ಹಿರಿಯ ಜೀವಗಳಿಗೆ ಆಸರೆಯಾಗಬೇಕಾದ ಮಕ್ಕಳೇ ಅವರನ್ನು ಕಡೆಗಣಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ತೆಲಂಗಾಣದ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಮಹತ್ವದ ಮತ್ತು ಮಾನವೀಯ ನಿರ್ಧಾರವೊಂದನ್ನು ಪ್ರಕಟಿಸಿದೆ. ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳದ ಸರ್ಕಾರಿ ನೌಕರರ ವೇತನಕ್ಕೆ ಕತ್ತರಿ ಹಾಕಲು ಸರ್ಕಾರ ನಿರ್ಧರಿಸಿದ್ದು, ಈ ನಡೆ ಆಡಳಿತ ವಲಯದಲ್ಲಿ ಸಂಚಲನ ಮೂಡಿಸಿದೆ.
ನಿರ್ಧಾರದ ಮುಖ್ಯಾಂಶಗಳೇನು?
ಸರ್ಕಾರಿ ನೌಕರರು ತಮ್ಮ ವಯಸ್ಸಾದ ಮತ್ತು ಅವಲಂಬಿತ ಪೋಷಕರ ಯೋಗಕ್ಷೇಮವನ್ನು ನೋಡಿಕೊಳ್ಳದಿದ್ದರೆ, ಅಂತಹ ನೌಕರರ ಒಟ್ಟು ವೇತನದಿಂದ ಶೇ.10ರಷ್ಟನ್ನು ಕಡಿತಗೊಳಿಸುವ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಹೀಗೆ ಕಡಿತಗೊಳಿಸಲಾದ ಹಣವನ್ನು ನೇರವಾಗಿ ನೊಂದ ಪೋಷಕರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸಾಮಾಜಿಕ ಭದ್ರತೆಯ ಅಸ್ತ್ರ
“ವೃದ್ಧಾಪ್ಯದಲ್ಲಿ ಪೋಷಕರ ರಕ್ಷಣೆ ಮಕ್ಕಳ ಆದ್ಯ ಕರ್ತವ್ಯ” ಎಂಬ ಸಂದೇಶವನ್ನು ಸಾರುವ ಈ ನಡೆ, ಕೇವಲ ಆಡಳಿತಾತ್ಮಕ ಆದೇಶವಾಗಿರದೆ ಸಾಮಾಜಿಕ ಕಳಕಳಿಯಾಗಿದೆ. ಸರ್ಕಾರಿ ಹುದ್ದೆಯಲ್ಲಿದ್ದು ಆರ್ಥಿಕವಾಗಿ ಸಬಲರಾಗಿದ್ದರೂ, ಪೋಷಕರು ಬೀದಿಪಾಲಾಗುವ ಅಥವಾ ವೃದ್ಧಾಶ್ರಮ ಸೇರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ‘ಚಾಟಿ’ ಬೀಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಯ್ದೆ-ಕಾನೂನುಗಳು ಬಡವರ ವಿರುದ್ಧವೇ ಅಥವಾ ಪ್ರಭಾವಿಗಳ ಪರವೇ?
ಈಗಾಗಲೇ ಅಸ್ಸಾಂ ರಾಜ್ಯದಲ್ಲಿ ಇಂತಹದೊಂದು ಕಾನೂನು ಜಾರಿಯಲ್ಲಿದ್ದು, ‘ಪೋಷಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ’ಯ ಅಡಿಯಲ್ಲಿ ತೆಲಂಗಾಣ ಸರ್ಕಾರವೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ. ನೌಕರರು ತಮ್ಮ ಸಂಬಳದ ಪಾಲನ್ನು ನೀಡುವ ಮೂಲಕ ಪೋಷಕರ ಔಷಧೋಪಚಾರ ಮತ್ತು ದಿನನಿತ್ಯದ ಖರ್ಚುಗಳಿಗೆ ಆಸರೆಯಾಗಬೇಕೆಂಬುದು ಇದರ ಮೂಲ ಉದ್ದೇಶವಾಗಿದೆ.
ಕರ್ತವ್ಯ ಮರೆತ ಮಕ್ಕಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದ್ದು, ಅಸಹಾಯಕ ಸ್ಥಿತಿಯಲ್ಲಿರುವ ಸಾವಿರಾರು ಹಿರಿಯ ನಾಗರಿಕರಿಗೆ ಈ ನಿರ್ಧಾರದಿಂದ ಆರ್ಥಿಕ ಭದ್ರತೆ ಮತ್ತು ಆತ್ಮಗೌರವದ ಬದುಕು ಸಿಗುವ ನಿರೀಕ್ಷೆಯಿದೆ.





