ಉತ್ತರ ಪ್ರದೇಶದ ನೋಯ್ಡಾದಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಕಾರು ಚರಂಡಿಯ ಗೋಡೆಗೆ ಡಿಕ್ಕಿಹೊಡೆದು ಆಳವಾದ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಸಾವನ್ನಪ್ಪಿದ್ದಾರೆ. ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರ ರಾತ್ರಿ ನೋಯ್ಡಾದ ಸೆಕ್ಟರ್ 150 ಬಳಿ ಘಟನೆ ನಡೆದಿದ್ದು, ಮೃತ ಯುವಕನನ್ನು ಯುವರಾಜ್ ಮೆಹ್ತಾ ಎಂದು ಗುರುತಿಸಲಾಗಿದೆ.
ಮೆಹ್ತಾ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ದಟ್ಟವಾದ ಮಂಜು ಆವರಿಸಿದ್ದರಿಂದ ಮತ್ತು ರಸ್ತೆಯಲ್ಲಿ ಪ್ರತಿಫಲಕಗಳು ಇಲ್ಲದ ಕಾರಣ, ಅವರ ಕಾರು ಚರಂಡಿಯ ಗೋಡೆಗೆ ಡಿಕ್ಕಿ ಹೊಡೆದಿದೆ. ಬಳಿಕ, ನೀರು ತುಂಬಿದ್ದ 70 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಕಂದಕಕ್ಕೆ ಬಿದ್ದ ಮೆಹ್ತಾ ಅವರು ಸಹಾಯಕ್ಕಾಗಿ ಕಿರುಚಿಕೊಂಡಿದ್ದಾರೆ. ಅವರ ಕಿರುಚಾಟವನ್ನು ಕೇಳಿದ ದಾರಿಹೋಕರು ಸಹಾಯ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಕಾರು ಸಂಪೂರ್ಣವಾಗಿ ಮುಳುಗಿಹೋಗಿದೆ ಎಂದು ವರದಿಯಾಗಿದೆ.
ಕಾರಿನೊಳಗಿದ್ದ ಮೆಹ್ತಾ ಅವರು ಕೊನೆಯ ಕ್ಷಣದಲ್ಲಿಯೂ ತನ್ನ ತಂದೆ ರಾಜ್‌ಕುಮಾರ್ ಮೆಹ್ತಾ ಅವರಿಗೆ ಕರೆ ಮಾಡಿ, “ಅಪ್ಪಾ, ನಾನು ನೀರು ತುಂಬಿದ ಆಳವಾದ ಗುಂಡಿಗೆ ಬಿದ್ದಿದ್ದೇನೆ. ನಾನು ಮುಳುಗುತ್ತಿದ್ದೇನೆ. ದಯವಿಟ್ಟು ಬಂದು ನನ್ನನ್ನು ಉಳಿಸಿ” ಎಂದು ಕೇಳಿಕೊಂಡಿದ್ದಾಗಿ ವರದಿಯಾಗಿದೆ.
ಕಾರು ಕಂದಕಕ್ಕೆ ಬಿದ್ದ ಕೆಲವೇ ನಿಮಿಷಗಳಲ್ಲಿ, ಸ್ಥಳೀಯ ಪೊಲೀಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಸುಮಾರು ಐದು ಗಂಟೆಗಳ ಕಾರ್ಯಾಚರಣೆಯ ಬಳಿಕ, ಕಾರನ್ನು ಕಂದಕದಿಂದ ಹೊರತೆಗೆಯಲಾಗಿದೆ. ಆದರೆ, ಆ ವೇಳೆಗಾಗಲೇ, ಮೆಹ್ತಾ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.
ಈ ಲೇಖನ ಓದಿದ್ದೀರಾ?: ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಬೆಳಗಾವಿಗೆ ಸಿಕ್ಕಿದ್ದೆಷ್ಟು?
ಘಟನೆಯ ನಂತರ, ಮೆಹ್ತಾ ಅವರ ಕುಟುಂಬವು ದೂರು ದಾಖಲಿಸಿದೆ. ಅಧಿಕಾರಿಗಳು ಸರ್ವಿಸ್ ರಸ್ತೆಯ ಉದ್ದಕ್ಕೂ ಪ್ರತಿಫಲಕಗಳನ್ನು ಅಳವಡಿಸಿಲ್ಲ ಅಥವಾ ಚರಂಡಿಗಳನ್ನು ಮುಚ್ಚಿಲ್ಲ ಎಂದು ಆರೋಪಿಸಿದ್ದಾರೆ. ದಟ್ಟವಾದ ಮಂಜಿನ ನಡುವೆ ರಸ್ತೆಯ ಉದ್ದಕ್ಕೂ ಪ್ರತಿಫಲಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣವೆಂದು ದೂರಿದ್ದಾರೆ.
ರಸ್ತೆ ನಿರ್ವಹಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದರೂ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯ ಉಸ್ತುವಾರಿ ಸರ್ವೇಶ್ ಕುಮಾರ್ ಹೇಳಿದ್ದಾರೆ.
ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಕೆಲವು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಸರ್ವಿಸ್ ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಪದೇ ಪದೇ ಒತ್ತಾಯಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ, ಅಧಿಕಾರಿಗಳು ಆಳವಾದ ಕಂದಕವನ್ನು ಕಸ ಮತ್ತು ಅವಶೇಷಗಳಿಂದ ಮುಚ್ಚಿದ್ದಾರೆ.




