2020ರ ದೆಹಲಿ ಗಲಭೆ ಪ್ರಕರಣದಲ್ಲಿ ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸುಪ್ರೀಂ ತೀರ್ಪಿಗೆ ಈ ಇಬ್ಬರೂ ಕಾರ್ಯಕರ್ತರ ಕುಟುಂಬಗಳು ನಿರಾಶಿ ವ್ಯಕ್ತಪಡಿಸಿವೆ.
ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಬೇಸರ ಮತ್ತು ದುಃಖ ವ್ಯಕ್ತಪಡಿಸಿರುವ ಉಮರ್ ಖಾಲಿದ್ ಅವರು ತಂದೆ ಸೈಯದ್ ಖಾಸಿಮ್ ರಸೂಲ್ ಇಲ್ಯಾಸ್, “ವಿಚಾರಣೆಯಿಲ್ಲದೆ ಸುಮಾರು ಐದು ವರ್ಷಗಳಿಂದ ನನ್ನ ಮಗ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಮತ್ತೊಂದು ಹೊಡೆತಕೊಟ್ಟಿದೆ. ಅನ್ಯಾಯದ ಭಾವ ಬೇರೂರಿದೆ. ನನ್ನ ಮಗನ ವಿರುದ್ಧದ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿದ್ದಾರೆ.
“ಈ ತೀರ್ಪು ತುಂಬಾ ದುರದೃಷ್ಟಕರ ನಿರ್ಧಾರ. ನನ್ನ ಮಗ ಯಾವುದೇ ದೇಶ ವಿರೋಧಿ ಭಾಷಣ ಮಾಡಿದ್ದಾನೆ ಅಥವಾ ಯಾವುದೇ ದೇಶ ವಿರೋಧಿ ಕೃತ್ಯ ಎಸಗಿದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವಾಸ್ತವವಾಗಿ, ಗಲಭೆಗಳು ನಡೆದಾಗ, ನನ್ನ ಮಗ ದೆಹಲಿಯಲ್ಲಿಯೂ ಇರಲಿಲ್ಲ” ಎಂದು ಇಲ್ಯಾಸ್ ಹೇಳಿದ್ದಾರೆ.
“ನ್ಯಾಯಾಲಯದ ಆದೇಶವು ಕುಟುಂಬಕ್ಕೆ ನೋವುಂಟುಮಾಡಿದೆ. ನಮಗೆ ತುಂಬಾ ಕಷ್ಟಕರ ಸಮಯ. ಉಮರ್ ಈಗಾಗಲೇ ವಿಚಾರಣೆಯಿಲ್ಲದೆ ಹಲವು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಈಗ ನಾವು ಮತ್ತೆ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಲು ಇನ್ನೂ ಒಂದು ವರ್ಷ ಕಾಯಬೇಕಾಗುತ್ತದೆ. ಮತ್ತೊಮ್ಮೆ, ಮೊದಲಿನಿಂದ ಸಂಪೂರ್ಣ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ನಮ್ಮ ಮಗುವಿಗೆ ಅನ್ಯಾಯವಾಗಿದೆ. ಆತ ನಿರಪರಾಧಿ” ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಈ ಲೇಖನ ಓದಿದ್ದೀರಾ?: ‘ಬೌದ್ಧಿಕ ದಿಗ್ಗಜರಲ್ಲ, ಅಸಭ್ಯ ಜನಪ್ರಿಯವಾದಿ ಪ್ರಚೋದಕರು’ ಎಂಬ ಟೀಕೆಯನ್ನು RSS ಎದುರಿಸಿದ್ದು ಹೀಗೆ?!
ಶಾರ್ಜೀಲ್ ಇಮಾಮ್ ಅವರ ಕುಟುಂಬವೂ ಇದೇ ರೀತಿಯ ನಿರಾಶೆ ವ್ಯಕ್ತಪಡಿಸಿದೆ. ಶಾರ್ಜೀಲ್ ಸಹೋದರ ಮುಜಮ್ಮಿಲ್ ಇಮಾಮ್, “ಇತರ ಐದು ಆರೋಪಿಗಳಿಗೆ ಜಾಮೀನು ನೀಡಿರುವುದು ಸಮಾಧಾನ ತಂದಿದೆ. ಆದರೆ, ಈ ಜಾಮೀನು ನೀಡುವಾಗ ಖಾಲಿದ್ ಮತ್ತು ಇಮಾಮ್ ಅವರನ್ನು ಪ್ರತ್ಯೇಕವಾಗಿ ಗುರುತಿಸುವಲ್ಲಿ ನ್ಯಾಯಾಲಯದ ತಾರ್ಕಿಕತೆ ಏನು? ಏಳು ಆರೋಪಿಗಳಲ್ಲಿ, ಇಬ್ಬರಿಗೆ ಮಾತ್ರ ಪಿತೂರಿ ಆರೋಪದ ಮೇಲೆ ಜಾಮೀನು ನಿರಾಕರಿಸಲಾಗಿದೆ. ಈ ಇಬ್ಬರು ಮಾತ್ರ ಪಿತೂರಿಗಾರರು ಎನ್ನಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.
“ಈ ತಾರತಮ್ಯ ಸಮರ್ಥನೀಯವಲ್ಲ. ನನ್ನ ಸಹೋದರ ಈಗಾಗಲೇ ಆರು ವರ್ಷಗಳ ಕಾಲ ವಿಚಾರಣೆಯಿಲ್ಲದೆ ಬಂಧನದಲ್ಲಿ ಕಳೆದಿದ್ದಾನೆ. ಶಾರ್ಜೀಲ್ ಇಂದು ಬಿಡುಗಡೆಯಾಗುತ್ತಾರೆ ಎಂಬ ಭರವಸೆ ಇತ್ತು. ಆದರೆ, ನ್ಯಾಯಾಲಯದ ತೀರ್ಪು ನಮಗೆ ಅತ್ಯಂತ ನಿರಾಶೆ ಉಂಟುಮಾಡಿದೆ” ಎಂದಿದ್ದಾರೆ.
ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಇತರ ಐವರು ಕಾರ್ಯಕರ್ತರಾದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ-ಉರ್-ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಅವರ ವಿರುದ್ಧದ ಆರೋಪಗಳ ಸೀಮಿತ ಮತ್ತು ಪೂರಕ ಸ್ವರೂಪವನ್ನು ಪರಿಗಣಿಸಿ, ಅವರು ಜಾಮೀನು ಪಡೆಯಲು ಅರ್ಹರು ಎಂದು ನ್ಯಾಯಾಲಯ ಹೇಳಿದೆ.




