮತ ವಿಭಜನೆಗೆ ಕಾರಣರಾದರು.
ಅದೇ ರೀತಿಯಲ್ಲಿ ವಾರ್ಡ್ ನಂ.129 ಘಾಟ್ಕೋಪರ್ ನಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಿನಿ ಮಾಟೆ 9,815 ಮತಗಳನ್ನು ಪಡೆದರೆ, ರಾಜ್ ಠಾಕ್ರೆ ನೇತೃತ್ವದ ‘ಎಂಎನ್ಎಸ್’ನ ಅಭ್ಯರ್ಥಿ ವಿಜಯಾ ಗೀತೆ ಅವರು 6,793 ಮತಗಳನ್ನು ಪಡೆದರು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ತೃಪ್ತಿ ಮಾಟೆಲೆ 6,467 ಮತಗಳನ್ನು ಪಡೆದು ಮತ ವಿಭಜನೆಗೆ ಮತ್ತೊಮ್ಮೆ ಕಾರಣವಾದರು.
ಘಾಟ್ಕೋಪರ್ ಪೂರ್ವ ವಾರ್ಡ್ ನಂ. 133 ರಲ್ಲಿ, ಶಿಂಧೆ ನೇತೃತ್ವದ ಶಿವಸೇನಾ ಅಭ್ಯರ್ಥಿ ನಿರ್ಮಿತಿ ಕಾಂಡೆ 12,295 ಮತಗಳನ್ನು ಗಳಿಸಿ ಗೆದ್ದರೆ, ವಿಬಿಎ ಅಭ್ಯರ್ಥಿ ಸುಪ್ರಿಯಾ ಜಾಧವ್ ಅವರು 8,656 ಮತಗಳನ್ನು ಗಳಿಸಿ ಸೋಲು ಕಂಡರು. ಇಲ್ಲಿ ಎಂಎನ್ಎಸ್ ಅಭ್ಯರ್ಥಿ 4,488 ಮತಗಳನ್ನು ಪಡೆದರು. ಅತ್ಯಂತ ನಿಕಟ ಸ್ಪರ್ಧೆಗಳಲ್ಲಿ ಒಂದಾದ ವಾರ್ಡ್ ನಂ. 106 ರಲ್ಲಿ ಬಿಜೆಪಿಯ ಪ್ರಭಾಕರ್ ಶಿಂಧೆ, ಎಂಎನ್‌ಎಸ್ ಅಭ್ಯರ್ಥಿ ಸತ್ಯವಾನ್ ದಳವಿ ವಿರುದ್ಧ ಕೇವಲ 164 ಮತಗಳಿಂದ ಗೆದ್ದರು.
ಫಲಿತಾಂಶದ ಬಳಿಕ ಮುಂಬೈ ಕಾಂಗ್ರೆಸ್ ವಕ್ತಾರ ಸಚಿನ್ ಸಾಂವತ್ ಮಾತನಾಡಿ, “ಮೈತ್ರಿ ನಡೆದಿದ್ದರೆ ಫಲಿತಾಂಶ ಬೇರೆಯೇ ಆಗುತ್ತಿತ್ತು. ಆದರೆ ಠಾಕ್ರೆ ಸಹೋದರರೊಂದಿಗೆ ಸ್ಪರ್ಧಿಸಿದರೆ ಇನ್ನು ಹೆಚ್ಚಿನ ನಷ್ಟವನ್ನು ಅನುಭವಿಸುತ್ತಿದ್ದೇವು. ಪ್ರತ್ಯೇಕವಾಗಿ ಸ್ಪರ್ಧಿಸುವ ಕಾಂಗ್ರೆಸ್ ನಿರ್ಧಾರ ಸರಿಯಾಗಿದೆ” ಎಂದು ಹೇಳಿದರು.
ಬಿಜೆಪಿಯ ಗೆಲುವಿಗೆ ಅನೇಕ ಕಾರಣಗಳಿವೆ. ಆದರೆ ಪ್ರಾದೇಶಿಕ ಪಕ್ಷಗಳೇ ಮರಾಠಿ ಮತಗಳನ್ನು ಒಟ್ಟುಗೂಡಿಸುವಲ್ಲಿ ಸೋತಿವೆ ಎಂದು ಸಹ ವಿಶ್ಲೇಷಿಸಲಾಗಿದೆ. ಶಿವಸೇನಾ(ಯುಬಿಟಿ) ಮತ್ತು ಎಂಎನ್ಎಸ್ ಹಾಗೂ ಶರದ್ ಪವಾರ್ ನೇತೃತ್ವದ (NCP) ಮೈತ್ರಿಯೂ ಫಲಿಸಲಿಲ್ಲ. ಹಿಂದಿ ಕೇಂದ್ರಿತ ಪಕ್ಷವಾದ ಬಿಜೆಪಿಯು ಮರಾಠಿ ನೆಲದಲ್ಲಿ ತನ್ನ ನೆಲೆಯನ್ನು ಬೀಡುಬಿಟ್ಟಿದೆ. ಇದರಿಂದ ಮರಾಠಿ ಅಸ್ಮಿತೆಗೆ ಧಕ್ಕೆಯಾಗಬಹುದಾ ಎಂಬ ಚರ್ಚೆಯೂ ನಡೆಯುತ್ತಿದೆ. ಮುಂದೆ ಬರುವ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಕೇರಳದ ವಿಧಾನಸಭಾ ಚುನಾವಣೆಯ ಮೇಲೆ, ಮುಂಬೈ ಮಹಾನಗರ ಪಾಲಿಕೆಯ ಫಲಿತಾಂಶ ಪ್ರಭಾವ ಬೀರುವ ಸಾಧ್ಯತೆಯಿದೆ.
ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಮೈತ್ರಿ ಮಾಡಿಕೊಂಡ ಪಕ್ಷಗಳು
ಬಿಜೆಪಿ – ಶಿವಸೇನಾ (ಶಿಂಧೆ ಬಣ) – ಆರ್.ಪಿ.ಐ (ಅಠಾವಾಲೆ)
ಶಿವಸೇನಾ (ಯುಬಿಟಿ) – ಎಂಎನ್ಎಸ್ – ಎನ್.ಸಿ.ಪಿ (ಶರದ್ ಪವಾರ್)
ಎನ್.ಸಿ.ಪಿ (ಅಜಿತ್ ಪವಾರ್)
ಕಾಂಗ್ರೆಸ್ – ವಂಚಿತ್ ಬಹುಜನ್ ಅಘಾಡಿ (ವಿಬಿಎ)





