ತಮಿಳುನಾಡು ವಿಧಾನಸಭಾ ಚುನಾವಣೆಯ ವಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ ‘ಹಿಂದಿ ಹೇರಿಕೆ’ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇದೇ ಹೊತ್ತಿನಲ್ಲಿ, ತಮಿಳುನಾಡಿನ ಕೃಷಿ ಸಚಿವ ಎಂಆರ್‌ಕೆ ಪನ್ನೀರ್‌ಸೆಲ್ವಂ ಅವರ ಹೇಳಿಕೆ ವಿವಾದ ಹುಟ್ಟುಹಾಕಿದೆ. ಪನ್ನೀರ್‌ಸೆಲ್ವಂ ಅವರು ದ್ವಿಭಾಷಾ ನೀತಿಯ ಕುರಿತು ಮಾತನಾಡಿದ್ದು, “ಉತ್ತರ ಭಾರತೀಯರಿಗೆ ಹಿಂದಿ ಮಾತ್ರವೇ ಗೊತ್ತು. ಅವರು ದಕ್ಷಿಣ ರಾಜ್ಯಗಲಲ್ಲಿ ಪಾನಿಪುರಿ ಮಾರಲು ಬರುತ್ತಾರೆ” ಎಂದು ಹೇಳಿದ್ದಾರೆ.
“ತಮಿಳುನಾಡಿನಲ್ಲಿ ತಮಿಳು ಮತ್ತು ಇಂಗ್ಲಿಷ್‌ಅನ್ನು ಕಲಿಸುವ ದ್ವಿ-ಭಾಷಾ ನೀತಿ ಇರುವುದರಿಂದ ತಮಿಳರು ಪ್ರಯೋಜನ ಪಡೆಯುತ್ತಿದ್ದಾರೆ. ನಮ್ಮ ಮಕ್ಕಳು ಇಂಗ್ಲಿಷ್‌ಅನ್ನು ಚೆನ್ನಾಗಿ ಕಲಿಯುತ್ತಾರೆ. ಅವರು ಉತ್ತಮ ಶಿಕ್ಷಣ ಪಡೆದು ಅಮೆರಿಕ ಅಥವಾ ಅಂಡನ್‌ನಲ್ಲಿ ಉದ್ಯೋಗಗಳನ್ನು ಪಡೆಯುತ್ತಾರೆ. ಆದರೆ, ಉತ್ತರ ಭಾರತೀಯರು ಹಿಂದಿ ಮಾತ್ರ ಕಲಿತಿದ್ದಾರೆ. ಅವರು ದಕ್ಷಿಣ ರಾಜ್ಯಗಳಲ್ಲಿ ಸೀಮಿತ ಉದ್ಯೋಗ ಹುಡುತ್ತಾರೆ. ಅವರು ತಮಿಳುನಾಡಿಗೆ ಮೇಜುಗಳನ್ನು ಸ್ವಚ್ಛಗೊಳಿಸಲು, ನಿರ್ಮಾಣ ಕೆಲಸ ಮಾಡಲು ಬರುತ್ತಿದ್ದಾರೆ” ಎಂದು ಹೇಳಿದ್ದಾರೆ.
ಪನ್ನೀರ್‌ಸೆಲ್ವಂ ಅವರ ಮಾತಿಗೆ ತಕ್ಷಣವೇ ಆಡಳಿತಾರೂಢ ಡಿಎಂಕೆ ಪ್ರತಿಕ್ರಿಯಿಸಿದೆ. ಸೆಲ್ವಂ ಅವರ ಹೇಳಿಕೆಯನ್ನು ಖಂಡಿಸಿದ ಡಿಎಂಕೆ ವಕ್ತಾರ ಡಾ. ಸೈಯದ್ ಹಫೀಜುಲ್ಲಾ, “ಕಾನೂನಿನ ಅಡಿಯಲ್ಲಿ ಪ್ರತಿಯೊಂದು ಕೆಲಸದಲ್ಲೂ ಘನತೆ ಇರುತ್ತದೆ… ನಾವು ಯಾವುದೇ ಕೆಲಸವನ್ನು ಅಲ್ಲಗಳೆಯುವುದಿಲ್ಲ. ತಮಿಳುನಾಡಿನಲ್ಲಿ ಹಿಂದಿ ಮಾತನಾಡುವವರು ಅಥವಾ ಅವರು ಮಾಡುವ ಕೆಲಸಗಳಿಗೆ ಯಾವುದೇ ವಿರೋಧವಿಲ್ಲ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಕ್ರೀಡಾಂಗಣದಲ್ಲಿ ‘ರಾಜಕೀಯ’ದಾಟ: ಬ್ಯಾಟ್ ಹಿಡಿಯದವರ ಕೈಯಲ್ಲಿ ಕ್ರಿಕೆಟ್ ಚುಕ್ಕಾಣಿ!
ಆದಾಗ್ಯೂ, ಅವರು ಕೇಂದ್ರದ ತ್ರಿಭಾಷಾ ನೀತಿಯನ್ನು ತಮಿಳುನಾಡು ಒಪ್ಪುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ. “ದ್ವಿಭಾಷಾ ನೀತಿಯು ತಮಿಳುನಾಡು ಮತ್ತು ನಮ್ಮ ಜನರಿಗೆ ಸಹಾಯ ಮಾಡಿದೆ. ಇಂಗ್ಲಿಷ್ ಭಾಷೆಯು ಜನರಿಗೆ ಅಭಿವೃದ್ಧಿ ಮತ್ತು ಜಾಗತಿಕ ಅವಕಾಶಗಳನ್ನು ನೀಡಿದೆ. ಇಂಗ್ಲಿಷ್‌ಗೆ ಆದ್ಯತೆಯಿಲ್ಲದೆ, ಹಿಂದಿ ಮಾತನಾಡುವ ರಾಜ್ಯಗಳ ಜನರು ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ…” ಎಂದು ಅವರು ಹೇಳಿದ್ದಾರೆ.
ಡಿಎಂಕೆ ಲೋಕಸಭಾ ಸಂಸದ ಟಿ.ಆರ್. ಬಾಲು ಅವರು ಸೆಲ್ವಂ ಅವರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ. “ಪನ್ನೀರಸೆಲ್ವಂ ಒಬ್ಬ ಜವಾಬ್ದಾರಿಯುತ ಸಚಿವರು… ಅವರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ಉತ್ತರ ಭಾರತೀಯರ ವಿರುದ್ಧ ಅವರು ಏನನ್ನೂ ಹೇಳಿಲ್ಲ. ಅವರ ಮಾತುಗಳಲ್ಲಿ ‘ಹಿಂದಿ ಹೇರಿಕೆ’ ವಿರುದ್ಧದ ಭಾವನೆಗಳು ಮಾತ್ರವೇ ವ್ಯಕ್ತವಾಗಿವೆ” ಎಂದು ಹೇಳಿದ್ದಾರೆ.





