ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಕಾರಣದಿಂದಾಗಿ ಹಾರ್ಮುಜ್ ಜಲಸಂಧಿಯ ಮಾರ್ಗವನ್ನು ಇರಾನ್ ನಿರ್ಬಂಧಿಸಿದೆ. ಪರಿಣಾಮ, ತೈಲ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, ರಷ್ಯಾದಿಂದ ತೈಲ ಖರೀದಿ ಮಾಡಲು ಭಾರತ ಮುಂದಾಗಿದೆ. ರಷ್ಯಾದ ತೈಲ ಖರೀದಿಸಲು ಭಾರತಕ್ಕೆ ಅನುಮತಿ ನೀಡಲಾಗಿದ್ದು, 30 ದಿನಗಳ ಕಾಲ ಅವಕಾಶ ನೀಡಲಾಗಿದೆ ಎಂದು ಅಮೆರಿಕದ ಟ್ರಂಪ್ ಆಡಳಿತ ಹೇಳಿಕೊಂಡಿದೆ. ಇದೀಗ, ಅಮೆರಿಕದ ಸಮ್ಮತಿ ಕುರಿತು ಪ್ರತಿಕ್ರಿಯೆ ನೀಡಿರುವ ಮೋದಿ ಸರ್ಕಾರ, “ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ತೈಲ ನೀಡುವ ಯಾವುದೇ ಮೂಲದಿಂದ ಭಾರತವು ಕಚ್ಚಾ ತೈಲ ಖರೀದಿಸುವುದನ್ನು ಮುಂದುವರಿಸಲಿದೆ. ಯಾರ ಅನುಮತಿ ಮೇಲೂ ಅವಲಂಬಿತವಾಗಿಲ್ಲ” ಎಂದು ಹೇಳಿಕೊಂಡಿದೆ.
ತೈಲ ಖರೀದಿ – ಭಾರತದ ಪ್ರತಿಕ್ರಿಯೆ ಬಗ್ಗೆ ಹೇಳಿಕೆ ನೀಡಿರುವ ಮೋದಿ ಸರ್ಕಾರ, “ಹಾರ್ಮುಜ್ ಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದರೂ, ಭಾರತದ ಇಂಧನ ಪೂರೈಕೆಯು ಸುರಕ್ಷಿತ ಮತ್ತು ಸ್ಥಿರವಾಗಿದೆ. ಭಾರತವು ತನ್ನ ಕಚ್ಚಾ ತೈಲದ ಮೂಲಗಳನ್ನು 27 ರಿಂದ 40 ದೇಶಗಳಿಗೆ ವಿಸ್ತರಿಸಿದ್ದು, ಪರ್ಯಾಯ ಪೂರೈಕೆ ಮಾರ್ಗಗಳನ್ನು ಖಚಿತಪಡಿಸಿಕೊಂಡಿದೆ. ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ, ಅತ್ಯಂತ ಸ್ಪರ್ಧಾತ್ಮಕ ಮತ್ತು ಕೈಗೆಟುಕುವ ದರಗಳು ಎಲ್ಲಿ ಲಭ್ಯವಿದೆಯೋ ಅಲ್ಲಿಂದ ಭಾರತವು ತೈಲವನ್ನು ಖರೀದಿಸುತ್ತದೆ” ಎಂದು ಹೇಳಿದೆ.
“ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕ ನೀಡಿದ ತಾತ್ಕಾಲಿಕ ವಿನಾಯಿತಿಯ ನಂತರವೂ ತಾನು ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತಿದೆ. ಇಂತಹ ಖರೀದಿಗಳನ್ನು ಮಾಡಲು ಭಾರತಕ್ಕೆ ಯಾವುದೇ ದೇಶದ ಅನುಮತಿಯ ಅಗತ್ಯವಿಲ್ಲ” ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
“ರಷ್ಯಾದ ತೈಲವನ್ನು ಖರೀದಿಸಲು ಭಾರತವು ಎಂದಿಗೂ ಯಾವುದೇ ದೇಶದ ಅನುಮತಿಯ ಮೇಲೆ ಅವಲಂಬಿತವಾಗಿಲ್ಲ. 2026ರ ಫೆಬ್ರವರಿಯಲ್ಲೂ ಭಾರತವು ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ರಷ್ಯಾ ಈಗಲೂ ಭಾರತದ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರ ದೇಶವಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ಮೂರು ವರ್ಷಗಳ ಅವಧಿಯಲ್ಲಿ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಆಕ್ಷೇಪಣೆಗಳ ಹೊರತಾಗಿಯೂ ಭಾರತವು ರಷ್ಯಾದ ತೈಲ ಖರೀದಿಸುವುದನ್ನು ಮುಂದುವರಿಸಿದೆ. ರಿಯಾಯಿತಿ ದರಗಳು ಮತ್ತು ಸಂಸ್ಕರಣಾಗಾರಗಳ ಬೇಡಿಕೆಯಿಂದಾಗಿ 2022ರ ನಂತರ ಆಮದು ಗಣನೀಯವಾಗಿ ಹೆಚ್ಚಾಗಿದೆ” ಎಂದು ಹೇಳಿದೆ.
ಕೇಂದ್ರದ ಪ್ರಕಾರ, ಭಾರತವು ತನ್ನ ಮೀಸಲು ಸಂಗ್ರಹ ಮತ್ತು ಪೂರೈಕೆ ಸರಪಳಿಯಲ್ಲಿ 2.50 ಕೋಟಿ ಬ್ಯಾರೆಲ್‌ಗಳಿಗಿಂತ ಹೆಚ್ಚು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಹೊಂದಿದೆ. ಇದು ಏಳರಿಂದ ಎಂಟು ವಾರಗಳ ಬಳಕೆಗೆ ಸಮನಾದ ಬಫರ್ ಸ್ಟಾಕ್ ಅನ್ನು ಒದಗಿಸುತ್ತದೆ. ಭಾರತದ ಒಟ್ಟು ತೈಲ ಸಂಸ್ಕರಣಾ ಸಾಮರ್ಥ್ಯವು ವಾರ್ಷಿಕ 2.58 ಕೋಟಿ ಮೆಟ್ರಿಕ್ ಟನ್ ಆಗಿದ್ದು, ಇದು ಪ್ರಸ್ತುತ ದೇಶೀಯ ಬೇಡಿಕೆಗಿಂತ ಹೆಚ್ಚಿದೆ.
ಈ ಲೇಖನ ಓದಿದ್ದೀರಾ?: ಅಮೆರಿಕ ಕೈಯಿಟ್ಟ ಕಡೆಯೆಲ್ಲ ವಿನಾಶವೇ ಎಂಬುದು ಚಾರಿತ್ರಿಕ ಸತ್ಯ!
ಕಳೆದ ಒಂದು ವಾರದಿಂದ, ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕ್ರಮಗಳು ಮತ್ತು ಅದಕ್ಕೆ ಪ್ರತಿಯಾಗಿ ಇರಾನ್ ನಡೆಸುತ್ತಿರುವ ದಾಳಿಗಳು ಜಾಗತಿಕ ಇಂಧನ ಹರಿವು ಮತ್ತು ಹಡಗು ಮಾರ್ಗಗಳಿಗೆ ಅಡ್ಡಿಪಡಿಸಿವೆ. ಇದರಿಂದಾಗಿ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ.
ರಷ್ಯಾದ ತೈಲವನ್ನು ಹೊತ್ತು ಸಮುದ್ರದಲ್ಲಿ ನಿಂತಿರುವ ಹಡಗುಗಳಿಂದ ತೈಲವನ್ನು ಭಾರತ ಖರೀದಿಸಲು ಅನುಕೂಲವಾಗುವಂತೆ ರಷ್ಯಾದ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿದ್ದೇವೆ ಎಂದು ಅಮೆರಿಕ ಗುರುವಾರ ಹೇಳಿಕೊಂಡಿದೆ.
“ಅಲ್ಪಾವಧಿಯ ವಿನಾಯಿತಿಯು ತೈಲ ಖರೀದಿಗಳಿಗೆ ‘ಅವಕಾಶ ನೀಡುತ್ತದೆ’ ಎನ್ನುವುದು ರಷ್ಯಾ-ಭಾರತ ನಡುವಿನ ವ್ಯಾಪಾರವು ನಿರಂತರವಾಗಿ ನಡೆಯುತ್ತಿರುವುದನ್ನು ಕಡೆಗಣಿಸಿದಂತೆ ಆಗುತ್ತದೆ. ಭಾರತವು ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ನಿವ್ವಳ ರಫ್ತುದಾರ ರಾಷ್ಟ್ರವಾಗಿದೆ. ಈ ಸ್ಥಾನವು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆಯೇ ಹೊರತು ದುರ್ಬಲಗೊಳಿಸುವುದಿಲ್ಲ” ಎಂದು ಕೇಂದ್ರ ಹೇಳಿದೆ.
ಇದಕ್ಕೂ ಮೊದಲು ಫೆಬ್ರವರಿಯಲ್ಲಿ, ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಭಾಗವಾಗಿ ಅಮೆರಿಕವು ಭಾರತೀಯ ರಫ್ತುಗಳ ಮೇಲಿದ್ದ 25%ರಷ್ಟು ಸುಂಕವನ್ನು ತೆಗೆದುಹಾಕಿತ್ತು. ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಭಾರತ ನೀಡಿದ ‘ಬದ್ಧತೆ’ಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿಕೊಂಡಿತ್ತು.




