ಏಪ್ರಿಲ್ 1ರಿಂದ ಆರಂಭವಾಗುವ ಹೊಸ ಹಣಕಾಸು ವರ್ಷದೊಂದಿಗೆ ಭಾರತದ ಬ್ಯಾಂಕುಗಳು ಎಟಿಎಂ ಬಳಕೆಯಲ್ಲಿ ಸರಣಿ ಬದಲಾವಣೆಗಳನ್ನು ಜಾರಿಗೆ ತರಲು ಸಜ್ಜಾಗಿವೆ. ಪ್ರಮುಖ ಬ್ಯಾಂಕುಗಳು ನಗದು ಹಿಂತೆಗೆತದ ಮಿತಿ, ವಹಿವಾಟು ಶುಲ್ಕಗಳು ಹಾಗೂ ಗ್ರಾಹಕರು ನಗದು ಪಡೆಯುವ ವಿಧಾನದ ಮೇಲೆ ನಾನಾ ನಿಯಮಗಳನ್ನು ಪರಿಷ್ಕರಿಸಿವೆ.
ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಎಚ್‌ಡಿಎಫ್‌ಸಿ, ಎಟಿಎಂಗಳ ಮೂಲಕ ಮಾಡುವ UPI ಆಧಾರಿತ ನಗದು ಹಿಂತೆಗೆತಗಳನ್ನು ಇನ್ನು ಮುಂದೆ ಮಾಸಿಕ ಉಚಿತ ವಹಿವಾಟಿನ ಮಿತಿಗೆ ಸೇರಿಸುವುದಾಗಿ, ಅಂದರೆ, ಎಟಿಎಂ ಕಾರ್ಡ್ ಆಧಾರಿತ ನಗದು ಹಿಂತೆಗೆತದೊಂದಿಗೆ ಸೇರಿಸುವುದಾಗಿ ತಿಳಿಸಿದೆ. ಈ ಹಿಂದೆ ಇದನ್ನು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಇವುಗಳನ್ನು ಒಟ್ಟು ಉಚಿತ ವಹಿವಾಟುಗಳ ಸಂಖ್ಯೆಯಲ್ಲೇ ಲೆಕ್ಕಹಾಕಲಾಗುತ್ತದೆ.
ನಿಗದಿಪಡಿಸಿದ ಮಾಸಿಕ ಉಚಿತ ಮಿತಿಯನ್ನು ಮೀರಿದ ಗ್ರಾಹಕರಿಗೆ ಪ್ರತಿ ವಹಿವಾಟಿಗೆ 23 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಪ್ರಸ್ತುತ, ಹೆಚ್ಚಿನ ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗಳಲ್ಲೇ ತಿಂಗಳಿಗೆ ಐದು ಉಚಿತ ವಹಿವಾಟುಗಳನ್ನು ನಡೆಸಬಹುದು. ಜೊತೆಗೆ, ಎಚ್‌ಡಿಎಫ್‌ಸಿ ಗ್ರಾಹಕರು ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ವಹಿವಾಟು ನಡೆಸುವಾಗ ಮೆಟ್ರೋ ನಗರಗಳಲ್ಲಿ ಮೂರು ಮತ್ತು ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ ಐದು ಉಚಿತ ವಹಿವಾಟುಗಳನ್ನು ನಡೆಸಬಹುದು.
ಈ ಲೇಖನ ಓದಿದ್ದೀರಾ?: ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ
ಇದೇ ವೇಳೆ, ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಆಯ್ದ ಡೆಬಿಟ್ ಕಾರ್ಡ್‌ಗಳ ದೈನಂದಿನ ನಗದು ಹಿಂತೆಗೆತದ ಮಿತಿಯನ್ನು ಪರಿಷ್ಕರಿಸಿದೆ. ಹೊಸ ನಿಯಮಗಳ ಪ್ರಕಾರ, ಗ್ರಾಹಕರು ತಮ್ಮ ಕಾರ್ಡ್‌ಗಳ ಪ್ರಕಾರಕ್ಕೆ ಅನುಗುಣವಾಗಿ ದಿನಕ್ಕೆ 50,000 ರೂ. ನಿಂದ 75,000 ರೂ. ವರೆಗೆ ಹಣ ಹಿಂಪಡೆಯಬಹುದು.
ಈ ಹಿಂದೆ, 1,00,000 ರೂ. ವರೆಗೆ ಹಣ ಹಿಂತೆಗೆಯಲು ಅವಕಾಶ ನೀಡುತ್ತಿದ್ದ ಕೆಲವು ಕಾರ್ಡ್‌ಗಳ ಮಿತಿಯನ್ನು ಈಗ 75,000 ರೂ.ಗಳಿಗೆ ಕಡಿತಗೊಳಿಸಲಾಗಿದೆ. ಬಳಕೆಯನ್ನು ಪ್ರಮಾಣೀಕರಿಸಲು ಮತ್ತು ಅಪಾಯದ ಸಂಭವವನ್ನು ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ಹೇಳಿಕೊಂಡಿದೆ.
ಇದರ ಜೊತೆಗೆ, ಜಿಯೋ ಪೇಮೆಂಟ್ಸ್ ಬ್ಯಾಂಕ್ – ಹೊಸ ಕ್ಯೂಆರ್ ಕೋಡ್ ಆಧಾರಿತ ನಗದು ಹಿಂತೆಗೆತ ಸೌಲಭ್ಯವನ್ನು ಪರಿಚಯಿಸಿದೆ. ಇದು ಗ್ರಾಹಕರು ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮತ್ತು ನಿಗದಿಪಡಿಸಿದ ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳ ಬಳಿ ಯುಪಿಐ ಅಪ್ಲಿಕೇಶನ್ ಮೂಲಕ ಹಣ ಪಡೆಯಲು ಅವಕಾಶ ನೀಡುತ್ತದೆ.
ಈ ಬದಲಾವಣೆಗಳು ನಗದು ಬಳಕೆಯ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸುವುದರ ಜೊತೆಗೆ ಡಿಜಿಟಲ್ ಬ್ಯಾಂಕಿಂಗ್‌ನತ್ತ ಹೆಚ್ಚಿನ ಒಲವು ತೋರುವಂತೆ ಮಾಡುತ್ತಿವೆ.




