ಮುಂಬೈನಲ್ಲಿ 25 ವರ್ಷದ ಯುವತಿಯೊಬ್ಬರು ಅಪ್ಲಿಕೇಶನ್ ಒಂದರ ಮೂಲಕ ಸಾಲ ಪಡೆದಿದ್ದು, ಪಡೆದಿದ್ದಕ್ಕಿಂತ ಅಧಿಕ ಸಾಲ ಮರುಪಾವತಿ ಮಾಡಿದ ಬಳಿಕವೂ ಕಿರುಕುಳ ನೀಡಲಾಗಿದೆ. ಆಕೆಯ ಮಾರ್ಫಿಂಗ್ ಮಾಡಿದ ನಗ್ನ ಫೋಟೋಗಳನ್ನು ಆಕೆಯ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಿಡಿಗೇಡಿಗಳು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಯುವತಿ ದೂರು ನೀಡಿದ್ದಾರೆ.
ಜೋಗೇಶ್ವರಿ ಪಶ್ಚಿಮದ ಕ್ರಾಂತಿ ನಗರ ಪ್ರದೇಶದ ಸಂತ್ರಸ್ತೆ ಇನ್‌ಸ್ಟಾಗ್ರಾಮ್‌ನಲ್ಲಿ ‘ಕ್ಯಾಶ್ ಲೋನ್’ ಎಂಬ ಮೊಬೈಲ್ ಅಪ್ಲಿಕೇಶನ್‌ನ ಜಾಹೀರಾತನ್ನು ನೋಡಿ ಜುಲೈ 20ರಂದು, ಅವರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಔಪಚಾರಿಕತೆಯ ಭಾಗವಾಗಿ ತಮ್ಮ ಎಲ್ಲಾ ವೈಯಕ್ತಿಕ ಮಾಹಿತಿ ಮತ್ತು ಅವರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಚನ್ನಪಟ್ಟಣ | ಪತ್ನಿಯ ಮಾರ್ಫ್ ಮಾಡಿದ ಅಶ್ಲೀಲ ಚಿತ್ರ ಕಳುಹಿಸಿದ ಸಾಲ ವಸೂಲಾತಿ ಏಜೆಂಟ್; ಪತಿ ಆತ್ಮಹತ್ಯೆ
ಮಹಿಳೆ ಎರಡು ಸಾವಿರ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೇವಲ 1,300 ರೂಪಾಯಿ ಮಾತ್ರ ಪಡೆದಿದ್ದಾರೆ. ಮರುಪಾವತಿ ಅವಧಿ ಆರು ದಿನಗಳು ಆಗಿತ್ತು. ಆದರೆ ಸಾಲದ ಅವಧಿ ಮುಗಿಯುವ ಮೊದಲೇ, ಸಾಲ ನೀಡಿದ ಸಂಸ್ಥೆಯ ಉದ್ಯೋಗಿ ಎಂದು ಹೇಳಿಕೊಂಡ ವ್ಯಕ್ತಿ ಯುವತಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕರೆ ಮಾಡಿದ ವ್ಯಕ್ತಿ, ತಕ್ಷಣ ಹಣವನ್ನು ಹಿಂತಿರುಗಿಸದಿದ್ದರೆ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಭಯದಿಂದ ಯುವತಿ ಅಪ್ಲಿಕೇಶನ್ ಮೂಲಕ ‘ಸಂದೇಶ್ ಕುಮಾರ್’ ಎಂಬ ವ್ಯಕ್ತಿಗೆ ಎರಡು ಬಾರಿ ಒಂದು ಸಾವಿ ರೂಪಾಯಿ ಕಳುಹಿಸಿದ್ದಾಳೆ. ಆದರೆ ಅದಾದ ಒಂದು ಗಂಟೆಯ ಬಳಿಕ ಯುವತಿಯ ಚಿಕ್ಕಮ್ಮ ಕರೆ ಮಾಡಿದ್ದು, ವಾಟ್ಸಾಪ್‌ನಲ್ಲಿ ಮಾರ್ಫ್ ಮಾಡಿದ ನಗ್ನ ಫೋಟೋಗಳು ಬಂದಿರುವುದಾಗಿ ತಿಳಿಸಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಅದೇ ಫೋಟೋ ಹಲವು ಸ್ನೇಹಿತರಿಗೆ ಬಂದಿದೆ. ಏನು ಮಾಡಬೇಕೆಂದು ತಿಳಿಯದೆ ಯುವತಿ ತನ್ನ ತಂದೆಗೆ ತಿಳಿಸಿ, ಬಳಿಕ ಪೊಲೀಸರಿಗೆ ದೂರು ನೀಡಿರುವುದಾಗಿ ವರದಿಯಾಗಿದೆ. ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





