ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಭಾನುವಾರ ಅಧಿಕೃತವಾಗಿ ಆಡಳಿತಾರೂಢ ಜನತಾದಳ (ಯುನೈಟೆಡ್) (ಜೆಡಿಯು) ಸೇರ್ಪಡೆಯಾಗಿದ್ದಾರೆ.
ಮುಂದಿನ ತಿಂಗಳು ನಿತೀಶ್ ಕುಮಾರ್ ತಮ್ಮ ಹುದ್ದೆಯನ್ನು ತ್ಯಜಿಸಲಿದ್ದು, ಅದಾದ ಬಳಿಕ ಬಿಜೆಪಿ ನಾಯಕರೊಬ್ಬರು ಮುಖ್ಯಮಂತ್ರಿಯಾಗಲಿದ್ದಾರೆ. ನಿಶಾಂತ್ ಕುಮಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ. ಅದಕ್ಕೂ ಮುನ್ನ ನಿಶಾಂತ್ ಜೆಡಿಯು ಸೇರಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ ರಾಜಕೀಯದಲ್ಲಿ ‘ಪುತ್ರೋದಯ’ – ಕುಟುಂಬ ರಾಜಕಾರಣ ಕೆಸರಿನಲ್ಲಿ ಬಿಜೆಪಿಯ ಮಜ್ಜನ
ತಮ್ಮ ಜೀವನದುದ್ದಕ್ಕೂ ವಂಶಪಾರಂಪರ್ಯ ರಾಜಕೀಯವನ್ನು ವಿರೋಧಿಸುತ್ತಾ ಬಂದಿರುವ ನಿತೀಶ್, ಇದೀಗ ರಾಜ್ಯಸಭಾ ಸದಸ್ಯರಾಗಲಿದ್ದಾರೆ. ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಲು ನಿರ್ಧರಿಸಿದ್ದಾರೆ.
ಜೆಡಿಯು ಸೇರ್ಪಡೆಯಾದ ಬಳಿಕ ಮಾತನಾಡಿದ ನಿಶಾಂತ್, “ನನ್ನ ತಂದೆ ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ತೆರಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಾನು ಪಕ್ಷದ ನೇತೃತ್ವ ವಹಿಸಬೇಕಾಗಿದೆ. ಸಂಸತ್ತಿನಲ್ಲಿ ಮೇಲ್ಮನೆ ಸದಸ್ಯರಾಗುವುದು ಅವರ ವೈಯಕ್ತಿಕ ನಿರ್ಧಾರವಾಗಿತ್ತು. ನಾವೆಲ್ಲರೂ ಅದನ್ನು ಸ್ವಾಗತಿಸಿ ಅವರ ಬೆಂಬಲಕ್ಕೆ ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.
“ತಂದೆ ನಮಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತಾರೆ. ನಾವೆಲ್ಲರೂ ಪಕ್ಷವನ್ನು ಬಲಪಡಿಸಲು ಮತ್ತು ಜನರ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸುತ್ತೇವೆ” ಎಂದು ನಿಶಾಂತ್ ತಿಳಿಸಿದ್ದಾರೆ.





