2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಆದರೆ, ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಇತರ ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
ವಿಚಾರಣಾ ಪೂರ್ವದಲ್ಲಿ ಆರೋಪಿಗಳು ಅನುಭವಿಸುತ್ತಿರುವ ದೀರ್ಘಕಾಲದ ಸೆರೆವಾಸಕ್ಕಿಂತ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಪರಿಗಣನೆಯೇ ಹೆಚ್ಚು ಮುಖ್ಯವಾದುದು ಎಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ‘ಕಾಮುಕರ’ ವಿರುದ್ಧ ಕುಡುಗೋಲು ಹಿಡಿದ ಮಹಿಳಾ ಶಕ್ತಿ!
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು, ಪ್ರಕರಣದ ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ 2020ರ ಫೆಬ್ರುವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಗಲಭೆ ನಡೆದಿತ್ತು. ಈ ಗಲಭೆಗೆ ಪಿತೂರಿ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ‘ಯುಎಪಿಎ’ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕಳೆದ ಹಲವು ವರ್ಷಗಳಿಂದ ಜೈಲಿನಲ್ಲಿರುವ ಆರೋಪಿಗಳು, ವಿಳಂಬವಾಗುತ್ತಿರುವ ವಿಚಾರಣೆ ಮತ್ತು ದೀರ್ಘಕಾಲದ ಸೆರೆವಾಸವನ್ನು ಮುಂದಿಟ್ಟುಕೊಂಡು ಜಾಮೀನು ಕೋರಿದ್ದರು.





