ಕಳೆದ ವರ್ಷ ಪ್ರತಿ 46 ಗಂಟೆಗಳಿಗೊಮ್ಮೆ ಒಬ್ಬ ಪೊಲೀಸ್ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಸಾವನ್ನಪ್ಪಿದ್ದಾರೆ. 365 ದಿನಗಳಲ್ಲಿ ಒಟ್ಟು 191 ಜೀವಗಳು ಬಲಿಯಾಗಿವೆ ಎಂದು ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕ ತಪನ್ ದೇಕಾ ಮಂಗಳವಾರ ತಿಳಿಸಿದ್ದಾರೆ.
ದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಸ್ಮರಣಾರ್ಥ ದಿನದಂದು ಕರ್ತವ್ಯ ನಿರ್ವಹಿಸುತ್ತಿದ್ದಾಗ ಹುತಾತ್ಮರಾದ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ತಪನ್ ದೇಕಾ ಅವರು, “ಸ್ವಾತಂತ್ರ್ಯದ ನಂತರ, ಒಟ್ಟು 36,684 ಪೊಲೀಸ್ ಸಿಬ್ಬಂದಿ ಕರ್ತವ್ಯದ ಸಾಲಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಪೊಲೀಸ್ ಕಸ್ಟಡಿಯಲ್ಲಿ ಆರೋಪಿ ಸಾವು; ಐವರು ಪೊಲೀಸರ ಬಂಧನ
“ಈ ದಿನ, ಅಕ್ಟೋಬರ್ 21, 1959ರಂದು, ಗುಪ್ತಚರ ಬ್ಯೂರೋದ ಡಿಸಿಐಒ ಕರಮ್ ಸಿಂಗ್ ನೇತೃತ್ವದಲ್ಲಿ 10 ಸಿಆರ್‌ಪಿಎಫ್ ಸಿಬ್ಬಂದಿ, ಸಶಸ್ತ್ರ ಚೀನೀ ತುಕಡಿಯನ್ನು ಎದುರಿಸುತ್ತಾ ಭಾರತ-ಚೀನಾ ಗಡಿಯನ್ನು ಕಾಯುತ್ತಿದ್ದಾಗ ತಮ್ಮ ಪ್ರಾಣವನ್ನು ಅರ್ಪಿಸಿದರು. ಅಂದಿನಿಂದ, ನಾವು ಪ್ರತಿ ವರ್ಷ ಈ ದಿನವನ್ನು ಪೊಲೀಸ್ ಸ್ಮರಣಾರ್ಥ ದಿನವನ್ನಾಗಿ ಆಚರಿಸುತ್ತಿದ್ದೇವೆ” ಎಂದು ಸ್ಮರಿಸಿದರು.
“ಈ ದಿನದಂದು, ಎಲ್ಲಾ ಅಗಲಿದ ಸಹೋದ್ಯೋಗಿಗಳಿಗೆ ಗೌರವ ಸಲ್ಲಿಸಲು ರಾಜ್ಯ ರಾಜಧಾನಿಗಳು, ಜಿಲ್ಲೆಗಳು ಮತ್ತು ಪೊಲೀಸ್ ಠಾಣೆ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ, ಇಂದು ಇಲ್ಲಿ ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ, ಎಸ್‌ಎಸ್‌ಬಿ, ಎನ್‌ಎಸ್‌ಜಿ, ಅಸ್ಸಾಂ ರೈಫಲ್ಸ್, ಆರ್‌ಪಿಎಫ್, ಎನ್‌ಡಿಆರ್‌ಎಫ್ ಮತ್ತು ದೆಹಲಿ ಪೊಲೀಸರು ಜಂಟಿ ಸ್ಮಾರಕ ಮೆರವಣಿಗೆಯನ್ನು ಆಯೋಜಿಸುತ್ತಾರೆ” ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಹುತಾತ್ಮ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಲ್ಲಿಸಿದರು.





