‘‘ಭಾರತವು ‘ಹಿಂದೂ ರಾಷ್ಟ್ರ’ ಎಂಬುದು ಸತ್ಯ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎಂಬುದಕ್ಕೆ ಸಂವಿಧಾನದ ಅನುಮೋದನೆ ಹೇಗೆ ಅಗತ್ಯವಿಲ್ಲವೋ, ಹಾಗೆಯೇ ಭಾರತ ಹಿಂದೂ ರಾಷ್ಟ್ರ ಎಂದು ಹೇಳುವುದಕ್ಕೂ ಸಂವಿಧಾನದ ಅನುಮೋದನೆ ಬೇಕಿಲ್ಲ,’’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.
ಕೋಲ್ಕತ್ತಾ ನಗರದಲ್ಲಿ ಆಯೋಜಿಸಲಾಗಿದ್ದ ಆರ್‌ಎಸ್‌ಎಸ್‌ನ ಶತಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾನುವಾರ ಮಾತನಾಡಿದರು. ಭಾರತದಲ್ಲಿ ಭಾರತೀಯ ಸಂಸ್ಕೃತಿಯನ್ನು ಗೌರವಿಸುವವರೆಗೂ ಭಾರತವು ಹಿಂದೂ ರಾಷ್ಟ್ರವಾಗಿಯೇ ಉಳಿಯಲಿದೆ ಎಂದು ಅವರು ಪುನರುಚ್ಚರಿಸಿದರು.
‘‘ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ ಎಂಬುದು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಅದಕ್ಕೂ ಸಾಂವಿಧಾನಿಕ ಅನುಮೋದನೆ ಬೇಕೇ? ಹಾಗೆಯೇ ಹಿಂದೂಸ್ತಾನವು ಹಿಂದೂ ರಾಷ್ಟ್ರ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವ, ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಮತ್ತು ಭಾರತೀಯ ಪೂರ್ವಜರ ವೈಭವವನ್ನು ಸ್ಮರಿಸುವ ಒಬ್ಬ ವ್ಯಕ್ತಿ ಈ ಭೂಮಿಯಲ್ಲಿ ಜೀವಂತವಿರುವವರೆಗೂ ಭಾರತವು ಹಿಂದೂ ರಾಷ್ಟ್ರವಾಗಿಯೇ ಇರುತ್ತದೆ. ಇದು ಸಂಘದ ಸಿದ್ಧಾಂತ,’’ ಎಂದು ಅವರು ವಿವರಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಾಯು ಮಾಲಿನ್ಯದ ಚರ್ಚೆಯೇ ಇಲ್ಲದೆ ಮುಗಿಯಿತು ಸಂಸತ್ ಅಧಿವೇಶನ!
ಸಂವಿಧಾನದಲ್ಲಿನ ಉಲ್ಲೇಖಗಳ ಕುರಿತು ಮಾತನಾಡಿದ ಅವರು, ‘‘ಸಂಸತ್ತು ಎಂದಾದರೂ ಸಂವಿಧಾನವನ್ನು ತಿದ್ದುಪಡಿ ಮಾಡಿ ಆ ಪದವನ್ನು (ಹಿಂದೂ ರಾಷ್ಟ್ರ) ಸೇರಿಸಲಿ ಅಥವಾ ಬಿಡಲಿ, ಅದು ಪರವಾಗಿಲ್ಲ. ಆ ಪದದ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ನಾವು ಹಿಂದೂಗಳು ಮತ್ತು ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರ ಎಂಬುದು ಸತ್ಯ,’’ ಎಂದರು.
‘ನಾವು ಮುಸ್ಲಿಂ ವಿರೋಧಿಗಳಲ್ಲ’
ಆರ್‌ಎಸ್‌ಎಸ್ ಮುಸ್ಲಿಂ ವಿರೋಧಿ ಎಂಬ ಗ್ರಹಿಕೆಯ ಬಗ್ಗೆ ಪ್ರಸ್ತಾಪಿಸಿದ ಭಾಗವತ್, ‘‘ಸಂಘವು ಹಿಂದೂಗಳನ್ನು ಸಂಘಟಿಸುತ್ತದೆ ಮತ್ತು ಅವರ ರಕ್ಷಣೆಗಾಗಿ ಪ್ರತಿಪಾದಿಸುತ್ತದೆ. ನಾವು ಕಟ್ಟಾ ರಾಷ್ಟ್ರವಾದಿಗಳು ಎಂಬುದು ಜನರಿಗೆ ಅರ್ಥವಾಗಿದೆ. ಆದರೆ ನಾವು ಮುಸ್ಲಿಂ ವಿರೋಧಿಗಳಲ್ಲ. ಸಂಘದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಜನರು ಶಾಖೆಗಳಿಗೆ ಭೇಟಿ ನೀಡಿ ಕಾರ್ಯವೈಖರಿಯನ್ನು ನೋಡಬೇಕು ಎಂದು ಹೇಳಿದರು.





