ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲದ ಮೇಲೆ ಹೊಸ ಸೆಸ್ ವಿಧಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಹೊಸ ತೆರಿಗೆ ಮತ್ತು ಸೆಸ್‌ಗಳು ಫೆಬ್ರವರಿ 1ರಿಂದ ಜಾರಿಗೆ ಬರಲಿದ್ದು, ಸಿಗರೇಟ್, ಬೀಡಿ, ಪಾನ್ ಮಸಾಲಗಳ ಬೆಲೆಯೂ ಏರಿಕೆಯಾಗಲಿದೆ.
ಕೇಂದ್ರ ಸರ್ಕಾರವು ಬುಧವಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಪ್ರಕಾರ, ತಂಬಾಕು ಮತ್ತು ಪಾನ್ ಮಸಾಲದ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಿರುತ್ತವೆ. ಪ್ರಸ್ತುತ, ಈ ಮಾದಕ ಸರಕುಗಳ ಮೇಲೆ ವಿಧಿಸಲಾಗುತ್ತಿರುವ ಪರಿಹಾರ ಸೆಸ್ ಹೆಚ್ಚಾಗಲಿದೆ.
ಫೆಬ್ರವರಿ 1ರಿಂದ ಪಾನ್ ಮಸಾಲ, ಸಿಗರೇಟ್, ತಂಬಾಕು ಮತ್ತು ಅಂತಹ ಮಾದಕ ಉತ್ಪನ್ನಗಳ ಮೇಲೆ 40%ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಜೊತೆಗೆ, ಪಾನ್ ಮಸಾಲದ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುತ್ತದೆ. ಇನ್ನು, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು ಹೆಚ್ಚುವರಿ ಅಬಕಾರಿ ಸುಂಕವನ್ನು ಹೇರಲಾಗುತ್ತದೆ ಎಂದು ಅಧಿಸೂಚನೆ ಹೇಳಿದೆ.
ಡಿಸೆಂಬರ್‌ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಹಣಕಾಸು ಸಚಿವಾಲಯವು ಚೂಯಿಂಗ್ ತಂಬಾಕು, ಜರ್ದಾಯುಕ್ತ ತಂಬಾಕು ಹಾಗೂ ಗುಟ್ಕಾ ಪ್ಯಾಕಿಂಗ್ ಯಂತ್ರಗಳು (ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ) ನಿಯಮಗಳು-2026 ಮಸೂದೆಯನ್ನು ಮಂಡಿಸಿತ್ತು. ಈ ಮಸೂದೆಯು ಪಾನ್ ಮಸಾಲಾ ತಯಾರಿಕೆ ಮತ್ತು ತಂಬಾಕಿನ ಮೇಲಿನ ಅಬಕಾರಿ ಸುಂಕದ ಜೊತೆಗೆ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲು ಅವಕಾಶ ನೀಡುತ್ತದೆ. ಈ ಸಮೂದೆಯು ಸಂಸತ್‌ನಲ್ಲಿ ಅಂಗೀಕಾರಕೊಂಡಿದ್ದು, ಫೆಬ್ರವರಿ 1ರಿಂದ ಜಾರಿಗೆ ಬರಲಿದೆ.




