ಇಂದು (ಫೆ.7) ದೇಶಾದ್ಯಂತ ಓಲಾ, ಉಬರ್ ರ‍್ಯಾಪಿಡೋ ಸೇರಿಂದತೆ ಎಲ್ಲ ಬೈಕ್ , ಆಟೋ, ಟ್ಯಾಕ್ಸಿಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮುಂದಾಗಿವೆ. ತೆಲಂಗಾಣದ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ( TGPWU ) ಮತ್ತು ಇತರ ಕಾರ್ಮಿಕ ಸಂಘಗಳ ಸಮನ್ವಯದಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಇದರಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ ಶನಿವಾರ ಕ್ಯಾಬ್, ಆಟೋರಿಕ್ಷಾ ಮತ್ತು ಬೈಕ್ ಸೇವೆಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದ್ದು, ದೈನಂದಿನ ಪ್ರಯಾಣದಲ್ಲಿ ಕೆಲ ವ್ಯತ್ಯಾಸಗಳಾಬಹುದು.
ಈ ಕುರಿತು ತಮ್ಮ ಅಧಿಕೃತ X ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, TGPWU ಫೆಬ್ರವರಿ 7, 2026 ರಂದು ದೇಶಾದ್ಯಂತದ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರು ʼಅಖಿಲ ಭಾರತ ಮುಷ್ಕರʼದಲ್ಲಿ ಭಾಗವಹಿಸಲಿದ್ದಾರೆ ಎಂದಿದ್ದು, ಕನಿಷ್ಠ ದರಗಳ ಅನುಪಸ್ಥಿತಿ, ನಿಯಂತ್ರಣದ ಕೊರತೆ ಮತ್ತು ಕಾರ್ಮಿಕರ ಮೇಲಿನ ನಿರಂತರ ಶೋಷಣೆಯನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ, ದೇಶಾದ್ಯಂತ ಆ್ಯಪ್ ಆಧಾರಿತ ಸಾರಿಗೆ ಕಾರ್ಮಿಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ವರ್ಷಗಳಿಂದ ಬಗೆಹರಿಯದೆ ಉಳಿದಿವೆ ಎಂದು ತಿಳಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಆ್ಯಪ್ ಆಧಾರಿತ ಸಾರಿಗೆ ಸೇವೆಗಳಿಗೆ ಸರ್ಕಾರದಿಂದ ನಿಯಂತ್ರಿತ ದರಗಳು ಇಲ್ಲದಿರುವುದು ಮುಖ್ಯ ಕಳವಳವಾಗಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು
ಸರ್ಕಾರದ ಯಾವುದೇ ಖಚಿತ ನಿಯಂತ್ರಣ ಮಾರ್ಗಸೂಚಿಗಳಿಲ್ಲದ ಕಾರಣ ಓಲಾ, ಉಬರ್, ರ‍್ಯಾಪಿಡೊ ಮತ್ತು ಪೋರ್ಟರ್‌ನಂತಹ ಕಂಪನಿಗಳು ಆಟೋಗಳು, ಕ್ಯಾಬ್‌ಗಳು ಮತ್ತು ಬೈಕ್ ಟ್ಯಾಕ್ಸಿಗಳಿಗೆ ದರವನ್ನು ತಾವೇ ನಿರ್ಧರಿಸುತ್ತಿವೆ. ಇದರಿಂದಾಗಿ ಚಾಲಕರು ಗಂಭೀರ ಆದಾಯ ಅಸ್ಥಿರತೆ, ಶೋಷಣೆ ಮತ್ತು ಸಮರ್ಥನೀಯವಲ್ಲದ ಹೆಚ್ಚುವರಿ ಸಮಯದ ಕೆಲಸದ ಪರಿಸ್ಥಿತಿಗಳಿಗೆ ಒಳಪಡುವಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ ಅಗ್ರಿಗೇಟರ್ ಕಂಪನಿಗಳು ಲಾಭ ಗಳಿಸುವುದನ್ನು ಮುಂದುವರೆಸಿದ್ದರೂ, ಲಕ್ಷಾಂತರ ಚಾಲಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಮತ್ತು ಬಡತನದ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ ಎಂದು ಒಕ್ಕೂಟ ಆರೋಪಿಸಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಚಾಲಕರು ಹಾಗೂ ಒಕ್ಕೂಟದ ಬೇಡಿಕೆಯೇನು?
ಚಾಲಕರ ಜೀವನೋಪಾಯದ ಸರಿಯಾದ ನಿಯಂತ್ರಣ ಮತ್ತು ರಕ್ಷಣೆಗಾಗಿ ಕರೆ ನೀಡುವ 2025 ರ ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಟ್ಟಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾನ್ಯತೆ ಪಡೆದ ಚಾಲಕ ಸಂಘಗಳೊಂದಿಗೆ ಸಮಾಲೋಚಿಸಿದ ನಂತರ ಆಟೋ, ಕ್ಯಾಬ್ ಮತ್ತು ಬೈಕ್ ಟ್ಯಾಕ್ಸಿಗಳಂತಹ ಅಪ್ಲಿಕೇಶನ್ ಆಧಾರಿತ ಸೇವೆಗಳಿಗೆ ಕನಿಷ್ಠ ಮೂಲ ದರಗಳನ್ನು ತಕ್ಷಣ ನಿಗದಿಪಡಿಬೇಕು. ಅಸ್ತಿತ್ವದಲ್ಲಿರುವ ಕಾನೂನುಗಳು ಹಾಗೂ ಮಾರ್ಗಸೂಚಿಗಳ ಪ್ರಕಾರ, ಖಾಸಗಿ, ವಾಣಿಜ್ಯೇತರ ವಾಹನಗಳಲ್ಲಿ ವಾಣಿಜ್ಯ ಪ್ರಯಾಣಿಕರು ಅಥವಾ ಸರಕು ಸಾಗಣೆಗೆ ಬಳಸುವುದನ್ನು ನಿಷೇಧಿಸಬೇಕು. ಇಲ್ಲವೇ, ಅಂತಹ ವಾಹನಗಳನ್ನು ವಾಣಿಜ್ಯ ವಾಹನಗಳಾಗಿ ಪರಿವರ್ತಿಸುವುದನ್ನು ಕಡ್ಡಾಯಗೊಳಿಸಬೇಕು.
ಓಲಾ, ಉಬರ್ ರ‍್ಯಾಪಿಡೋ ಸೇರಿಂದತೆ ಎಲ್ಲಾ ಬೈಕ್ , ಆಟೋ, ಟ್ಯಾಕ್ಸಿಗಳು ರಾಷ್ಟ್ರವ್ಯಾಪ್ತಿ ಮುಷ್ಕರ ಕೈಗೊಂಡಿದೆಯಾದರೂ ನಾಳೆ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಯಾವುದೇ ದೃಢೀಕರಣವನ್ನು ಈವರೆಗೂ ನೀಡಿಲ್ಲ. ಫೆ.7 ಹಮ್ಮಿಕೊಂಡಿರುವ ಮುಷ್ಕರದಿಂದಾಗಿ ಸಾರಿಗೆ ಸೇವೆಗಳನ್ನು ಕೊಂಚ ವ್ಯತ್ಯಯವಾಗುವ ಸಾಧ್ಯತೆಯಿದೆ. ಆದಾಗ್ಯೂ, ಇದು ನಗರದಿಂದ ನಗರಕ್ಕೆ ಬದಲಾವಣೆಯಾಗುವ ಸಾಧ್ಯತೆಗಳಿದ್ದು, ಚಾಲಕರು ಎಂದಿನಂತೆ ಯಥಾ ಪ್ರಕಾರ ಸೇವೆ ನೀಡದೆ ಇದ್ದರೂ ಭಾಗಶಃ ಸೇವೆಗಳನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.





