ಮುಂಬರುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಬಿಹಾರದ ಜನತೆಗೆ ಸಂದೇಶವೊಂದನ್ನು ರವಾನಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮ್ಮ ಬೆಂಬಲಕ್ಕಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜನರ ವಿಶ್ವಾಸದಿಂದಾಗಿಯೇ ಎರಡು ದಶಕಗಳಿಗೂ ಹೆಚ್ಚು ಕಾಲ ರಾಜ್ಯದ ಸೇವೆ ಮಾಡಲು ತಮಗೆ ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇವಲ ನಾಲ್ಕೇ ತಿಂಗಳಲ್ಲಿ ನಿತೀಶ್ ಕುಮಾರ್ ಅವರು ರಾಜ್ಯಸಭೆಯತ್ತ ಮುಖ ಮಾಡಿರುವುದು, ಮುಖ್ಯಮಂತ್ರಿ ಹುದ್ದೆಗೆ ಅವರ ಉತ್ತರಾಧಿಕಾರಿ ಯಾರು ಎಂಬ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈ ಕುರಿತು ‘ಎಕ್ಸ್’ ಜಾಲತಾಣದಲ್ಲಿ ಹಿಂದಿಯಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, “ಎರಡು ದಶಕಗಳಿಗೂ ಹೆಚ್ಚು ಕಾಲ ನೀವು ನನ್ನ ಮೇಲೆ ನಿರಂತರವಾಗಿ ವಿಶ್ವಾಸವಿಟ್ಟು ಬೆಂಬಲ ನೀಡಿದ್ದೀರಿ. ಆ ನಂಬಿಕೆಯ ಬಲದಿಂದಲೇ ನಾವು ಬಿಹಾರ ಮತ್ತು ನಿಮ್ಮೆಲ್ಲರ ಸೇವೆಯನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.
ತಮ್ಮ ರಾಜಕೀಯ ಪಯಣವನ್ನು ಮೆಲುಕು ಹಾಕಿರುವ ಜೆಡಿಯು ವರಿಷ್ಠ ನಿತೀಶ್, ಎಲ್ಲಾ ಶಾಸಕಾಂಗ ವೇದಿಕೆಗಳಲ್ಲಿ ಸೇವೆ ಸಲ್ಲಿಸುವ ಮಹದಾಸೆಯನ್ನು ತಾನು ಬಹುಕಾಲದಿಂದ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ.
”ನನ್ನ ಸಂಸದೀಯ ಪಯಣದ ಆರಂಭದಿಂದಲೂ, ಬಿಹಾರ ಶಾಸಕಾಂಗದ ಉಭಯ ಸದನಗಳು ಹಾಗೂ ಸಂಸತ್ತಿನ ಉಭಯ ಸದನಗಳ ಸದಸ್ಯನಾಗುವ ಆಸೆಯನ್ನು ನಾನು ಹೊಂದಿದ್ದೆ. ಆ ಆಶಯಕ್ಕೆ ಅನುಗುಣವಾಗಿ, ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ರಾಜ್ಯಸಭೆಯ ಸದಸ್ಯನಾಗಲು ಬಯಸುತ್ತಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್‌ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
ರಾಜ್ಯಸಭೆ ಪ್ರವೇಶಿಸುವ ತಮ್ಮ ಈ ನಿರ್ಧಾರದಿಂದ ರಾಜ್ಯದ ಬಗೆಗಿನ ತಮ್ಮ ಬದ್ಧತೆ ಕಡಿಮೆಯಾಗುವುದಿಲ್ಲ ಎಂದು ಬೆಂಬಲಿಗರಿಗೆ ಭರವಸೆ ನೀಡಿರುವ ಹಿರಿಯ ರಾಜಕಾರಣಿ, “ನಿಮ್ಮೊಂದಿಗಿನ ನನ್ನ ಬಾಂಧವ್ಯ ಭವಿಷ್ಯದಲ್ಲೂ ಮುಂದುವರಿಯಲಿದೆ ಮತ್ತು ಅಭಿವೃದ್ಧಿ ಹೊಂದಿದ ಬಿಹಾರವನ್ನು ನಿರ್ಮಿಸಲು ನಿಮ್ಮೊಂದಿಗೆ ಸೇರಿ ಕೆಲಸ ಮಾಡುವ ನನ್ನ ಸಂಕಲ್ಪ ಅಚಲವಾಗಿರಲಿದೆ ಎಂದು ನಾನು ಅತ್ಯಂತ ಪ್ರಾಮಾಣಿಕವಾಗಿ ಭರವಸೆ ನೀಡುತ್ತೇನೆ. ರಾಜ್ಯದಲ್ಲಿ ರಚನೆಯಾಗುವ ಹೊಸ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಇರಲಿದೆ” ಎಂದಿದ್ದಾರೆ.
ಒಂದು ವೇಳೆ ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ಆಯ್ಕೆಯಾದರೆ, ಅದು ಅವರ ಸುದೀರ್ಘ ರಾಜಕೀಯ ಜೀವನದ ಮತ್ತೊಂದು ಮೈಲಿಗಲ್ಲಾಗಲಿದೆ. ಅವರು ಈಗಾಗಲೇ ಬಿಹಾರ ವಿಧಾನಸಭೆ, ಬಿಹಾರ ವಿಧಾನ ಪರಿಷತ್ತು ಹಾಗೂ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ರಾಜ್ಯಸಭೆ ಪ್ರವೇಶಿಸುವ ಮೂಲಕ ಬಿಹಾರ ಶಾಸಕಾಂಗದ ಉಭಯ ಸದನಗಳು ಹಾಗೂ ಸಂಸತ್ತಿನ ಉಭಯ ಸದನಗಳು ಸೇರಿದಂತೆ ಒಟ್ಟು ನಾಲ್ಕೂ ಶಾಸಕಾಂಗ ವೇದಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅಪರೂಪದ ನಾಯಕರ ಸಾಲಿಗೆ ಅವರು ಸೇರ್ಪಡೆಯಾಗಲಿದ್ದಾರೆ.
ಜೆಡಿಯು ಮೂಲಗಳ ಪ್ರಕಾರ, ಮಾರ್ಚ್ 16ರಂದು ನಿಗದಿಯಾಗಿರುವ ರಾಜ್ಯಸಭಾ ಚುನಾವಣೆ ಮುಗಿಯುವವರೆಗೂ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವ ನಿರೀಕ್ಷೆಯಿದೆ.





