ಕಣಿವೆ ರಾಜ್ಯ ಕಾಶ್ಮೀರದಲ್ಲಿ ಈ ಬಾರಿಯ ವಾರ್ಷಿಕ ಅಮರನಾಥ ಯಾತ್ರೆ ನಿನ್ನೆ (ಜು.3) ಆರಂಭವಾಗಿದೆ. ಜಮ್ಮು ಮತ್ತು ಕಾಶ್ಮೀರದ ಗಗನಚುಂಬಿ ಪರ್ವತಗಳಲ್ಲಿ, 3.8 ಕಿ.ಮೀ ಎತ್ತರದಲ್ಲಿರುವ ಅಮರನಾಥ ಗುಹೆಯು, ಹಿಮದಿಂದ ಸ್ವಾಭಾವಿಕವಾಗಿ ರೂಪುಗೊಳ್ಳುವ ಶಿವಲಿಂಗದಿಂದ ಪ್ರಸಿದ್ಧಿ ಪಡೆದಿದೆ. ಯಾತ್ರೆಯು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ನಡೆಯುತ್ತದೆ. ಆದರೆ, ಹಿಂದುಗಳ ಈ ಪಯಣದಲ್ಲಿ ಎಲ್ಲ ಧರ್ಮದ ಜನರ, ವಿಶೇಷವಾಗಿ ಮುಸ್ಲಿಮರ ಪಾತ್ರ ಅದ್ಭುತವಾದದ್ದು. ಸ್ಥಳೀಯ ಮುಸ್ಲಿಂ ಬಾಂಧವರ ಸೇವೆಯಿಲ್ಲದೆ ಈ ಯಾತ್ರೆ ಸಾಧ್ಯವೇ ಇಲ್ಲ.
ಕಾಶ್ಮೀರದಲ್ಲಿ 14,000 ಅಡಿ ಎತ್ತರದಲ್ಲಿರುವ ಅಮರನಾಥ ಗುಹಾ ದೇವಾಲಯದ ಕಡೆಗೆ ನೂರಾರು ಯಾತ್ರಿಕರು ಪಾದಯಾತ್ರೆ ಆರಂಭಿಸಿದ್ದಾರೆ. ಏಪ್ರಿಲ್ 22ರಂದು ಹತ್ತಿರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೊರತಾಗಿಯೂ, ಯಾವುದೇ ಭಯವಿಲ್ಲದೆ ಮೊದಲ ಬಾರಿಗೆ ಯಾತ್ರೆಗೆ ಆಗಮಿಸುತ್ತಿರುವವ ಸಂಖ್ಯೆ ಹೆಚ್ಚಿರುವುದು ವಿಶೇಷ.
ಸಾಮಾನ್ಯವಾಗಿ ಅಮರನಾಥ ಯಾತ್ರೆ ಎರಡು ಮಾರ್ಗಗಳ ಮೂಲಕ ಮುಂದುವರಿಯುತ್ತದೆ. ಒಂದು ಪಹಲ್ಗಾಮ್‌ನಿಂದ ಸಾಂಪ್ರದಾಯಿಕವಾಗಿ 48 ಕಿಮೀ ಮಾರ್ಗ, ಮತ್ತೊಂದು 14 ಕಿಮೀ ಕಡಿಮೆ ಉದ್ದದ ಬಾಲ್ಟಾಲ್ ಚಾರಣ ಮಾರ್ಗ. ಇಂದಿನಿಂದ ಶುರುವಾದ ಈ ಯಾತ್ರೆ ಆಗಸ್ಟ್ 9ರಂದು ಕೊನೆಗೊಳ್ಳಲಿದೆ.
ಈ ವರ್ಷ 3.5 ಲಕ್ಷ ಭಕ್ತರು ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ. ಪಹಲ್ಗಾಮ್ ಮಾರ್ಗ ಸುಂದರವಾಗಿದ್ದು, ಬಾಲ್ಟಾಲ್ ಮಾರ್ಗ ಕಡಿದಾಗಿದೆ. ಹಾಗಾಗಿ ಬಹುತೇಕ ಯಾತ್ರಾರ್ಥಿಗಳು ಪಹಲ್ಗಾಮ್ ಮಾರ್ಗ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಎರಡೂ ಮಾರ್ಗಗಳಲ್ಲಿ ಯಾತ್ರಾರ್ಥಿಗಳಿಗೆ ಅನುಕೂಲಕರ ವ್ಯವಸ್ಥೆಗಳನ್ನು ಮಾಡಲಾಗಿದೆ. RFID ಟ್ರ್ಯಾಕಿಂಗ್, ವೈದ್ಯಕೀಯ ನೆರವು, ಉತ್ತಮ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.
ಕಾಶ್ಮೀರದಲ್ಲಿ ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರ ಪೂರ್ವಾನುಮತಿ ಮೇರೆಗೆ ಬುಧವಾರ ಜಮ್ಮುವಿನಿಂದ ಬಂದ 5,892 ಯಾತ್ರಿಕರ ಮೊದಲ ತಂಡ ಯಾತ್ರೆ ಆರಂಭಿಸಿದೆ. ಪಹಲ್ಗಾಮ್‌ನ ನುನ್ವಾನ್ ಮತ್ತು ಸೋನಾಮಾರ್ಗ್‌ನ ಬಾಲ್ಟಾಲ್ ಎಂಬ ಎರಡು ಮೂಲ ಶಿಬಿರಗಳಿಂದ ಏಕಕಾಲದಲ್ಲಿ ಪ್ರಾರಂಭವಾದ ಈ ವರ್ಷದ ಯಾತ್ರೆ, ಭಕ್ತಿಯ ಜೊತೆಗೆ ಕಾಶ್ಮೀರದ ಜನರ ಆತ್ಮೀಯತೆಯ ಸನ್ನಿವೇಶಕ್ಕೂ ಸಾಕ್ಷಿಯಾಗಿದೆ.

ಯಾತ್ರಿಕರು ಕಣಿವೆಗೆ ಪ್ರವೇಶಿಸಿದ ಕ್ಷಣದಿಂದಲೇ ಅವರಿಗೆ ಸ್ಥಳೀಯರ, ವಿಶೇಷವಾಗಿ ಮುಸ್ಲಿಮರ ಪ್ರೀತಿಪೂರ್ವಕ ಸ್ವಾಗತ ದೊರಕಿತ್ತು. ಖಾಜಿಗುಂಡ್ ಬಳಿಯ ನೈವುಗ್ ಸುರಂಗದ ಬಳಿ, ನಾಗರಿಕ ಸಂಘಟನೆಗಳು ಮತ್ತು ವಿದ್ಯಾರ್ಥಿಗಳಿಂದ ಕೂಡಿದ ಸ್ವಯಂಸೇವಕರ ತಂಡ ಬೆಳಿಗ್ಗೆಯೇ ಸೇರಿ, ಯಾತ್ರಿಕರಿಗೆ ಕುಡಿಯುವ ನೀರು, ತಿಂಡಿಗಳ ಪ್ಯಾಕೆಟ್‌ಗಳು ಮತ್ತು ಹೃತ್ಪೂರ್ವಕ ಶುಭಾಶಯಗಳನ್ನು ನೀಡಿ ಬರಮಾಡಿಕೊಂಡಿವು. ಸ್ಥಳೀಯ ಮುಸ್ಲಿಂ ಸಹೋದರರೊಂದಿಗೆ ʼಬಮ್ ಬಮ್ ಭೋಲೆ ನಾಥ್ʼ ಘೋಷಣೆಗಳು ಮೇಳೈಸುತ್ತಿದ್ದಂತೆ, ಯಾತ್ರಾ ಮಾರ್ಗ ಒಗ್ಗಟ್ಟಿನ ಮಂತ್ರ ಪಠಿಸಿತ್ತು. ಇದು ಧರ್ಮ, ಜಾತಿಗಳ ಗಡಿಗಳನ್ನೂ ಮೀರಿತ್ತು.
ಪಹಲ್ಗಾಮ್‌ನಲ್ಲಿ ʼಪಹಲ್ಗಾಮ್ ಅಲೈಯನ್ಸ್ʼ ಎಂಬ ನಾಗರಿಕ ಸಮಾಜದ ಗುಂಪು ಯಾತ್ರಿಕರಿಗೆ ಹೂಮಾಲೆಗಳು, ಜ್ಯೂಸ್ ಹಾಗೂ ನೀರಿನ ಬಾಟಲಿಗಳೊಂದಿಗೆ ಆತ್ಮೀಯ ಸ್ವಾಗತ ನೀಡಿತ್ತು. ಈ ರೀತಿಯ ಆತಿಥ್ಯ ಕೇವಲ ಪಹಲ್ಗಾಮ್‌ನಲ್ಲಿ ಮಾತ್ರವಲ್ಲದೆ, ಕುಲ್ಗಾಮ್, ಶ್ರೀನಗರ ಹಾಗೂ ಗಂಡೇರ್ಬಲ್ ಜಿಲ್ಲೆಗಳಲ್ಲೂ ಕೂಡ ನಡೆದಿದೆ.

ಅನಂತ್ನಾಗ್‌ನ 62 ವರ್ಷದ ಗುಲಾಮ್ ಅಹ್ಮದ್, ತಮ್ಮ ಮನೆಯ ಮುಂದೆ ನೀರಿನ ಕೇಂದ್ರವನ್ನು ಸ್ಥಾಪಿಸಿ ಯಾತ್ರಿಕರಿಗೆ ಸೇವೆ ಒದಗಿಸುತ್ತಿದ್ದಾರೆ. “ಇದು ನಮ್ಮ ಸಂಪ್ರದಾಯ. ನಾವು ಅವರನ್ನು ಹೊರಗಿನವರಂತೆ ನೋಡೋದಿಲ್ಲ, ಅತಿಥಿಗಳಂತೆ ನೋಡುತ್ತೇವೆ. ಅವರು ಭಕ್ತಿಯಿಂದ ಬರುತ್ತಾರೆ. ಅವರು ಸುರಕ್ಷಿತವಾಗಿದ್ದು ಪ್ರೀತಿಸಲ್ಪಡಬೇಕು ಎಂಬುದು ನಮ್ಮ ಹೊಣೆ” ಎನ್ನುತ್ತಾರವರು.
ಶ್ರೀನಗರದ ಇಮ್ತಿಯಾಜ್ ಅಹ್ಮದ್ ತಮ್ಮ ಮಕ್ಕಳೊಂದಿಗೆ ಯಾತ್ರಿಕರನ್ನು ಸ್ವಾಗತಿಸಲು ಬಂದಿದ್ದು, “ಇದು ಒಗ್ಗಟ್ಟಿನ ಸುಂದರ ಕ್ಷಣ. ನಮ್ಮ ಭೂಮಿಗೆ ಬಂದವರು ಸುರಕ್ಷಿತವಾಗಿರಬೇಕು ಮತ್ತು ಪ್ರೀತಿಸಲ್ಪಡಬೇಕು ಎಂಬುದು ನಮ್ಮ ಆಶಯ” ಎಂದು ಅವರು ಹೇಳಿದ್ದಾರೆ.

ಅತ್ತ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಹಿಂದು ಭಕ್ತರೂ ಸಹ ಭದ್ರತಾ ವ್ಯವಸ್ಥೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನ ಬರೋಡಾದಿಂದ ಆಗಮಿಸಿದ ಭಕ್ತೆ ಜ್ಯೋತಿಕಾ ಸೋಲಂಕಿ ಹೇಳುವಂತೆ, “ನಾವು ವರ್ಷಗಳಿಂದ ಬಾಬಾ ಬರ್ಫಾನಿ ದರ್ಶನಕ್ಕೆ ಬರುವ ಆಸೆ ಇಟ್ಟುಕೊಂಡಿದ್ದೇವೆ. ಈ ಬಾರಿ ಯಾತ್ರೆ ಆರಂಭಿಸಲು ಉತ್ಸುಕರಾಗಿದ್ದೇವೆ. ಇಲ್ಲಿ ಭದ್ರತೆ ಹಾಗೂ ಸೇವೆಗಳ ವ್ಯವಸ್ಥೆ ಉತ್ತಮವಾಗಿದೆ. ನಾವು ತುಂಬಾ ಸುರಕ್ಷಿತವಾಗಿದ್ದೇವೆ ಎನ್ನುವ ಭಾವವಿದೆ.”
ದೆಹಲಿಯಿಂದ ಬಂದ ನೀಲಂ ಶರ್ಮಾ, “ಕಾಶ್ಮೀರದ ಸೌಂದರ್ಯವನ್ನು ನಾವು ಕೇಳಿದ್ದೇವೆ. ಆದರೆ ಇಲ್ಲಿನ ಜನರು ತೋರಿಸಿದ ಪ್ರೀತಿ ಮತ್ತು ಕಾಳಜಿಯೇ ನಮ್ಮ ಹೃದಯ ಗೆದ್ದಿತು. ನಾವು ಇದನ್ನು ಮರೆಯಲು ಸಾಧ್ಯವಿಲ್ಲ” ಎಂದು ಹೇಳಿರುವುದಾಗಿ ಡಿಹೆಚ್ ವರದಿ ಮಾಡಿದೆ.
ವಿಭಜನೆಯ ವಾತಾವರಣ, ರಾಜಕೀಯ ಘರ್ಷಣೆಗಳು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಧ್ರುವೀಕರಣದ ನಡುವೆ ಸಹಜ ಮಾನವೀಯತೆಯ ದೀಪ ಬೆಳಗಿದರೆ, ಅದು ನಿಜಕ್ಕೂ ವಿಶೇಷ. ಕಾಶ್ಮೀರದಲ್ಲಿ ನಡೆಯುವ ಅಮರನಾಥ ಯಾತ್ರೆ, ಒಂದು ಧರ್ಮದ ಪವಿತ್ರ ಪಯಣವಾಗಿ ಆರಂಭವಾದರೂ, ಅದರ ಜೀವಾಳವು ಹಲವಾರು ಮುಸ್ಲಿಂ ಸಹೋದರರ ದುಡಿಮೆ, ಸಹಾನುಭೂತಿ ಮತ್ತು ಆತಿಥ್ಯದಲ್ಲಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಭಾರತ ಮಾತೆಯನ್ನು ಗೌರವಿಸುವ ಬಿಜೆಪಿಯವರು ʼಮಾತೆʼಯರನ್ನು ಗೌರವಿಸುವುದು ಯಾವಾಗ?
ಅಮರನಾಥ ಯಾತ್ರೆ ವರ್ಷದಿಂದ ವರ್ಷಕ್ಕೆ ಲಕ್ಷಾಂತರ ಭಕ್ತರನ್ನು ಸೆಳೆಯುವ ಪವಿತ್ರ ಪಯಣವಾಗಿದ್ದರೂ, ಇದಕ್ಕೆ ನಿಜವಾದ ರೂಪ ನೀಡುವವರು ಕಣಿವೆಯ ಜನತೆ. ಈ ವರ್ಷವೂ ಕಾಶ್ಮೀರದ ಸಾಮಾನ್ಯ ನಾಗರಿಕರು– ಮುಸ್ಲಿಂ ಸಹೋದರರು– ತಮ್ಮ ನಿಷ್ಠೆ, ಪ್ರೀತಿ, ಮತ್ತು ಆತಿಥ್ಯದ ಮೂಲಕ ಧರ್ಮದ ಗಡಿಗಳನ್ನು ಮೀರಿ ಒಗ್ಗಟ್ಟಿನ ಸನ್ನಿವೇಶವೊಂದನ್ನು ನಿರ್ಮಿಸಿದ್ದಾರೆ. ಪರಿಸ್ಥಿತಿಯ ಜಟಿಲತೆ, ಭದ್ರತಾ ಸವಾಲುಗಳು ನಡುವೆಯೂ ಸಹಜ ಸಹಾನುಭೂತಿಯ ಈ ಚಿತ್ರಣ, ಕಾಶ್ಮೀರೀತನದ ನಿಜವಾದ ಅರ್ಥವನ್ನ ಮತ್ತೊಮ್ಮೆ ನೆನಪಿಗೆ ತರುತ್ತದೆ.





