ಇ-ಕಾಮರ್ಸ್ ವಲಯದಲ್ಲಿ ತೀವ್ರ ಪೈಪೋಟಿ ಹುಟ್ಟುಹಾಕಿದ್ದ ’10 ನಿಮಿಷಗಳಲ್ಲಿ ಡೆಲಿವರಿ’ ಸೇವೆಗೆ ಇದೀಗ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಡೆಲಿವರಿ ಪಾರ್ಟ್ನರ್‌ಗಳ (ಡೆಲಿವರಿ ಬಾಯ್ಸ್) ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಬ್ಲಿಂಕಿಟ್ (Blinkit), ಜೆಪ್ಟೋ (Zepto) ಸೇರಿದಂತೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.
ಈ ಬೆಳವಣಿಗೆಯ ನಂತರ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ತಮ್ಮ ಪ್ರಚಾರದ ಸ್ಲೋಗನ್‌ಗಳಿಂದ ’10 ನಿಮಿಷದ ಡೆಲಿವರಿ’ ಎಂಬ ಭರವಸೆಯನ್ನು ಕೈಬಿಡಬೇಕಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಮಾಂಡವಿಯಾ ಅವರು ಇತ್ತೀಚೆಗೆ ಝೊಮ್ಯಾಟೊ, ಸ್ವಿಗ್ಗಿ, ಬ್ಲಿಂಕಿಟ್ ಮತ್ತು ಜೆಪ್ಟೋದಂತಹ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಡೆಲಿವರಿ ಸಮಯದ ಮಿತಿ ಮತ್ತು ಅದರಿಂದಾಗುತ್ತಿರುವ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ಡೆಲಿವರಿ ಸಿಬ್ಬಂದಿಯ ಪ್ರಾಣದ ಹಂಗು ತೊರೆದು ಓಡಾಡುವುದನ್ನು ತಪ್ಪಿಸಲು ಸುರಕ್ಷತಾ ಕ್ರಮಗಳಿಗೆ ಒತ್ತು ನೀಡುವಂತೆ ನಿರ್ದೇಶಿಸಲಾಗಿದೆ.
ಈಗಾಗಲೇ ಬ್ಲಿಂಕಿಟ್ ತನ್ನ ಟ್ಯಾಗ್‌ಲೈನ್ ಅನ್ನು ಪರಿಷ್ಕರಿಸಿದೆ. ಈ ಹಿಂದೆ ಇದ್ದ “10 ನಿಮಿಷಗಳಲ್ಲಿ 10,000ಕ್ಕೂ ಹೆಚ್ಚು ಉತ್ಪನ್ನಗಳ ಡೆಲಿವರಿ” ಎಂಬ ವಾಕ್ಯದ ಬದಲಿಗೆ, “30,000ಕ್ಕೂ ಹೆಚ್ಚು ಉತ್ಪನ್ನಗಳು ನಿಮ್ಮ ಮನೆ ಬಾಗಿಲಿಗೆ” ಎಂದು ಬದಲಾಯಿಸಿಕೊಂಡಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಯ್ದೆ-ಕಾನೂನುಗಳು ಬಡವರ ವಿರುದ್ಧವೇ ಅಥವಾ ಪ್ರಭಾವಿಗಳ ಪರವೇ?
10 ನಿಮಿಷಗಳ ಡೆಲಿವರಿ ಭರವಸೆಯು ಸಾರ್ವಜನಿಕ ವಲಯದಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದು ರಸ್ತೆ ಸುರಕ್ಷತೆ ಮತ್ತು ಡೆಲಿವರಿ ಸಿಬ್ಬಂದಿಯ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಡಿಸೆಂಬರ್ 25 ರಂದು ಗಿಗ್ ಕಾರ್ಮಿಕರ ಒಕ್ಕೂಟಗಳು ಉತ್ತಮ ವೇತನ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು. ಅವೈಜ್ಞಾನಿಕವಾದ ಸಮಯ ಆಧಾರಿತ ಡೆಲಿವರಿ ಗುರಿಗಳನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದವು.
ತಮ್ಮ ಬೇಡಿಕೆಗಳು ಈಡೇರದಿದ್ದರೆ ಡಿಸೆಂಬರ್ 31 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದವು. ಈ ಎಚ್ಚರಿಕೆಯ ಬೆನ್ನಲ್ಲೇ ಸ್ವಿಗ್ಗಿ ಮತ್ತು ಝೊಮ್ಯಾಟೊ ಸಂಸ್ಥೆಗಳು ಪ್ರೋತ್ಸಾಹಕ ಧನವನ್ನು ಹೆಚ್ಚಿಸಿವೆ.
ಗಿಗ್ ಕಾರ್ಮಿಕರಿಗೂ ಕನಿಷ್ಠ ವೇತನ, ಆರೋಗ್ಯ, ಔದ್ಯೋಗಿಕ ಸುರಕ್ಷತೆ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುವ ‘ಸಾಮಾಜಿಕ ಭದ್ರತಾ ಸಂಹಿತೆ-2020’ರ ಕರಡು ನಿಯಮಗಳನ್ನು ಕೇಂದ್ರ ಕಾರ್ಮಿಕ ಸಚಿವಾಲಯ ಪ್ರಕಟಿಸಿದೆ. ಬರುವ ಏಪ್ರಿಲ್ 1 ರಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ.





