ಕಳೆದ 6 ವರ್ಷಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸೈಬರ್ ವಂಚಕರು ಸುಮಾರು ₹52,976 ಕೋಟಿಗೂ ಅಧಿಕ ಹಣ ದೋಚಿದ್ದಾರೆ. ಈ ಅಂಶವನ್ನು Indian Cyber Crime Coordination Centre (I4C)ನಿಂದ ಪಡೆದ ಮಾಹಿತಿಯನ್ವಯ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಬಹಿರಂಗಗೊಳಿಸಿದೆ.
6 ವರ್ಷಗಳ ಅವಧಿಯಲ್ಲಿ ಸೈಬರ್ ವಂಚನೆಗಳಿಂದ ಅತಿಹೆಚ್ಚು ಹಣ ಕಳೆದುಕೊಂಡ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕರ್ನಾಟಕವೂ ಅದರ ಸಮೀಪದಲ್ಲೇ ಇದೆ ಎಂದು ವರದಿಗಳು ತಿಳಿಸಿವೆ.
2024ರಲ್ಲಿ ಒಟ್ಟು 19,18,852 ಸೈಬರ್ ವಂಚನೆಗೆ ಸಂಬಂಧಿತ ದೂರುಗಳು ದಾಖಲಾಗಿದ್ದು, ಸುಮಾರು ₹22,849.49 ಕೋಟಿ ಹಣ ಸೈಬರ್ ವಂಚಕರ ಹೊಟ್ಟೆ ಸೇರಿದೆ. ಕಳೆದ ವರ್ಷ (2025) ಒಟ್ಟು 21,77,524 ದೂರುಗಳು ದಾಖಲಾಗಿದ್ದು, ಸಾರ್ವಜನಿಕರು ಸುಮಾರು ₹19,813 ಕೋಟಿ ಹಣ ಕಳೆದುಕೊಂಡಿದ್ದಾರೆ. ಈ ಮಾಹಿತಿಯನ್ನು ಭಾರತೀಯ ಸೈಬರ್ ಅಪರಾಧ ಸಂಯೋಜನಾ ಕೇಂದ್ರ ಸಂಗ್ರಹಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಹೂಡಿಕೆ ವಂಚನೆ, ಡಿಜಿಟಲ್ ಅರೆಸ್ಟ್, ಆನ್‌ಲೈನ್ ಮೋಸ, ಬ್ಯಾಂಕಿಂಗ್ ವಂಚನೆಗಳು ವೇಗವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ತಜ್ಞರ ಪ್ರಕಾರ, ವೇಗದ ಡಿಜಿಟಲೀಕರಣ, ಆನ್‌ಲೈನ್ ವಹಿವಾಟುಗಳ ಹೆಚ್ಚಳ ಮತ್ತು ಹೆಚ್ಚು ಸಂಘಟಿತ ಹಾಗೂ ಸುಧಾರಿತ ವಂಚನಾ ಜಾಲಗಳು ತೆರೆಮರೆಯಲ್ಲಿ ಸಕ್ರಿಯರಾಗಿರುವುದು ಈ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷ ವಂಚನೆ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ 28,33,20 ದೂರುಗಳು ದಾಖಲಾಗಿದ್ದು, ಸುಮಾರು ₹3,203 ಕೋಟಿ ನಷ್ಟ ದಾಖಲಿಸಿದೆ. ಆ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಸುಮಾರು 21,32,28 ದೂರುಗಳು ದಾಖಲಾಗಿದ್ದು, ₹2,413 ಕೋಟಿ ಹಣ ವಂಚಕರ ಪಾಲಾಗಿದೆ ಎಂದು ʼಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿರುವುದಾಗಿ Bangalore Mirror ಉಲ್ಲೇಖಿಸಿದೆ.
ಉಳಿದಂತೆ ತಮಿಳುನಾಡು: ₹1,897 ಕೋಟಿ (12,32,90 ದೂರು), ಉತ್ತರ ಪ್ರದೇಶ: ₹1,443 ಕೋಟಿ ( 27,52,64 ದೂರು), ತೆಲಂಗಾಣ: ₹1,372 ಕೋಟಿ ( 95,000 ದೂರು) ಸೇರಿ ಒಟ್ಟು 5 ರಾಜ್ಯಗಳು ದೇಶದ ಒಟ್ಟಾರೆ ಸೈಬರ್ ವಂಚನೆ ನಷ್ಟದ ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಿವೆ ಎಂದಿದೆ ವರದಿ.
ಇದನ್ನೂ ಓದಿ: ಬೀದರ್ | ಸೈಬರ್ ವಂಚನೆ : 3 ವರ್ಷದಲ್ಲಿ ₹8.18 ಕೋಟಿ ದೋಖಾ
2025ರಲ್ಲಿ ಸಂಭವಿಸಿದ ₹19,812 ಕೋಟಿ ನಷ್ಟದಲ್ಲಿ 77% ಹಣ ಹೂಡಿಕೆ ಯೋಜನೆಗಳ ಹೆಸರಿನಲ್ಲಿ, 8% ಡಿಜಿಟಲ್ ಅರೆಸ್ಟ್ ಮೂಲಕ, 7% ಕ್ರೆಡಿಟ್ ಕಾರ್ಡ್ ವಂಚನೆ, 4% ಸೆಕ್ಸ್ಟಾರ್ಷನ್ (ಲೈಂಗಿಕ ವಿಷಯ ಸಂಬಂಧೀ ಕೃತ್ಯ), 3% ಇ-ಕಾಮರ್ಸ್ ವಂಚನೆ ಹಾಗೂ 1% ಆಪ್ ಅಥವಾ ಮಾಲ್ವೇರ್ ಆಧಾರಿತ ವಂಚನೆಗಳಿಂದ ದೃಢಪಟ್ಟಿದೆ.
Citizen Financial Cyber Fraud Reporting and Management System (CFCFRMS) ಮಾಹಿತಿ ಪ್ರಕಾರ, 2025ರಲ್ಲಿ ಸುಮಾರು 2.1 ಕೋಟಿ ಸೈಬರ್ ವಂಚನೆ ದೂರುಗಳು ದಾಖಲಾಗಿದ್ದು, ಅವುಗಳಲ್ಲಿ 45% ದೂರುಗಳು ದಕ್ಷಿಣ ಪೂರ್ವ ಏಷ್ಯಾದ ದೇಶಗಳಾದ ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಲಾವೋಸ್‌ನಿಂದ ಬಂದಿವೆ.
ಸಾರ್ವಜನಿಕರು ವಿವಿಧ ರೀತಿಯ ಸೈಬರ್ ಅಪರಾಧಗಳನ್ನು ವರದಿ ಮಾಡಲು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಅಪರಾಧ ಕೃತ್ಯ ಎಸಗಲಾಗುತ್ತಿದೆ. ಆನ್‌ಲೈನ್ ಹಣಕಾಸು ವಂಚನೆಗೆ ಒಳಗಾದವರು ತಕ್ಷಣ ನೆರವು ಪಡೆಯಲು ವಿಶೇಷ ಸೈಬರ್ ಅಪರಾಧ ಸಹಾಯವಾಣಿ 1930ನ್ನು ಸಂಪರ್ಕಿಸಬಹುದು.





