ಜಗತ್ತಿನ ನಾನಾ ಪ್ರಭೇದದ ಪ್ರಾಣ-ಪಕ್ಷಿಗಳು ಅಳಿವಿನ ಅಂಚಿನಲ್ಲಿವೆ. ಅಂತಹ ಪ್ರಾಣಿಗಳಲ್ಲಿ ‘ಆಲಿವ್ ರಿಡ್ಲೆ’ ಆಮೆ ಸಂತತಿಯೂ ಒಂದು. ಒಡಿಶಾದ ಕರಾವಳಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಆಮೆಗಳನ್ನು ರಕ್ಷಿಸಲು ಸರ್ಕಾರಗಳು ಪ್ರಯತ್ನಿಸುತ್ತಿವೆ. ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಈಗ, ಆಲಿವ್ ರಿಡ್ಲೆ ಆಮೆಗಳು ಗೂಡುಕಟ್ಟುವ ಮತ್ತು ಸಂತಾನೋತ್ಪತ್ತಿಯಲ್ಲಿ ತೊಡಗುವ ಸಮಯ. ಪ್ರತಿ ವರ್ಷ ಡಿಸೆಂಬರ್‌ನಿಂದ ಮೇ ತಿಂಗಳಿನ ಅವಧಿಯಲ್ಲಿ ಆಮೆಗಳು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಈ ಸಮಯದಲ್ಲಿ, ಆಮೆಗಳನ್ನು ರಕ್ಷಿಸಲು ‘ಭಾರತೀಯ ಕರಾವಳಿ ಕಾವಲು ಪಡೆ’ಯು ‘ಆಪರೇಷನ್ ಒಲಿವಿಯಾ’ವನ್ನು ರಚಿಸಿದೆ.
ಆಲಿವ್ ರಿಡ್ಲೆ ಆಮೆಗಳ ಪ್ರಮುಖ ಆವಾಸಸ್ಥಾನವಾದ ಒಡಿಶಾ ಕರಾವಳಿಯಲ್ಲಿ ‘ಆಪರೇಷನ್ ಒಲಿವಿಯಾ’ವನ್ನು ಜಾರಿಗೊಳಿಸಲಾಗಿದೆ. ಇದರ ಅಡಿಯಲ್ಲಿ ಮೊಟ್ಟೆಗಳನ್ನು ಇಡುವ ಸುಮಾರು 3.49 ಲಕ್ಷ ಆಮೆಗಳನ್ನು ರಕ್ಷಿಸಲು ಕರಾವಳಿ ಕಾವಲು ಪಡೆಯು 225 ಹಡಗು ದಿನಗಳು ಮತ್ತು 388 ವಿಮಾನ ಗಂಟೆಗಳನ್ನು ಮೀಸಲಿಟ್ಟಿದೆ. ದಕ್ಷಿಣ ಒಡಿಶಾದ ಗಂಜಾಂ ಕರಾವಳಿಯಲ್ಲಿ ಮತ್ತು ಕೇಂದ್ರಪಾರ ಜಿಲ್ಲೆಯ ಗಹಿರ್ಮಾಥ ಸಾಗರ ಅಭಯಾರಣ್ಯದಲ್ಲಿ ಸಾವಿರಾರು ಆಮೆಗಳನ್ನು ರಕ್ಷಿಸಲಾಗುತ್ತಿದೆ.
“ಆಮೆಗಳ ಸಂಯೋಗ ಮತ್ತು ಮೊಟ್ಟೆ ಇಡುವಿಕೆಗೆ ಅನುಕೂಲಕರವಾದ ವಾತಾವರಣ ನಿರ್ಮಾಣವು ‘ಆಪರೇಷನ್ ಒಲಿವಿಯಾ’ದ ಆದ್ಯತೆಯಾಗಿದೆ. ಗಂಜಾಂನ ರುಶಿಕುಲ್ಯ ನದಿ ಮುಖಭಾಗದಲ್ಲಿ ಆಮೆಗಳ ಸಂತಾನೋತ್ಪತ್ತಿ ಕ್ರಿಯೆಗಳು ಆರಂಭವಾಗಿದೆ. ಡಿಸೆಂಬರ್‌ನಲ್ಲಿ ಆಮೆಗಳು ಸಂಯೋಗಗೊಳ್ಳುತ್ತವೆ. ಜನವರಿಯಲ್ಲಿ ಮೊಟ್ಟೆ ಇರುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ” ಎಂದು ರುಶಿಕುಲ್ಯ ಆಮೆ ಸಮುದ್ರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ರವೀಂದ್ರನಾಥ ಸಾಹು ಹೇಳಿದ್ದಾರೆ.

“ಲಕ್ಷಾಂತರ ಆಲಿವ್ ರಿಡ್ಲೆ ಆಮೆಗಳು ಶ್ರೀಲಂಕಾದ ಕರಾವಳಿಯಿಂದ ಒಡಿಶಾ ತೀರಕ್ಕೆ ವಲಸೆ ಬರುತ್ತವೆ. ಅವು ಶ್ರೀಲಂಕಾ ತೀರದಿಂಧ ಗಂಜಾಂ ತಲುಪಲು ಸುಮಾರು 27 ದಿನಗಳನ್ನು ತೆಗೆದುಕೊಳ್ಳುತ್ತವೆ. ಡಿಸೆಂಬರ್-ಜನವರಿಯಲ್ಲಿ ಆಮೆಗಳು ಸಂಯೋಗ ನಡೆಸುತ್ತವೆ. ಬಳಿಕ, ಹೆಣ್ಣು ಆಮೆಗಳು ಸಮುದ್ರ ತೀರದಿಂದ ಸುಮಾರು 3-4 ಕಿ.ಮೀ ದೂರದಲ್ಲಿ ಇರುತ್ತವೆ. ಚಳಿಗಾಲ ಕಡಿಮೆಯಾಗುತ್ತಿದ್ದಂತೆ, ಜನವರಿ ಮಧ್ಯದಲ್ಲಿ ಮೊಟ್ಟೆ ಇಡಲು ದಡಕ್ಕೆ ಬರುತ್ತವೆ. ಏಪ್ರಿಲ್ ಅಂತ್ಯದವರೆಗೆ ಸಂತಾತ್ಪೋತ್ಪತ್ತಿ ಪ್ರಕ್ರಿಯೆ ನಡೆಸುತ್ತವೆ. ಮೊಟ್ಟೆಗಳನ್ನು ಇಟ್ಟ ನಂತರ, ಆಮೆಗಳು ಸಮುದ್ರಕ್ಕೆ ಹಿಂತಿರುಗುತ್ತವೆ. 45 ರಿಂದ 60 ದಿನಗಳ ನಂತರ ಮರಿಗಳು ಹೊರಬರುತ್ತವೆ” ಎಂದು ಅವರು ವಿವರಿಸಿದ್ದಾರೆ.
ಈ ಆಮೆಗಳ ಚಲನವಲನ ಮತ್ತು ಪ್ರಯಾಣವನನ್ನು ಪತ್ತೆಹಚ್ಚಲು ಒಡಿಶಾ ಸರ್ಕಾರವು ಭಾರತೀಯ ವನ್ಯಜೀವಿ ಸಂಸ್ಥೆಯ ಸಹಯೋಗದೊಂದಿಗೆ ಟೆಲಿ-ಮಾರ್ಕಿಂಗ್ ಯೋಜನೆಯಡಿ ಎಂಟು ಆಮೆಗಳಿಗೆ ಟ್ರಾನ್ಸ್‌ಮಿಟರ್‌ಗಳನ್ನು ಅಳವಡಿಸಲಾಗಿದೆ ಎಂದು ಸಾಹು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: SIR – ಬಿಜೆಪಿಗಾಗಿ ಚುನಾವಣಾ ಆಯೋಗ ನಡೆಸುತ್ತಿರುವ ರಕ್ತರಹಿತ ನರಮೇಧ
ಸಂತಾನೋತ್ಪತ್ತಿ ಅವಧಿಯಲ್ಲಿ ಆಮೆಗಳನ್ನು ರಕ್ಷಿಸಲು, ಒಡಿಶಾ ಸರ್ಕಾರವು ಮೂರು ಪ್ರಮುಖ ನದಿ-ಸಮುದ್ರ ಭಾಗಗಳಲ್ಲಿ ಮೀನುಗಾರಿಕೆಯನ್ನು ಏಳು ತಿಂಗಳ ಕಾಲ ನಿಷೇಧಿಸಿದೆ. ಆಮೆಗಳು ಹೆಚ್ಚಾಗಿ ಗೂಡುಕಟ್ಟುವ ತಾಣಗಳೆಂದು ಗುರುತಿಸಲಾಗಿರುವ ಗಂಜಾಂ ಜಿಲ್ಲೆಯ ರುಶಿಕುಲ್ಯ ನದಿ-ಸಮುದ್ರ ತೀರ, ಜಗತ್ಸಿಂಗ್‌ಪುರ ಮತ್ತು ಪುರಿ ಜಿಲ್ಲೆಗಳ ಕೆಲವು ಭಾಗಗಳನ್ನು ಒಳಗೊಂಡ ದೇವಿ ನದಿ-ಸಮುದ್ರ ತೀರ ಹಾಗೂ ಭದ್ರಕ್ ಜಿಲ್ಲೆಯ ಧಮ್ರಾ ನದಿ-ಸಮುದ್ರ ತೀರಾಗಳಲ್ಲಿ ಮೀನುಗಾರಿಕೆಯನ್ನು ನಿರ್ಬಂಧಿಸಲಾಗಿದೆ. ನಿಷೇಧವು 2026ರ ಮೇ 31ರವರೆಗೆ ಚಾಲ್ತಿಯಲ್ಲಿರುತ್ತದೆ.
ನಿರ್ಬಂಧಿತ ಪ್ರದೇಶಗಳ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯನ್ನು ಬಫರ್ ವಲಯಗಳೆಂದು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಯಾವುದೇ ಮೋಟಾರು ಹಡಗುಗಳು, ಟ್ರಾಲರ್‌ಗಳು ಹಾಗೂ ಯಾಂತ್ರಿಕೃತ ಮೀನುಗಾರಿಕೆ ದೋಣಿಗಳು ಪ್ರವೇಶಿಸುವಂತಿಲ್ಲ. ಒಂದು ವೇಳೆ, ನಿಮಯವನ್ನು ಉಲ್ಲಂಘಿಸಿದರೆ, ಒರಿಸ್ಸಾ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆ-1982 ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
ವಾರ್ಷಿಕವಾಗಿ, ಸುಮಾರು 11 ಲಕ್ಷ ಆಲಿವ್ ರಿಡ್ಲೆ ಆಮೆಗಳು ಮೊಟ್ಟೆ ಇಡಲು ಈ ಸ್ಥಳಗಳಿಗೆ ಭೇಟಿ ನೀಡುತ್ತವೆ. ಆದರೆ, ಕಳೆದ ವರ್ಷ ಸುಮಾರು 15 ಲಕ್ಷಕ್ಕೂ ಹೆಚ್ಚು ಆಮೆಗಳು ಈ ಪ್ರದೇಶಗಳಿಗೆ ಬಂದಿದ್ದವು ಎಂದು ವರದಿಯಾಗಿವೆ.




