ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ 2024ರ ಸ್ನಾತಕಪೂರ್ವ ಪದವಿ ಅರ್ಹತಾ ಪರೀಕ್ಷೆ(ನೀಟ್ ಯುಜಿ) ಫಲಿತಾಂಶಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಟಿಎ)ಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ರಜಾಕಾಲದ ನ್ಯಾಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಅಸಾನುದ್ದೀನ್ ಅಮಾನುಲ್ಲಾ ನೇತೃತ್ವದ ದ್ವಿಸದಸ್ಯ ಪೀಠವು ಫಲಿತಾಂಶಕ್ಕೆ ಸಂಬಂಧಿಸಿದಂತೆ ಜುಲೈ 8ರೊಳಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಿದೆ.
“ನೀವು ಪರೀಕ್ಷೆ ನಡೆಸಿರುವುದರಿಂದ ಇದು ಸಾಮಾನ್ಯವಲ್ಲ, ಇದು ಪಾವಿತ್ರ್ಯತೆಯಾಗಿದೆ. ಪರೀಕ್ಷೆ ಪಾವಿತ್ರ್ಯತೆಗೆ ಧಕ್ಕೆಯಾಗಿದೆ, ಹಾಗಾಗಿ ನಮಗೆ ಉತ್ತರ ಅಗತ್ಯವಾಗಿದೆ. ನಿಮಗೆ ಎಷ್ಟು ಸಮಯ ಬೇಕು. ತಕ್ಷಣ ಮರು ಪ್ರಕ್ರಿಯೆ ಆರಂಭಿಸುತ್ತೀರಾ? ಇಲ್ಲದಿದ್ದರೆ ಕೌನ್ಸಲಿಂಗ್ ಶುರುವಾಗುತ್ತದೆ. ನಾನು ಕೌನ್ಸಲಿಂಗ್ಅನ್ನು ನಿಲ್ಲಿಸುವುದಿಲ್ಲ” ಎಂದು ಎನ್‌ಟಿಎ ಪರ ಹಾಜರಿದ್ದ ವಕೀಲರಿಗೆ ನ್ಯಾಯಮೂರ್ತಿಗಳಾದ ಅಮಾನುಲ್ಲಾ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಹೊಸ ಮನುಷ್ಯರಾಗುವರೇ?
“ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ವಂಚನೆ ಚಟುವಟಿಕೆಗಳನ್ನು ಕೈಗೊಂಡು ಅನುಕೂಲ ಮಾಡಿಕೊಟ್ಟಿರುವುದು ಅಸಮಾನತೆಯನ್ನು ಶಾಶ್ವತಗೊಳಿಸುತ್ತದೆ. ಹೆಚ್ಚು ವ್ಯಾಸಂಗ ಹಾಗೂ ಮೆರಿಟ್ ಮೇಲೆ ಯಶಸ್ಸುಗಳಿಸುವವರಿಗೆ ಅನಾನುಕೂಲವಾಗುತ್ತದೆ ಹಾಗೂ ಇದು ಸಮಾಜದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ” ಎಂದು ಅರ್ಜಿದಾರರು ನ್ಯಾಯಾಧೀಶರಿಗೆ ಮನವರಿಕೆ ಮಾಡಿದರು.
ವೈಜ್ಞಾನಿಕ ಹಾಗೂ ವೈದ್ಯಕೀಯದಲ್ಲಿ ಆಳವಾದ ತಿಳುವಳಿಕೆಯಿರಬೇಕೆಂದು ಈ ಕ್ಷೇತ್ರವು ಬಯಸುತ್ತದೆ. ವಂಚನೆ ಹಾಗೂ ಅನ್ಯಾಯದ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಮರ್ಥ್ಯದ ಕೊರತೆ ಎದುರಾಗಬಹುದು ಹಾಗೂ ರೋಗಿಗಳ ಜೀವಕ್ಕೆ ಅಪಾಯವಾಗಬಹುದು ಎಂದು ಅರ್ಜಿದಾರರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು.
ಈ ನಡುವೆ ಎನ್‌ಟಿಎ ಈಗಾಗಲೇ ನೀಟ್ 2024ರ ಪರೀಕ್ಷೆಗೆ ಹಾಜರಾಗಿರುವ 1600 ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ವಿಮರ್ಶಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ನಿರ್ಧರಿಸಿದೆ.
1536 ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡಿ ರ್ಯಾಂಕ್ ಬರಲು ಕಾರಣವಾದ ಎನ್‌ಟಿಎ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೇ 5 ರಂದು ನಡೆದ ಹಮ್ಮಿಕೊಳ್ಳಲಾಗಿದ್ದ ನೀಟ್ ಪರೀಕ್ಷೆಯಲ್ಲಿ ದೇಶಾದ್ಯಂತ 571 ಕೇಂದ್ರಗಳಲ್ಲಿ 24 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.





