ಡೀಪ್‌ಫೇಕ್ ಹಾಗೂ ತಪ್ಪು ಮಾಹಿತಿಗಳ ಹಾವಳಿಯನ್ನು ತಡೆಯಲು ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಹತ್ವದ ಮಾರ್ಗಸೂಚಿ ಹೊರಡಿಸಿದೆ. ಇದರನ್ವಯ, ಕೃತಕ ಬುದ್ಧಿಮತ್ತೆ (AI) ಬಳಸಿ ಸಿದ್ಧಪಡಿಸಿದ ಆಡಿಯೋ, ವಿಡಿಯೋ ಅಥವಾ ಫೋಟೋಗಳಿಗೆ ಸ್ಪಷ್ಟವಾಗಿ ‘ಲೇಬಲ್’ (ಗುರುತು) ಅಥವಾ ‘ವಾಟರ್‌ಮಾರ್ಕ್’ ಹಾಕುವುದು ಕಡ್ಡಾಯವಾಗಿದೆ.
ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿರುವ ಸರ್ಕಾರ, ಬಳಕೆದಾರರು ಆಕ್ಷೇಪಾರ್ಹ ವಿಷಯಗಳ (ಮುಖ್ಯವಾಗಿ ಡೀಪ್‌ಫೇಕ್ ಅಥವಾ ವ್ಯಕ್ತಿಗಳ ನಕಲಿ ಸೃಷ್ಟಿ) ಬಗ್ಗೆ ದೂರು ನೀಡಿದರೆ, ಕೇವಲ 3 ಗಂಟೆಗಳ ಒಳಗೆ ಅದನ್ನು ವೇದಿಕೆಯಿಂದ ತೆಗೆದುಹಾಕಬೇಕು ಎಂದು ಸೂಚಿಸಿದೆ. ಈ ಹಿಂದೆ ಇದಕ್ಕಾಗಿ 24 ರಿಂದ 36 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನಕ್ಸಲ್ ನಿಗ್ರಹದ ನೆಪದಲ್ಲಿ ಪ್ರಕೃತಿ ಸಂಪತ್ತಿನ ಲೂಟಿಗಿಳಿಯಿತೇ ಸರ್ಕಾರ?
ಈ ಹೊಸ ನಿಯಮಗಳನ್ನು ಪಾಲಿಸದಿದ್ದಲ್ಲಿ, ಐಟಿ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಮಧ್ಯವರ್ತಿ ಸಂಸ್ಥೆಗಳಿಗೆ ಸಿಗುವ ‘ಸೇಫ್ ಹಾರ್ಬರ್’ (ಕಾನೂನು ರಕ್ಷಣೆ) ರದ್ದಾಗಲಿದೆ ಎಂದು ಸರ್ಕಾರ ಎಚ್ಚರಿಸಿದೆ. ಗೂಗಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಸಂಸ್ಥೆಗಳು ಕಂಟೆಂಟ್ ಲೇಬಲಿಂಗ್ ಮತ್ತು ತ್ವರಿತ ಕ್ರಮದ ನಿಯಮಗಳನ್ನು ಪಾಲಿಸುವುದು ಈಗ ಅನಿವಾರ್ಯವಾಗಿದೆ.





