ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಏಕರೂಪ ನಾಗರಿಕ ಸಂಹಿತೆ ಕಾಯ್ದೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಕೋಲ್ಕತ್ತಾದ ರ‍್ಯಾಲಿಯಲ್ಲಿ ಪಾಲ್ಗೊಂಡ ಅಮಿತ್ ಶಾ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ವಿದೇಶಿಯರ ಒಳನುಸುಳುವಿಕೆ, ಭ್ರಷ್ಟಾಚಾರ, ರಾಜಕೀಯ ಹಿಂಸಾಚಾರ ಎಲ್ಲೆ ಮೀರುತ್ತಿದ್ದು, ರಾಜ್ಯವನ್ನು ಹಾಳುಗೆಡವಲಾಗುತ್ತಿದೆ. ವಿದೇಶಿಯರನ್ನು ಒಳನುಸುಳುವಿಕೆಯನ್ನು ಬೆಂಬಲಿಸುವಿಕೆಗಾಗಿ ಮಮತಾ ಬ್ಯಾನರ್ಜಿ ಸಿಎಎ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಈ ಒಳನುಸುಳುವಿಕೆಯಿಂದ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅವಶೇಷಗಳು ಸುರಂಗದೊಳಗೆ ಬಿದ್ದಾಗ ಏನಾಯಿತು?: ಘಟನೆ ಬಿಚ್ಚಿಟ್ಟ ಸಿಲುಕಿಕೊಂಡಿದ್ದ ಕಾರ್ಮಿಕ
2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಚುನಾಯಿಸುವ ಮೂಲಕ ಮಮತಾ ಸರ್ಕಾರವನ್ನು ಕಿತ್ತೊಗೆಯುವಂತೆ ಜನರನ್ನು ಒತ್ತಾಯಿಸಿದ ಅಮಿತ್ ಶಾ, 2024 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವ ಮೂಲಕ ಈಗಲೇ ಅದಕ್ಕೆ ಮುನ್ನುಡಿಯನ್ನು ಬರೆಯಬೇಕು ಎಂದು ಮನವಿ ಮಾಡಿದರು.
ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನ್ಯಾಯದ ಮೂಲಕ ಗೆಲುವು ಸಾಧಿಸಿದೆ. ಆದರೆ ಬಿಜೆಪಿ ಶೂನ್ಯದಿಂದ 77 ಸ್ಥಾನಗಳಿಗೆ ಜಿಗಿದಿದೆ ಎಂದು ಅಮಿತ್ ಶಾ ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದಲ್ಲಿ 212 ಬಿಜೆಪಿ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ ಮತ್ತು 2026 ರ ವಿಧಾನಸಭಾ ಚುನಾವಣೆಯಲ್ಲಿ ಜನರು ತಮ್ಮ ಮತಗಳ ಮೂಲಕ ಈ ಹತ್ಯೆಗಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದು ಗೃಹ ಸಚಿವರು ಹೇಳಿದರು.





