ದಲಿತ ಯುವಕನನ್ನು ಗುಂಪೊಂದು ಬರ್ಬರವಾಗಿ ಕೊಲೆಗೈದಿರುವ ಘಟನೆ ತಮಿಳುನಾಡಿನ ಮಾರ್ಸಿಂಗ್‌ಪೇಟೆಯಲ್ಲಿ ನಡೆದಿದೆ. ತಮ್ಮ ಮಗನನ್ನು ಕಳೆದುಕೊಂಡ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಶಂಕಿತ ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾರ್ಸಿಂಗ್‌ಪೇಟೆಯ ಪೊಲೀಸ್ ವಸತಿ ಗೃಹದಲ್ಲಿ ತಮರೈಸೆಲ್ವನ್ (26) ಅವರನ್ನು ಗುಂಪೊಂದು ಥಳಿಸಿ ಕೊಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಸೋಮವಾರ ರಾತ್ರಿ ಘಟನೆ ನಡೆದಿದೆ. ಮಂಗಳವಾರ ತಮರೈಸೆಲ್ವನ್ ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಿಂದಾಗಿ ಪ್ರಕರಣವು ರಾಜ್ಯದ ಗಮನ ಸೆಳೆದಿದೆ.
ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಿರುಚಿ ಪಶ್ಚಿಮ ತಹಶೀಲ್ದಾರ್ ಎಸ್ ಪ್ರಕಾಶ್ ಅವರು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದು, ಮೃತ ಯುವಕನ ತಾಯಿ ಬಿ ಪಾರ್ವತಿ ಅವರಿಗೆ ಪರಿಹಾರವಾಗಿ 6 ಲಕ್ಷ ರೂ.ಗಳ ಚೆಕ್ಅನ್ನು ನೀಡಿದ್ದಾರೆ. ಯುವಕನ ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಒಳಪಡಿಸಿದ ನಂತರ, ವೃತದೇಹವನ್ನು ಪಡೆದ ಕುಟುಂಬವು ಅಂತ್ಯಕ್ರಿಯೆ ನೆರವೇರಿಸಿದೆ.
ಪಾಲಕ್ಕರೈ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಆರ್ ಸತೀಶ್‌ಕುಮಾರ್ ಎಂಬಾತ ಶ್ರೀರಂಗಂನ ಮೇಲೂರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆತನ ಮೊಣಕಾಲಿಗೆ ಗುಂಡು ಹಾರಿಸಿ, ಆತನನ್ನು ಹಿಡಿದಿದ್ದಾರೆ ಎಂದು ವರದಿಯಾಗಿದೆ.
ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಆರೋಪಿ ಸತೀಶ್‌ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಮಾಥವರಾಜ್ (32), ಜಾರ್ಜ್ ವಿಲಿಯಂ (37) ಅವರನ್ನು ಶ್ರೀರಂಗಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತೀಶ್‌ಕುಮಾರ್‌ನನ್ನು ಪೊಲೀಸರು ವಿಚಾರಣೆ ಒಳಪಡಿಸಿದ್ದು, ಇತರ ಆರೋಪಿಗಳ ಮಾಹಿತಿ ಪಡೆದಿದ್ದಾರೆ. ಶ್ರೀರಂಗಂನ ಯಾತ್ರಿ ನಿವಾಸದ ಬಳಿ ಅಡಗಿಕೊಂಡಿದ್ದ ಆತನ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನಂದಕುಮಾರ್, ಪ್ರಭಾಕರನ್ ಹಾಗೂ ಗಣೇಶನ್ ಎಂದು ಹೆಸರಿಸಲಾಗಿದೆ.




