ರಾಷ್ಟ್ರಪತಿಯವರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಲೋಕಸಭೆಯಲ್ಲಿ ಉತ್ತರ ನೀಡಬೇಕಿತ್ತು. ಆದರೆ, ಸದನ ಸೇರಿದ ಕೆಲವೇ ಕ್ಷಣಗಳಲ್ಲಿ ಉಂಟಾದ ತೀವ್ರ ಗದ್ದಲದಿಂದಾಗಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಸಂಜೆ 5 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಎಂಟು ಮಂದಿ ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ, ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು.
ವಿಶೇಷವೆಂದರೆ, ವಿರೋಧ ಪಕ್ಷದ ಹಲವು ಮಹಿಳಾ ಸಂಸದರು ಆಡಳಿತ ಪಕ್ಷದ ಆಸನಗಳನ್ನು ತಡೆದು ನಿಂತರು ಮತ್ತು ಪ್ರಧಾನಮಂತ್ರಿಯವರ ಆಸನವನ್ನೂ ಆಕ್ರಮಿಸಿಕೊಂಡು ಪ್ರತಿಭಟಿಸಿದರು. ಈ ವೇಳೆ “ಸರಿಯಾದುದನ್ನು ಮಾಡಿ” ಎಂದು ಬರೆದಿದ್ದ ದೊಡ್ಡ ಬ್ಯಾನರ್ ಒಂದನ್ನು ಅವರು ಪ್ರದರ್ಶಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹಂಗಾಮಿ ಸ್ಪೀಕರ್ ಆಗಿದ್ದ ಬಿಜೆಪಿ ಸಂಸದೆ ಸಂಧ್ಯಾ ರೇ ಅವರು ಕಲಾಪವನ್ನು ಮುಂದೂಡಿದರು.
ಸಂಸತ್ತಿನಿಂದ ಹೊರಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, “ಪ್ರಧಾನಿ ಮೋದಿ ಸದನಕ್ಕೆ ಬರಲು ಹೆದರಿದ್ದಾರೆ. ಅವರು ಹೆದರಿರುವ ಕಾರಣಕ್ಕೇ ಸದನಕ್ಕೆ ಆಗಮಿಸಲಿಲ್ಲ. ಕೇಂದ್ರ ರೈಲ್ವೆ ಸಚಿವರು ಮತ್ತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಲೆಟ್ ಟ್ರೈನ್‌ನಂತೆ ಓಡಿಹೋದರು,” ಎಂದು ವ್ಯಂಗ್ಯವಾಡಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇಸ್ರೇಲ್ ಸಂಗದಲ್ಲಿ ‘ಶಿಕಾರಿ’- ಪ್ಯಾಲೆಸ್ತೀನ್ ಜೊತೆ ‘ಪರಾರಿ’; ಕಪಟ ನಾಟಕವಲ್ಲವೇ ಮೋದೀಜಿ?
ಈ ಕುರಿತು ‘ಎಕ್ಸ್’ ತಾಣದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ನಾನು ಮೊದಲೇ ಹೇಳಿದಂತೆ, ಪ್ರಧಾನಿ ಮೋದಿ ಸಂಸತ್ತಿಗೆ ಬರುವುದಿಲ್ಲ. ಏಕೆಂದರೆ ಅವರು ಭಯಗೊಂಡಿದ್ದಾರೆ ಮತ್ತು ಸತ್ಯವನ್ನು ಎದುರಿಸಲು ಬಯಸುತ್ತಿಲ್ಲ,” ಎಂದು ಟೀಕಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಸಂಸತ್ತಿಗೆ ಬಂದರೆ ಅವರಿಗೆ ಜನರಲ್ ನರವಣೆ ಅವರ ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತೇನೆ. 2020ರ ಪೂರ್ವ ಲಡಾಖ್ ಬಿಕ್ಕಟ್ಟಿನ ಸಮಯದಲ್ಲಿ ರಾಜಕೀಯ ನಾಯಕತ್ವವು ಸೇನೆಯನ್ನು ಹೇಗೆ ಏಕಾಂಗಿಯಾಗಿ ಬಿಟ್ಟಿತ್ತು ಎಂಬುದನ್ನು ಈ ಪುಸ್ತಕ ಬಹಿರಂಗಪಡಿಸುತ್ತದೆ. ಇದು ಯಾವುದೇ ವಿರೋಧ ಪಕ್ಷದ ನಾಯಕರು ಅಥವಾ ವಿದೇಶಿ ಲೇಖಕರು ಬರೆದ ಪುಸ್ತಕವಲ್ಲ, ಬದಲಿಗೆ ದೇಶದ ಮಾಜಿ ಸೇನಾ ಮುಖ್ಯಸ್ಥರೇ ಬರೆದಿದ್ದಾರೆ. ಆದರೆ ಸಂಪುಟ ಸಚಿವರ ಪ್ರಕಾರ ಇಂತಹ ಪುಸ್ತಕವೇ ಅಸ್ತಿತ್ವದಲ್ಲಿಲ್ಲ ಎಂಬುದು ಆಶ್ಚರ್ಯಕರ,” ಎಂದು ಹೇಳಿದ್ದರು.
ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ, ಮಾಜಿ ಸೇನಾ ಮುಖ್ಯಸ್ಥ ನರವಣೆ ಅವರ ಆತ್ಮಚರಿತ್ರೆಯನ್ನು ಉಲ್ಲೇಖಿಸಿ ಚೀನಾ-ಭಾರತ ಗಡಿ ಸಂಘರ್ಷದ ವಿಚಾರ ಪ್ರಸ್ತಾಪಿಸಿದ ನಂತರ ಲೋಕಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಸಂಘರ್ಷ ತಾರಕಕ್ಕೇರಿತ್ತು. ಇದೇ ಕಾರಣಕ್ಕೆ ಮಂಗಳವಾರ ಎಂಟು ಕಾಂಗ್ರೆಸ್ ಸಂಸದರನ್ನು ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಲಾಗಿತ್ತು.





