ಮುಸ್ಲಿಂ ಮಹಿಳೆಗೆ ದುರುಳರ ಗುಂಪೊಂದು ಅಮಾನವೀಯವಾಗಿ ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ. ಕ್ರೂರ ಹಲ್ಲೆಯಿಂದ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿರುವುದಾಗಿ ಮಕ್ತೂಬ್ ಮೀಡಿಯಾ ವರದಿ ಮಾಡಿದೆ.
ಮಧುಬನಿಯ ಘೋಘರ್ದಿಹಾದ ಅಮ್ಹಿ ಗ್ರಾಮದ ನಿವಾಸಿ ರೋಷನ್ ಖಾಟೂನ್ ಮೃತ ಮಹಿಳೆ. ಖಾಟೂನ್ ಫೆಬ್ರವರಿ 28ರಂದು ಸ್ಥಳೀಯ ವಿವಾದವೊಂದನ್ನು ಪರಿಹರಿಸುವಂತೆ ಕೋರಿ ಗ್ರಾಮದ ಮುಖ್ಯಸ್ಥೆ ಕುಮಾರಿ ದೇವಿಯನ್ನು ಭೇಟಿಯಾಗಿದ್ದರು. ಈ ವೇಳೆ ಗ್ರಾಮದ ಮುಖ್ಯಸ್ಥನ ಮಗ ಮನು ಸಿಂಗ್ ಮತ್ತು ಗುಂಪೊಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು, ಖಾಟೂನ್ ಗಂಭೀರ ಗಾಯಗೊಂಡಿದ್ದರು.
ಇದನ್ನು ಓದಿದ್ದೀರಾ? ದನ ಕಳ್ಳಸಾಗಣೆ ಆರೋಪ: ತರಕಾರಿ ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಹತ್ಯೆಗೈದ ಹಿಂದುತ್ವ ಗೂಂಡಾಗಳು
ಮಾರ್ಚ್ 1ರಂದು ಪಟನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಖಾಟೂನ್ ಸಾವನ್ನಪ್ಪಿದ್ದಾರೆ. ಆದರೆ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸ್ಥಳೀಯ ಡಿಜಿಟಲ್ ಸುದ್ದಿ ಮಾಧ್ಯಮವಾದ ಮಿಥ್ಲಾ ಸಮಾಚಾರ್ ಪ್ರಕಾರ ಮಹಿಳೆ ರಂಜಾನ್ ಉಪವಾಸ ನಡೆಸುತ್ತಿದ್ದರು, ಗುಂಪು ತೀವ್ರವಾಗಿ ಥಳಿಸಿದಾಗ ನೀರು ನೀಡುವಂತೆ ಮಹಿಳೆ ಕೇಳಿದ್ದು, ಈ ವೇಳೆ ದುರುಳರು ಮೂತ್ರ ಬೆರೆಸಿದ ಮದ್ಯವನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ.
ಮಕ್ತೂಬ್ ಉಲ್ಲೇಖಿಸಿದ ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿ ನಡೆಸಿದವರು ಖಾಟೂನ್ ಅವರನ್ನು ಕಂಬಕ್ಕೆ ಕಟ್ಟಿ ತೀವ್ರವಾಗಿ ಥಳಿಸಿದೆ. ಇನ್ನು ಮಹಿಳೆಯ ಪತಿ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. “ನಾವು ಗ್ರಾಮದ ಮುಖ್ಯಸ್ಥರ ಮಗನನ್ನು ವಶಕ್ಕೆ ಪಡೆದಿದ್ದೇವೆ, ವಿಚಾರಣೆ ನಡೆಸುತ್ತಿದ್ದೇವೆ. ಘಟನೆಯ ಸಮಯದಲ್ಲಿ ಹಾಜರಿದ್ದ ಎಲ್ಲರನ್ನೂ ನಾವು ಗುರುತಿಸುತ್ತಿದ್ದೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಮಕ್ತೂಬ್ ಮೀಡಿಯಾ ವರದಿ ಮಾಡಿದೆ.
“ಉಪವಾಸ ನಡೆಸುತ್ತಿದ್ದ ಮಹಿಳೆ ನೀರು ಕೇಳಿದ್ದ ಬಗ್ಗೆ ಕೆಲವು ವರದಿಗಳನ್ನು ನಾವು ನೋಡಿದ್ದೇವೆ. ಈ ಹಂತದಲ್ಲಿ, ನಾವು ಈ ವಿವರಗಳನ್ನು ದೃಢೀಕರಿಸಲು ಸಾಧ್ಯವಿಲ್ಲ. ತನಿಖೆ ಮುಂದುವರೆದಿದೆ ಮತ್ತು ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಅಧಿಕಾರಿ ಹೇಳಿದರು.
ಈ ಘಟನೆಯ ವಿಡಿಯೋ ಅಥವಾ ಸುದ್ದಿ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.





