ಲಖನೌ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಐತಿಹಾಸಿಕ ‘ಲಾಲ್ ಬಾರಾದರಿ’ ಕಟ್ಟಡ ಮತ್ತು ಅಲ್ಲಿನ ಮಸೀದಿಗೆ ಆಡಳಿತ ಮಂಡಳಿ ಬೀಗ ಜಡಿದು ಬ್ಯಾರಿಕೇಡ್ ಅಳವಡಿಸಿದ ನಂತರ ಕ್ಯಾಂಪಸ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗೇಟ್ ಮುಚ್ಚಿದ್ದರಿಂದ ಮುಸ್ಲಿಂ ವಿದ್ಯಾರ್ಥಿಗಳು ಕಟ್ಟಡದ ಹೊರಗಡೆಯೇ ನಮಾಜ್ ಮಾಡಿದ್ದಾರೆ. ಈ ವೇಳೆ ಹಿಂದೂ ವಿದ್ಯಾರ್ಥಿಗಳು ಅವರ ಸುತ್ತ ಮಾನವ ಸರಪಳಿ ನಿರ್ಮಿಸುವ ಮೂಲಕ ಕೋಮು ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಪ್ರದರ್ಶಿಸಿದ್ದಾರೆ.
ಮಸೀದಿಯ ಗೇಟ್ ಮುಚ್ಚಿದ್ದನ್ನು ವಿರೋಧಿಸಿ ವಿವಿಧ ಸಂಘಟನೆಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಲಾಲ್ ಬಾರಾದರಿ ಕಟ್ಟಡವು ಸುಮಾರು 200 ವರ್ಷಗಳಷ್ಟು ಹಳೆಯದಾಗಿದೆ. ವಿಶ್ವವಿದ್ಯಾಲಯ ಸ್ಥಾಪನೆಗೂ ಮುನ್ನ, 1800ರ ಸುಮಾರಿಗೆ ನಾಸಿರುದ್ದೀನ್ ಹೈದರ್ ಆಳ್ವಿಕೆಯಲ್ಲಿ ಇದನ್ನು ನಿರ್ಮಿಸಲಾಗಿತ್ತು. ಪ್ರಸ್ತುತ ಈ ಕಟ್ಟಡವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಬಾರಾದರಿ ಒಳಗಿರುವ ಮಸೀದಿಯಲ್ಲಿ ದಶಕಗಳಿಂದ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಆದರೆ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಯಾವುದೇ ಮುನ್ಸೂಚನೆ ನೀಡದೆ ಗೇಟ್ ಅನ್ನು ಬಂದ್ ಮಾಡಿದೆ ಮತ್ತು ಕಟ್ಟಡದ ಸುತ್ತ ತಂತಿ ಬೇಲಿ ಹಾಗೂ ದುರಸ್ತಿ ಕಾರ್ಯವನ್ನು ಆರಂಭಿಸಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದನ್ನು ಖಂಡಿಸಿ ಲಾಲ್ ಬಾರಾದರಿ ಹೊರಗೆ ಜಮಾಯಿಸಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು. ಕೆಲವರು ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ, ನಿರ್ಮಾಣ ಸಾಮಗ್ರಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಿದ್ದಾರೆ. “ನಾವು ವರ್ಷಗಳಿಂದ ಇಲ್ಲಿ ನಮಾಜ್ ಮಾಡುತ್ತಿದ್ದೇವೆ. ಯಾವುದೇ ಮುನ್ಸೂಚನೆ ಇಲ್ಲದೆ ಮಸೀದಿಯನ್ನು ಮುಚ್ಚಲಾಗಿದೆ. ಗೇಟ್ ತೆರೆಯುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ” ಎಂದು ವಿದ್ಯಾರ್ಥಿ ಮುಖಂಡರೊಬ್ಬರು ಎಚ್ಚರಿಸಿದ್ದಾರೆ.
ಇದನ್ನು ಓದಿದ್ದೀರಾ? ಅಮೆರಿಕ-ಇರಾನ್ ಯುದ್ಧದ ಕಾರ್ಮೋಡ; ಭಾರತದ ಆರ್ಥಿಕತೆ, ಭದ್ರತೆಗೇನು ಸವಾಲು?
ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಮಾನವ ಸರಪಳಿ
ಕಟ್ಟಡದ ಗೇಟ್ ಮುಚ್ಚಿದ್ದರಿಂದಾಗಿ, ಮುಸ್ಲಿಂ ವಿದ್ಯಾರ್ಥಿಗಳು ಬಾರಾದರಿ ಕಟ್ಟಡದ ಹೊರಗಡೆಯೇ ನಮಾಜ್ ಮಾಡಲು ಮುಂದಾದರು. ಈ ವೇಳೆ ಹಿಂದೂ ವಿದ್ಯಾರ್ಥಿಗಳು ಅವರ ಹಿಂದೆ ನಿಂತು ಕೈಕೈ ಹಿಡಿದು ಮಾನವ ಸರಪಳಿ ನಿರ್ಮಿಸುವ ಮೂಲಕ, ಪ್ರಾರ್ಥನೆ ಶಾಂತಿಯುತವಾಗಿ ಹಾಗೂ ನಿರ್ವಿಘ್ನವಾಗಿ ನಡೆಯುವಂತೆ ನೋಡಿಕೊಂಡರು. ಉದ್ವಿಗ್ನತೆಯ ನಡುವೆಯೂ ವಿದ್ಯಾರ್ಥಿಗಳ ಈ ನಡೆ ಸಾಮರಸ್ಯದ ಸಂದೇಶ ಸಾರಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಅಧಿಕಾರಿಗಳು, ಕಟ್ಟಡವು ಶಿಥಿಲಗೊಂಡಿದ್ದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ಲಾಲ್ ಬಾರಾದರಿ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಕುಸಿಯುವ ಸ್ಥಿತಿಯಲ್ಲಿದೆ. ಸುರಕ್ಷತೆಯ ಕಾರಣಗಳಿಗಾಗಿ ಮುರಿದ ಬಾಗಿಲುಗಳನ್ನು ಮುಚ್ಚಲಾಗಿದೆ. ಅಹಿತಕರ ಘಟನೆಗಳನ್ನು ತಡೆಯಲು ಫೆನ್ಸಿಂಗ್ ಕಾಮಗಾರಿ ನಡೆಸಲಾಗುತ್ತಿದೆ” ಎಂದು ನಿರ್ಮಾಣ ವಿಭಾಗದ ಅಧೀಕ್ಷಕ ಡಾ. ಶ್ಯಾಮಲೇಶ್ ತಿಳಿಸಿದ್ದಾರೆ.
ಫೆನ್ಸಿಂಗ್ ಕಾಮಗಾರಿ ವೇಳೆ ಪ್ರತಿಭಟನೆ ನಡೆಯುವ ಸಾಧ್ಯತೆಯನ್ನು ಅರಿತಿದ್ದ ರಿಜಿಸ್ಟ್ರಾರ್ ಭವನಾ ಮಿಶ್ರಾ ಅವರು, ಭದ್ರತೆ ಒದಗಿಸುವಂತೆ ಕೋರಿ ಸ್ಥಳೀಯ ಪೊಲೀಸ್ ಠಾಣೆಗೆ ಈ ಮೊದಲೇ ಪತ್ರ ಬರೆದಿದ್ದರು. ಸುರಕ್ಷತಾ ಕ್ರಮವಾಗಿ ಬಾರಾದರಿ ಒಳಗಿರುವ ಬ್ಯಾಂಕ್, ಕ್ಲಬ್ ಮತ್ತು ಕ್ಯಾಂಟೀನ್ ಅನ್ನು ಸಹ ಖಾಲಿ ಮಾಡಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕ್ಯಾಂಪಸ್‌ನಲ್ಲಿ ವಿವಿಧ ಠಾಣೆಗಳ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ. ಆದರೆ, ಮಸೀದಿಯನ್ನು ಹೀಗೆಯೇ ಮುಚ್ಚಿದರೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಮಾಜವಾದಿ ಛಾತ್ರ ಸಭಾ, ಎನ್‌ಎಸ್‌ಯುಐ ಮತ್ತು ಐಸಾ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.





