NDTV | ಪ್ರಣಯ್-ರಾಧಿಕಾ ರಾಯ್‌ಗೆ ಜಯ, ಐಟಿಗೆ ದಂಡ; ಏನಿದು ಪ್ರಕರಣ?

Date:

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಭಾರತದ ಬಹುತೇಕ ಮಾಧ್ಯಮಗಳು ತಮ್ಮ ‘ಪ್ರಜಾಪ್ರಭುತ್ವದ ಕಾವಲುನಾಯಿ’ ಎಂಬ ಹಿರಿಮೆಯನ್ನು ಕಳೆದುಕೊಂಡಿವೆ. ಗೋದಿ ಮೀಡಿಯಾಗಳು ಎಂಬ ಅಪಖ್ಯಾತಿಯೊಂದಿಗೆ ಮೋದಿ ಸರ್ಕಾರದ ‘ಗೇಟ್‌ ಕೀಪರ್‌ಗಳು’ ಎಂಬ ಹಣೆಪಟ್ಟಿ ಕಟ್ಟಿಕೊಂಡಿವೆ. ಇಂತಹ ಹಣೆಪಟ್ಟಿ ಮತ್ತು ಅಪಖ್ಯಾತಿಯಿಂದ ಹೊರಗುಳಿದು, ರವೀಶ್‌ ಕುಮಾರ್‌ರಂತಹ ದಿಟ್ಟ ಪತ್ರಕರ್ತರ ತಂಡ ಕಟ್ಟಿಕೊಂಡು, ಪ್ರತಿಕೋದ್ಯಮದ ನೈತಿಕತೆಯನ್ನು ಉಳಿಸಿಕೊಂಡಿದ್ದ ಏಕೈಕ ಮುಖ್ಯವಾಹಿನಿ ಮಾಧ್ಯಮ NDTV. ಆದರೆ, ಈಗ ಅದೂ ಕೂಡ ಅದಾನಿಯ ಕೈಸೇರಿದೆ. ಗೋದಿ ಮೀಡಿಯಾಗಳ ಗುಂಪಿಗೆ ಪಾದಾರ್ಪಣೆ ಮಾಡಿದೆ.

ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್‌ ಅವರು ಎನ್‌ಟಿವಿಟಿಯನ್ನು ಕಟ್ಟಿ, ಸದೃಢವಾಗಿ ಬೆಳೆಸಿದ್ದರು. ಮೋದಿ ಸರ್ಕಾರದ ಜನವಿರೋಧಿ ನೀತಿ, ನಿಲುವು, ಧೋರಣೆಗಳನ್ನು ಎನ್‌ಡಿಟಿವಿ ತೀಕ್ಷ್ಣವಾಗಿ ವಿಮರ್ಶೆ ಮಾಡುತ್ತಿತ್ತು. ಜನರ ಎದುರು ಸತ್ಯವನ್ನು ತೆರೆದಿಡುತ್ತಿತ್ತು. ಅದೇ ಕಾರಣಕ್ಕಾಗಿ ಮೋದಿ ಸರ್ಕಾರದ ಕೆಂಗಣ್ಣಿಗೆ ಗುರಿಯೂ ಆಗಿತ್ತು. ಮೋದಿ ಸರ್ಕಾರವು ಎನ್‌ಡಿಟಿವಿಯನ್ನು ಹಣಿಯಲು ಶತಪ್ರಯತ್ನ ಮಾಡುತ್ತಲೇ ಇತ್ತು. ರಾಯ್‌ ದಂಪತಿ ವಿರುದ್ಧ ಹಣಕಾಸಿಗೆ ಸಂಬಂಧಿಸಿದಂತೆ ನಾನಾ ಆರೋಪಗಳನ್ನು ಮಾಡಿ, ಆದಾಯ ತೆರಿಗೆ ಇಲಾಖೆ, ಸಿಬಿಐಗಳನ್ನು ಛೂಬಿಟ್ಟು, ತನ್ನ ಕಾರ್ಯ ಸಾಧನೆಯಲ್ಲಿ ಯಶಸ್ವಿಯೂ ಆಯಿತು. ಎನ್‌ಡಿಟಿವಿ ರಾಯ್‌ ದಂಪತಿಯಿಂದ ಅದಾನಿ ಕೈಸೇರುವಂತೆ ಮಾಡಿತು.

ಆದರೆ, ನಿಧಾನವಾಗಿಯಾದರೂ ಸತ್ಯ ಜಯಿಸುತ್ತದೆ ಎಂಬಂತೆ ರಾಯ್‌ ದಂಪತಿ ತಮ್ಮ ವಿರುದ್ಧದ ಆರೋಪಗಳಿಂದ ಮುಕ್ತರಾಗಿದ್ದಾರೆ. ರಾಯ್‌ ದಂಪತಿ ವಿರುದ್ಧ ಆದಾಯ ತೆರಿಗೆ (ಐಟಿ) ಇಲಾಖೆ ದಾಖಲಿಸಿದ್ದ ಪ್ರಕರಣ ಮತ್ತು ನೋಟಿಸ್‌ ಅನ್ನು ದೆಹಲಿ ಹೈಕೋರ್ಟ್‌ ರದ್ದುಗೊಳಿಸಿದೆ. ಮಾತ್ರವಲ್ಲದೆ, ಇಲಾಖೆಯ ಕ್ರಮವು ನಿರಂಕುಶವಾದಿ, ನ್ಯಾಯವ್ಯಾಪ್ತಿಯನ್ನು ಮೀರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯವು, ಐಟಿ ಇಲಾಖೆಗೆ 2 ಲಕ್ಷ ರೂ. ದಂಡ ವಿಧಿಸಿದೆ. ಈ ಹಣವನ್ನು ದಂಪತಿಯ ನ್ಯಾಯಾಲಯದ ವೆಚ್ಚಕ್ಕೆ ಸಾಂಕೇತಿಕ ವೆಚ್ಚವಾಗಿ ಪಾವತಿಸುವಂತೆ ಸೂಚಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಯ್‌ ದಂಪತಿ ತಮ್ಮ RRPR Holdings Pvt Ltd ಸಂಸ್ಥೆಯ ಮೂಲಕ 2009-10ರಲ್ಲಿ ಕೆಲವು ಬಡ್ಡಿರಹಿತ ಸಾಲಗಳನ್ನು ಪಡೆದಿದ್ದಾರೆ. ಆ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಸಾಲದ ಹಣವನ್ನು ತಮ್ಮ ಆದಾಯವೆಂದು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕಾಗಿ ಇಬ್ಬರಿಗೂ 2011ರಲ್ಲಿ ಸಾಲ ಮತ್ತು ಆದಾಯ ಮರುಮೌಲ್ಯಮಾಪನ ನೋಟಿಸ್‌ಅನ್ನು ನೀಡಿತ್ತು. ಆ ಮರುಮೌಲ್ಯಮಾಪನವು 2013ರಲ್ಲಿ ಪೂರ್ಣಗೊಂಡಿತ್ತು. ಆದಾಗ್ಯೂ, 2016ರಲ್ಲಿ ಮತ್ತೊಮ್ಮೆ ನೋಟಿಸ್‌ ನೀಡಲಾಗಿತ್ತು.

ನೋಟಿಸ್‌ ವಿರುದ್ಧ ದಂಪತಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ದಿನೇಶ್ ಮೆಹ್ತಾ ಮತ್ತು ವಿನೋದ್ ಕುಮಾರ್ ಅವರಿದ್ದ ಪೀಠವು, ನೋಟಿಸ್‌ಅನ್ನು ರದ್ದುಗೊಳಿಸಿದೆ. ಇಲಾಖೆಗೆ ದಂಡ ವಿಧಿಸಿದೆ.

ಏನಿದು ಪ್ರಕರಣ?

ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರ  ‘RRPR Holdings Pvt Ltd’ ಸಂಸ್ಥೆಯು 2008-09ರಲ್ಲಿ ICICI ಬ್ಯಾಂಕ್‌ನಿಂದ ಸುಮಾರು 375 ಕೋಟಿ ರೂಪಾಯಿ ಸಾಲ ಪಡೆದಿತ್ತು. ಆ ಸಾಲದ ಮೊತ್ತದಲ್ಲಿ, ಸಂಸ್ಥೆಯು ಪ್ರಣಯ್ ರಾಯ್‌ಗೆ ಸುಮಾರು 70 ಕೋಟಿ ರೂ. ಮತ್ತು ರಾಧಿಕಾ ರಾಯ್‌ಗೆ 60 ಕೋಟಿ ರೂ.ಗೂ ಅಧಿಕ ಹಣವನ್ನು ಬಡ್ಡಿರಹಿತ ಸಾಲವಾಗಿ ನೀಡಲಾಗಿತ್ತು. ಆ ಹಣವನ್ನು ದಂಪತಿ NDTVಯ ಷೇರುಗಳನ್ನು ಖರೀದಿಸಲು ಅಥವಾ ಇತರ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, 2009ರಲ್ಲಿ ಆರ್‌ಆರ್‌ಪಿಆರ್‌ ಸಂಸ್ಥೆಯು ಸಾಲದ ಸೆಟಲ್‌ಮೆಂಟ್‌ ಮಾಡಿಕೊಂಡಿತ್ತು. ಈ ವೇಳೆ, ಬ್ಯಾಂಕ್‌ಗೆ ಸುಮಾರು 48 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.

2009-10ರ ಆರ್ಥಿಕ ವರ್ಷದಲ್ಲಿ ದಂಪತಿಗಳು ಐಟಿ ರಿಟರ್ನ್‌ ಸಲ್ಲಿಸಿದ್ದರು. ಅದರಲ್ಲಿ, ತಾವು ಆರ್‌ಆರ್‌ಪಿಆರ್‌ ಕಂಪನಿಯಿಂದ ಪಡೆದ ಸಾಲವನ್ನು ಸಾಲದ ಬಾಪ್ತಿನಲ್ಲಿ ಉಲ್ಲೇಖಿಸಿದ್ದರು. ಆದರೆ, ಆದಾಯ ಇಲಾಖೆಯು ‘ಆರ್‌ಆರ್‌ಪಿಆರ್‌ ಸಂಸ್ಥೆಯಿಂದ ಪಡೆದ ಸಾಲವು ನಿಜವಾದ ಸಾಲವಲ್ಲ, ಅದು ಅವರಿಗೆ ಸಂಸ್ಥೆಯು ನೀಡಿದ ಲಾಭ ಅಥವಾ ಆದಾಯವೆಂದು ಪರಿಗಣಿಸಬೇಕು. ಯಾಕೆಂದರೆ, ಕಂಪನಿಯು ಬಡ್ಡಿರಹಿತವಾಗಿ ನೀಡಿರುವುದು ತೆರಿಗೆ ತಪ್ಪಿಸುವಿಕೆ ಅಥವಾ ಆದಾಯವನ್ನು ಮರೆಮಾಚುವ ಪ್ರಯತ್ನ’ ಎಂದು ವಾದಿಸಿತ್ತು.

ಬಡ್ಡಿರಹಿತ ಸಾಲವನ್ನು ಆದಾಯವನ್ನು ಭಾವಿಸಿದ್ದ ಐಟಿ ಇಲಾಖೆಯು ತನ್ನ ಮೇಲ್ನೋಟದ ಅಂದಾಜಿನ ಮೇಲೆಯೇ 2011ರಲ್ಲಿ ದಂಪತಿಗೆ ಪ್ರತ್ಯೇಕ ನೋಟಿಸ್‌ ನೋಡಿತು. ಅವರ ಆದಾಯವನ್ನು ಮರುಮೌಲ್ಯಮಾಪನ ಮಾಡುವಂತೆ ಸೂಚಿಸಿತು. ದಾಖಲೆಗಳ ಪರಿಶೀಲನೆಗಳು ಮುಗಿದ ಬಳಿಕ, ಸಾಲಗಳ ಸರಿಯಾದ ವಿವರಗಳು ಮತ್ತು ತೆರಿಗೆಗಳ ಮೌಲ್ಯಮಾಪನವನ್ನು ಮುಗಿಸಿತು.

ಆದಾಗ್ಯೂ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಇದೇ ವಿಚಾರವಾಗಿ 2016ರ ಮಾರ್ಚ್‌ನಲ್ಲಿ, ದಂಪತಿಗೆ ಮತ್ತೆ ಐಪಿಸಿ ಸೆಕ್ಷನ್‌ 148ರ ಅಡಿಯಲ್ಲಿ ಪ್ರತ್ಯೇಕ ‘ಮರು ಮೌಲ್ಯಮಾಪನ ನೋಟಿಸ್‌’ಗಳನ್ನು ಜಾರಿ ಮಾಡಿತು. ಈ ನೋಟಿಸ್‌ಗಳ ವಿರುದ್ಧ ಪ್ರಣಯ್ ಮತ್ತು ರಾಧಿಕಾ ರಾಯ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ‘ರಿಟ್ ಅರ್ಜಿ’ ಸಲ್ಲಿಸಿದರು.

“ಬಡ್ಡಿರಹಿತ ಸಾಲ ಮತ್ತು ಆದಾಯದ ವಿಚಾರವಾಗಿ ಈಗಾಗಲೇ ಪರಿಶೀಲನೆ ನಡೆದು, ಮೌಲ್ಯಮಾಪನವನ್ನು ಮುಗಿಸಲಾಗಿದೆ. ಆದರೂ, ಮತ್ತೊಮ್ಮೆ ಅದೇ ವಿಚಾರವಾಗಿ ನೋಟಿಸ್‌ ನೀಡಲಾಗಿದೆ. ಮರುಮೌಲ್ಯಮಾಪನಕ್ಕೆ ಸೂಚಿಸಲಾಗಿದೆ. ಇದು ಕಾನೂನುಬಾಹಿರ, ಅನ್ಯಾಯ ಹಾಗೂ ತೊಂದರೆ ಕೊಡುವ ಧೋರಣೆಯಾಗಿದೆ. ಅಲ್ಲದೆ, ಸಂವಿಧಾನದ ಅನುಚ್ಛೇದ 14 (ಸಮಾನತೆ), 19(1)(g) (ವ್ಯಾಪಾರ ಸ್ವಾತಂತ್ರ್ಯ) ಹಾಗೂ 300A (ಆಸ್ತಿ ಹಕ್ಕು)ಗಳನ್ನು ಉಲ್ಲಂಘನೆಯಾಗಿದೆ” ಎಂದು ದಂಪತಿ ವಾದಿಸಿದ್ದರು.

ಅವರ ವಾದ ಆಲಿಸಿದ್ದ ನ್ಯಾಯಾಲಯವು 2017ರಲ್ಲಿ ನೋಟಿಸ್‌ ಮತ್ತು ಮರುಮೌಲ್ಯಮಾಪನಕ್ಕೆ ತಡೆ ನೀಡಿತ್ತು. ಹೀಗಿದ್ದರೂ, ಬರೋಬ್ಬರಿ 9 ವರ್ಷಗಳ ವಿಚಾರಣೆ ಬಳಿಕ, ರಾಯ್ ದಂಪತಿಯ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಪೂರ್ಣಗೊಳಿಸಿದೆ. “ಹಳೆಯ ವಹಿವಾಟುಗಳಿಗೆ ಸಂಬಂಧಿಸಿದಂತೆ 2ನೇ ಬಾರಿ ನೋಟಿಸ್‌ ನೀಡುವುದು ಅನ್ಯಾಯಯುತ ಮತ್ತು ಕಾನೂನುಬಾಹಿರವಾಗಿದೆ. ಇದು ದಂಪತಿಗೆ ತೊಂದರೆ ಮತ್ತು ಹಿಂಸೆ ಕೊಡುವ ಕ್ರಮವಾಗಿದೆ. ಹೊಸ ಅಧಿಕಾರಿ ತನ್ನದೇ ಭಿನ್ನ ಅಭಿಪ್ರಾಯ ಹೊಂದಿದ್ದಕ್ಕಾಗಿ ಈಗಾಗಲೇ ಮುಗಿದಿರುವ ಮೌಲ್ಯಮಾಪನವನ್ನು ಮತ್ತೆ ತೆರೆಯಲಾಗದು. ಇಲಾಖೆಯ ಕ್ರಮವು ಅರಾಜಕತೆಗೆ ಕಾರಣವಾಗುತ್ತದೆ” ಎಂದು ಹೇಳಿದೆ. ಇಲಾಖೆಗೆ 2 ಲಕ್ಷ ರೂ. ದಂಡ ವಿಧಿಸಿದೆ.

ಸಿಬಿಐ ದಾಖಲಿಸಿದ್ದ ಪ್ರಕರಣ

ರಾಯ್‌ ದಂಪತಿ ಎದುರಿಸಿದ್ದು ಇಂದೊಂದೇ ಪ್ರಕರಣವಲ್ಲ ಸುಪ್ರೀಂ ಕೋರ್ಟ್‌ನಿಂದ ಪಂಜರದ ಗಿಳಿ ಎಂದು ಪದೇ-ಪದೇ ಛೀಮಾರಿ ಹಾಕಿಸಿಕೊಂಡಿರುವ ‘ಸಿಬಿಐ’ ಕೂಡ 2017ರಲ್ಲಿ ಮತ್ತೊಂದು ಪ್ರಕರಣ ದಾಖಲಿಸಿತ್ತು. ಇದೇ ಆದಾಯ ತೆರಿಗೆ ಮತ್ತು ಮರು ಮೌಲ್ಯಮಾಪನ ವಿಚಾರಗಳನ್ನಿಟ್ಟುಕೊಂಡು ರಾಯ್ ದಂಪತಿ ವಿರುದ್ಧ ‘ಕ್ವಾಂಟಮ್ ಸೆಕ್ಯುರಿಟೀಸ್ ಲಿಮಿಟೆಡ್’ನ ಸಂಜಯ್ ದತ್ ಅವರು ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದಲ್ಲಿ ಆರ್ಥಿಕ ಅಕ್ರಮಗಳು, ಕ್ರಿಮಿನಲ್ ಪಿತೂರಿ, ವಂಚನೆ, ಬ್ಯಾಂಕಿಂಗ್‌ ನಿಮಯಗಳ ಉಲ್ಲಂಘನೆಗೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಎನ್‌ಡಿಟಿವಿ ಕಚೇರಿ ಮತ್ತು ರಾಯ್ ದಂಪತಿಯ ಮನೆಗಳ ಮೇಲೆ ದಾಳಿ ನಡೆಸಿತ್ತು.

ಸುಮಾರು 7 ವರ್ಷಗಳ ಕಾಲ ರಾಯ್ ದಂಪತಿಗೆ ಆಗಾಗ್ಗೆ ತೊಂದರೆ ಕೊಟ್ಟ ಸಿಬಿಐ, 2024ರ ಅಕ್ಟೋಬರ್‌ನಲ್ಲಿ ದಂಪತಿ ವಿರುದ್ಧದ ಪ್ರಕರಣದಲ್ಲಿ ‘ಸಾಕಷ್ಟು ಪುರಾವೆಗಳಿಲ್ಲ’ವೆಂದು ನ್ಯಾಯಾಲಯಕ್ಕೆ ಮುಕ್ತಾಯ ವರದಿ ಸಲ್ಲಿಸಿತು. 2024ರ ನವೆಂಬರ್‌ನಲ್ಲಿ ಸಿಬಿಐನ ಮುಕ್ತಾಯ ವರದಿಯನ್ನು ನ್ಯಾಯಾಲಯ ಅಂಗೀಕರಿಸಿತು. ಇಬ್ಬರನ್ನೂ ದೋಷಮುಕ್ತವೆಂದು ಘೋಷಿಸಿತು.

ಆದರೆ, ಆದಾಯ ಇಲಾಖೆ ಮತ್ತು ಸಿಬಿಐ ನೀಡಿದ ಮಾನಸಿಕ ಕಿರುಕುಳಗಳು ಹಾಗೂ ಈ ಸಂಸ್ಥೆಗಳ ಹಿಂದಿದ್ದ ರಾಜಕೀಯ ಒತ್ತಡದಿಂದಾಗಿ ರಾಯ್ ದಂಪತಿ ಎನ್‌ಡಿಟಿವಿಯನ್ನು ಕಳೆದುಕೊಂಡರು. ಭಾರತದಲ್ಲಿ ಗೋದಿ ಮೀಡಿಯಾಗಳ ನಡುವೆ ನೈಜ ಪತ್ರಿಕೋದ್ಯಮ ನಡೆಸುತ್ತಿದ್ದ ಎನ್‌ಡಿಟಿವಿಯು ರಾಯ್ ದಂಪತಿಯ ಕೈತಪ್ಪಿ, ಕಾರ್ಪೋರೇಟ್‌ ಕೂಳರ ಕೈ ಸೇರಿದಿದೆ. ಅದೇ ಗೋದಿ ಮೀಡಿಯಾಗಳ ಗುಂಪಿಗೆ ಸೇರಿದೆ. ಇದು, ಇವರಿಬ್ಬರಿಗೆ ಮಾತ್ರವಲ್ಲ, ನೈಜ ಪತ್ರಿಕೋದ್ಯಮವನ್ನು ಎದುರುನೋಡುತ್ತಿದ್ದ ಪ್ರತಿಯೊಬ್ಬರ ಭಾರತೀಯರಿಗೂ ಆದ ನಷ್ಟ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...