ಶೀಘ್ರವೇ ದೇಶದಲ್ಲಿ ಪ್ರಧಾನಿ ಬದಲಾಗಬಹುದು, ನೂತನ ಪ್ರಧಾನಿ ಮಹಾರಾಷ್ಟ್ರದವರು ಆಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚೌಹಾಣ್ ಹೇಳಿದ್ದಾರೆ.
ಅವರ ಈ ಹೇಳಿಕೆಯು ಜಾಗತಿಕ ಮಟ್ಟದಲ್ಲಿನ ರಾಜಕೀಯ ಬದಲಾವಣೆಗೆ ಸಂಬಂಧಿಸಿದ್ದು, ಅದರಲ್ಲೂ ಡಿ.19ರಂದು ಬಿಡುಗಡೆಯಾಗಲಿರುವ ಅಮೆರಿಕದ ಲೈಂಗಿಕ ಹಗರಣಗಳ ಎಪ್‌ಸ್ಟೀನ್ ದಾಖಲೆಗಳಿಗೆ ಸಂಬಂಧಿಸಿದೆ ಎಂದು ಚೌಹಾಣ್ ಹೇಳಿದ್ದಾರೆ.
ಅಪರಾಧಿಯೊಬ್ಬನಿಗೆ ಸಂಬಂಧಿಸಿದ ಈ ದಾಖಲೆಯಲ್ಲಿ ವಿಶ್ವದ ಹಲವು ನಾಯಕರ ಹೆಸರಿದೆ ಎನ್ನಲಾಗಿದೆ. ಇತ್ತೀಚೆಗೆ ಚೌಹಾಣ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್‌ನಲ್ಲಿ ಮರಾಠಿಗರು ಪ್ರಧಾನಿಯಾಗುವ ಸಾಧ್ಯತೆ ಬರೆದಿದ್ದರು.
ಎಪ್‌ಸ್ಟೀನ್ ಅಮೆರಿಕದಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಹೊತ್ತ ಶ್ರೀಮಂತ ವ್ಯಕ್ತಿ. 2019ರಲ್ಲಿ ಜೈಲಿನಲ್ಲಿ ಸಾವನ್ನಪ್ಪಿದ್ದ ಅವರ ಸಂಬಂಧಿತ ದಾಖಲೆಗಳು ಈಗ ಬಿಡುಗಡೆಯಾಗುತ್ತಿವೆ. ಡಿಸೆಂಬರ್ 19ಕ್ಕೆ ಈ ಫೈಲ್ಸ್ ಸಾರ್ವಜನಿಕಗೊಳ್ಳಲಿವೆ. ಇದರಲ್ಲಿ ವಿಶ್ವದ ಪ್ರಮುಖ ನಾಯಕರು, ರಾಜಕಾರಣಿಗಳ ಹೆಸರುಗಳು ಬರಬಹುದು ಎಂಬ ಚರ್ಚೆಯಿದೆ. ಭಾರತದ ಕೆಲವು ದೊಡ್ಡ ರಾಜಕಾರಣಿಗಳ ಹೆಸರು ಬಂದರೆ, ದೇಶದಲ್ಲಿ ದೊಡ್ಡ ರಾಜಕೀಯ ತೊಂದರೆ ಉಂಟಾಗಬಹುದು. ಅದರಿಂದ ಶೀಘ್ರದಲ್ಲೇ ಭಾರತಕ್ಕೆ ಹೊಸ ಪ್ರಧಾನಮಂತ್ರಿ ಬರಬಹುದು ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕುಸ್ತಿ ಅಖಾಡಕ್ಕೆ ಮರಳುವ ವಿನೇಶ್ ಫೋಗಟ್ ನಿರ್ಧಾರಕ್ಕೆ ಸ್ವಾಗತ!
ಬಿಜೆಪಿ ವಲಯದಿಂದ ಈ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಇದು ಕಾಂಗ್ರೆಸ್‌ನ ರಾಜಕೀಯ ಆಟವಷ್ಟೇ ಎಂದು ಅವರು ಆರೋಪಿಸಿದ್ದಾರೆ. ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಭಾರತೀಯ ನಾಯಕರ ಹೆಸರುಗಳು ಬಂದರೆ ಮಾತ್ರ ರಾಜಕೀಯ ಬಿರುಗಾಳಿ ಸಾಧ್ಯ. ಆದರೆ ಇದುವರೆಗೆ ಬಿಡುಗಡೆಯಾದ ದಾಖಲೆಗಳಲ್ಲಿ ಗಂಭೀರ ಆರೋಪಗಳಿಲ್ಲ.
ಡಿಸೆಂಬರ್ 19ರ ಬಿಡುಗಡೆಯ ನಂತರವೇ ಸತ್ಯಾಂಶ ತಿಳಿಯಲಿದೆ. ಇದು ಭಾರತೀಯ ರಾಜಕಾರಣಕ್ಕೆ ದೊಡ್ಡ ತಿರುವು ನೀಡಬಹುದೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.





