ಕೇವಲ 1 ರೂಪಾಯಿಗೆ ಪ್ರೀಮಿಯಂ ಶೂಗಳನ್ನು ನೀಡುವ ಆಫರ್ ಅನ್ನು ಕೇರಳದ ಕೋಝಿಕ್ಕೋಡ್ (ಕ್ಯಾಲಿಕಟ್)ನ ಪಾದರಕ್ಷೆಗಳ ಅಂಗಡಿಯೊಂದರಲ್ಲಿ ನೀಡಲಾಗಿದ್ದು, ಜನರು ಭಾನುವಾರ ಅಂಗಡಿಗೆ ಮುಗಿಬಿದ್ದಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣದಿಂದಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಒಂದು ರೂಪಾಯಿಗೆ ಶೂ ಮಾರಾಟ ಮಾಡಲಾಗುತ್ತದೆ ಎಂಬ ಜಾಹೀರಾತು ವೈರಲ್ ಆಗುತ್ತಿದ್ದಂತೆ, ಆಕರ್ಷಿತರಾದ ನೂರಾರು ಗ್ರಾಹಕರು ಬೆಳಗಿನ ಜಾವವೇ ಅಂಗಡಿಗೆ ಆಗಮಿಸಿದ್ದಾರೆ. ಅಂಗಡಿ ಸಮೀಪದಲ್ಲಿ ಕಾಲ್ತುಳಿತ ಉಂಟಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿತ್ತು.
ಇದನ್ನು ಓದಿದ್ದೀರಾ? ಸಿಎಂ ಆಗುವ ‘ಆಫರ್’ ಪಡೆದಿದ್ದ ಸೋನು ಸೂದ್; ತಿರಸ್ಕರಿಸಿದ್ದೇಕೆ?
ಪೊಲೀಸರ ಪ್ರಕಾರ, ಅಂಗಡಿಯು ಒಂದು ರೂಪಾಯಿ ನೋಟು ನೀಡುವ ಮೊದಲ 100 ಗ್ರಾಹಕರಿಗೆ ಕೇವಲ 1 ರೂಪಾಯಿಗೆ ಶೂ ನೀಡುವ ಜಾಹೀರಾತನ್ನು ಪ್ರಕಟಿಸಿತ್ತು. ಇದರಿಂದಾಗಿ ಮಕ್ಕಳು ಸೇರಿದಂತೆ ನೂರಾರು ಮಂದಿ ಬೆಳಗಿನ ಜಾವ 2 ಗಂಟೆಯಿಂದಲೇ ಜನರು ಅಂಗಡಿ ಬಳಿ ಆಗಮಿಸಲು ಶುರು ಮಾಡಿದ್ದರು.
“ಕಾಲ್ತುಳಿತವನ್ನು ತಪ್ಪಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಅವ್ಯವಸ್ಥೆಯ ನಂತರ, ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಅಂಗಡಿ ಮಾಲೀಕರನ್ನು ವಶಕ್ಕೆ ಪಡೆಯಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.





