ಕೇಂದ್ರ ಸರ್ಕಾರದ ‘ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ದೇಶವಿರೋಧಿ’ ನೀತಿಗಳನ್ನು ಖಂಡಿಸಿ ಹಾಗೂ 4 ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಗುರುವಾರ (ಫೆ. 12, 2026) ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರಕ್ಕೆ(ಭಾರತ ಬಂದ್) ದೇಶದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇರಳದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದರೆ, ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಂದ್ ಪರಿಣಾಮ ಬೀರಲಿಲ್ಲ. ಬ್ಯಾಂಕಿಂಗ್, ವಿಮೆ ಹಾಗೂ ಗಣಿಗಾರಿಕೆ ವಲಯಗಳಲ್ಲಿ ಮುಷ್ಕರದ ಬಿಸಿ ತಟ್ಟಿದೆ ಎಂದು ವರದಿಗಳು ತಿಳಿಸಿವೆ.
ಸುಮಾರು 30 ಕೋಟಿಗೂ ಹೆಚ್ಚು ಕಾರ್ಮಿಕರು ಈ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಘಟನೆಗಳು ಹಕ್ಕು ಮಂಡಿಸಿವೆ. ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕೌರ್ ಅವರು, ಅಸ್ಸಾಂ, ತಮಿಳುನಾಡು, ಪುದುಚೇರಿ, ಒಡಿಶಾ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಿಂದ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಜನಜೀವನ ಸ್ತಬ್ಧ
ಮುಷ್ಕರದ ಬಿಸಿ ಅತಿ ಹೆಚ್ಚಾಗಿ ತಟ್ಟಿದ್ದು ಕೇರಳದಲ್ಲಿ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಸ್ಥಗಿತಗೊಂಡಿತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗಿಳಿಯದ ಕಾರಣ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿತು. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿದ್ದು, ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು. ಎರ್ನಾಕುಲಂನಲ್ಲಿ ಜನಜೀವನ ಸ್ತಬ್ಧವಾಗಿತ್ತು. ಖಾಸಗಿ ವಾಹನಗಳನ್ನು ತಡೆದ ಘಟನೆಗಳೂ ವರದಿಯಾಗಿವೆ.
ಕರ್ನಾಟಕದಲ್ಲಿ ಪ್ರತಿಭಟನೆ
ಕರ್ನಾಟಕದಲ್ಲಿಯೂ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಕೈಗಾರಿಕಾ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಕಾರ್ಮಿಕ ಸಂಘಟನೆಗಳು ತಿಳಿಸಿವೆ. ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕ ಸಂಘಟನೆಗಳ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು. ಹುಬ್ಬಳ್ಳಿಯಲ್ಲೂ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖುದ್ದು ರಾಜಧರ್ಮ ಪಾಲಿಸಲಿಲ್ಲ ಮೋದಿಯವರು, ಹಿಮಂತರಿಗೆ ಹೇಗೆ ಉಪದೇಶ ನೀಡಬಲ್ಲರು ಪಾಪ?
ಬ್ಯಾಂಕಿಂಗ್ ಸೇವೆಗೆ ಅಲ್ಪ ವ್ಯತ್ಯಯ
ಸಾರ್ವಜನಿಕ ವಲಯದ ಬ್ಯಾಂಕ್ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರಿಂದ ಕೆಲವು ರಾಜ್ಯಗಳಲ್ಲಿ ಬ್ಯಾಂಕಿಂಗ್ ಕಲಾಪಗಳಿಗೆ ಅಡಚಣೆಯಾಯಿತು. ಜಾರ್ಖಂಡ್‌ನಲ್ಲಿ ಬ್ಯಾಂಕಿಂಗ್, ವಿಮೆ ಮತ್ತು ಕಲ್ಲಿದ್ದಲು ಗಣಿಗಾರಿಕೆ ವಲಯಗಳ ಮೇಲೆ ಮುಷ್ಕರದ ಪರಿಣಾಮ ಕಂಡುಬಂದಿದೆ. ಆದರೆ, ಗುಜರಾತ್ ಮತ್ತು ಗೋವಾದಲ್ಲಿ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರೂ, ದೈನಂದಿನ ವಹಿವಾಟುಗಳಿಗೆ ಹೆಚ್ಚಿನ ತೊಂದರೆಯಾಗಿಲ್ಲ ಎಂದು ವರದಿಗಳು ಹೇಳಿವೆ.
ವಿವಿಧ ರಾಜ್ಯಗಳ ಸ್ಥಿತಿಗತಿ:
ಪಶ್ಚಿಮ ಬಂಗಾಳ: ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನ ಸಂಚಾರ ಮತ್ತು ಕಚೇರಿಗಳ ಕಾರ್ಯಕಲಾಪ ಎಂದಿನಂತೆ ಸಾಗಿತ್ತು.
ಮಧ್ಯಪ್ರದೇಶ: ರಕ್ಷಣಾ ಇಲಾಖೆಯ ವಿವಿಧ ಘಟಕಗಳಲ್ಲಿ ಕೆಲಸ ಮಾಡುವ ಸುಮಾರು 25,000 ನಾಗರಿಕ ನೌಕರರು, ಕೆಲಸಕ್ಕೆ ಒಂದು ಗಂಟೆ ತಡವಾಗಿ ಹಾಜರಾಗುವ ಮೂಲಕ ವಿನೂತನವಾಗಿ ಸಾಂಕೇತಿಕ ಪ್ರತಿಭಟನೆ ದಾಖಲಿಸಿದರು.
ತಮಿಳುನಾಡು ಮತ್ತು ಆಂಧ್ರಪ್ರದೇಶ: ಕೊಯಮತ್ತೂರು, ಈರೋಡ್, ವಿಜಯವಾಡ ಮತ್ತು ವಿಶಾಖಪಟ್ಟಣಂಗಳಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಗಳು ನಡೆದವು.
ಗುಜರಾತ್: ಅಹಮದಾಬಾದ್ ಮತ್ತು ವಡೋದರದಲ್ಲಿ ಸಾಂಕೇತಿಕ ಪ್ರತಿಭಟನೆಗಳು ನಡೆದರೂ, ವಾಣಿಜ್ಯ ವಹಿವಾಟುಗಳು ಮತ್ತು ಮಾರುಕಟ್ಟೆಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ರಾಜಕೀಯ ಬೆಂಬಲ
ಈ ಮುಷ್ಕರಕ್ಕೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸಿವೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಷ್ಕರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಹೊಸ ಕಾರ್ಮಿಕ ಸಂಹಿತೆಗಳು ಉದ್ಯೋಗ ಭದ್ರತೆಯನ್ನು ಕಡಿಮೆ ಮಾಡುತ್ತವೆ ಮತ್ತು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ.





