17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಆರೋಪದ ಮೇಲೆ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ, ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಹರಿಯಾಣದ ಫರಿದಾಬಾದ್‌ನ ಖಾಸಗಿ ಹೋಟೆಲ್‌ನಲ್ಲಿ ಭಾರದ್ವಾಜ್ ಅವರು ಮಹಿಳಾ ಶೂಟರ್‌ನ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ನೆಪದಲ್ಲಿ ಆಕೆಯನ್ನು ತನ್ನ ಕೋಣೆಗೆ ಆಹ್ವಾನಿಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಗೆ ತೆರಳುವ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಅಪ್ತಾಪ್ತ ಮಹಿಳಾ ಶೂಟರ್‌ನ ಪೋಷಕರು ಭಾರದ್ವಾಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಭಾರದ್ವಾಜ್ ವಿರುದ್ಧ ಫರಿದಾಬಾದ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಬಿಎನ್‌ಎಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಅರಸು – ಸಿದ್ದರಾಮಯ್ಯ: ʼಬದಲಾದ ಕಾಲಘಟ್ಟದ ಪಾತ್ರʼಕ್ಕೆ ಸಿಗದ ವಿಶ್ಲೇಷಣಾ ನ್ಯಾಯ
ಪೋಷಕರ ದೂರಿನಲ್ಲಿ; “ದೌರ್ಜನ್ಯ ಘಟನೆಯನ್ನು ಬಹಿರಂಗಪಡಿಸಿದರೆ, ಆಕೆಯ ವೃತ್ತಿಜೀವನವನ್ನು ಹಾಳುಮಾಡುವುದಾಗಿ ಮತ್ತು ಆಕೆಯ ಕುಟುಂಬಕ್ಕೆ ಹಾನಿ ಮಾಡುವುದಾಗಿ ಕೋಚ್ ಬೆದರಿಕೆ ಹಾಕಿದ್ದಾರು. ಆಘಾತದಿಂದ ಮನೆಗೆ ಮರಳಿದ ಶೂಟರ್ ಘಟನೆಯನ್ನು ತಮ್ಮ ಬಳಿ ಹೇಳಿಕೊಂಡಿದ್ದಾರೆ” ಎಂದು ವಿವರಿಸಿವುದಾಗಿ ವರದಿಯಾಗಿದೆ.
“ಪ್ರಕರಣದ ಗಂಭೀರತೆಯನ್ನು ಗಮನಿಸಿ, ಅಪ್ರಾಪ್ತ ಬಾಲಕಿಯ ಆರೋಪಗಳನ್ನು ದೃಢೀಕರಿಸಲು ಘಟನೆ ನಡೆದ ದಿನದ ಎಲ್ಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ತಕ್ಷಣವೇ ಒದಗಿಸುವಂತೆ ನಾವು ಹೋಟೆಲ್ ಆಡಳಿತವನ್ನು ಕೇಳಿದ್ದೇವೆ” ಎಂದು ಫರಿದಾಬಾದ್ ಪೊಲೀಸ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ಪಾಲ್ ಯಾದವ್ ಹೇಳಿದ್ದಾರೆ.
“ಭಾರದ್ವಾಜ್ ಅವರು ಭಾರತೀಯ ರಾಷ್ಟ್ರೀಯ ರೈಫಲ್ ಸಂಘ (NRAI) ನೇಮಕ ಮಾಡಿದ 13 ರಾಷ್ಟ್ರೀಯ ಪಿಸ್ತೂಲ್ ತರಬೇತುದಾರರಲ್ಲಿ ಒಬ್ಬರಾಗಿದ್ದಾರೆ. ವಿಚಾರಣೆ ನಡೆಯುವವರೆಗೆ ಅವರನ್ನು ಎಲ್ಲ ಕರ್ತವ್ಯಗಳಿಂದ ಅಮಾನತುಗೊಳಿಸಲಾಗಿದೆ. ಅವರಿಗೆ ಯಾವುದೇ ಹೊಸ ಹುದ್ದೆ ನೀಡಲಾಗುವುದಿಲ್ಲ” ಎಂದು NRAI ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಸಿಂಗ್ ಹೇಳಿರುವುದಾಗಿ ವರದಿಯಾಗಿದೆ.




