ಕಳಪೆ ಗುಣಮಟ್ಟದ ಆಹಾರ ಮತ್ತು ಕಲುಷಿತ ನೀರಿನಿಂದಾಗಿ ಕಾಲೇಜು ಕ್ಯಾಂಪಸ್‌ನಲ್ಲಿ ಕಾಮಾಲೆ (ಜಾಂಡಿಸ್) ಹರಡುತ್ತಿದೆ ಎಂದು ಮಧ್ಯಪ್ರದೇಶದ ಸೆಹೋರ್‌ನಲ್ಲಿರುವ ವಿಐಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಕಟ್ಟಡಗಳ ಕಿಟಕಿಗಳಿಗೆ ಕಲ್ಲು ತೂರಾಟ ನಡೆಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ, ಕ್ಯಾಂಪಸ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳ ಆಕ್ರೋಶದಿಂದಾಗಿ ಹಲವಾರು ಬಸ್‌ಗಳು, ಕಾರುಗಳು ಸುಟ್ಟುಹೋಗಿವೆ, ಆ್ಯಂಬುಲೆನ್ಸ್‌ಗೂ ಹಾನಿಯಾಗಿದೆ. ಕ್ಯಾಂಪಸ್‌ನ ಬಹುಭಾಗಗಳಿಗೆ ಹಾನಿಯಾಗಿದೆ. ಕ್ಯಾಂಪನ್‌ಗೆ ಸುಮಾರು 5 ಪೊಲೀಸ್ ಠಾಣೆಗಳ ಪೊಲೀಸರು ದೌಡಾಯಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ವರದಿಯಾಗಿದೆ.
ವಿಶ್ವವಿದ್ಯಾಲಯ ಆಡಳಿತವು ನವೆಂಬರ್ 30ರವರೆಗೆ ರಜೆ ಘೋಷಿಸಿದೆ.
ಕಳಪೆ ಆಹಾರ ಮತ್ತು ಅಸುರಕ್ಷಿತ ಕುಡಿಯುವ ನೀರಿನಿಂದಾಗಿ ಕ್ಯಾಂಪಸ್‌ನ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳು ಕಾಮಾಲೆ ರೋಗದಿಂದ ಬಳಲುತ್ತಿದ್ದಾರೆ. ಕಲುಷಿತ ನೀರಿನಿಂದ ಕೆಲವು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಹಾಸ್ಟೆಲ್‌ಗಳಲ್ಲಿನ ಸಮಸ್ಯೆಗಳ ಬಗ್ಗೆ ಹಾಸ್ಟೆಲ್ ವಾರ್ಡನ್‌ಗಳು ಮತ್ತು ಭದ್ರತಾ ಸಿಬ್ಬಂದಿಗಳ ಕೆಲವು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಆದರೆ, ಆ ವಿದ್ಯಾರ್ಥಿಗಳ ಮೇಲೆಯೇ ವಾರ್ಡನ್ ಮತ್ತು ಸಿಬ್ಬಂದಿಗಳು ಹಲ್ಲೆ ನಡೆಸಿದ್ದು, ಮೌನವಾಗಿರುವಂತೆ ಬೆದರಿಕೆ ಹಾಕಿದ್ದಾರೆ. ವಿಶ್ವವಿದ್ಯಾಲಯದ ಆಡಳಿತದೊಂದಿಗೆ ಮಾತನಾಡಲು ಯತ್ನಿಸಿದರೂ, ಆಡಳಿತವು ಸರಿಯಾಗಿ ಸ್ಪಂದಿಸಿಲ್ಲವೆಂದು ಆಕ್ರೋಶಿತ ವಿದ್ಯಾರ್ಥಿಗಳು ದೂರಿದ್ದಾರೆ.
ವಾರ್ಡನ್‌ಗಳು ಮತ್ತು ಆಡಳಿತದ ನಿರ್ಲಕ್ಷ್ಯದಿಂದ ಆಕ್ರೋಶಗೊಂಡ ಸುಮಾರು ಸುಮಾರು 4,000 ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯು ಕಲ್ಲು ತೂರಾಟಕ್ಕೆ ತಿರುಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಅಷ್ಟಾದ ಎಸ್‌ಡಿಎಂ ನಿತಿನ್ ಟೇಲ್ ಅವರು ಆಹಾರ ಮತ್ತು ನೀರಿನ ಸಮಸ್ಯೆಗಳು ಇರುವುದು ಸತ್ಯವೆಂದು ಹೇಳಿದ್ದಾರೆ. ಆದರೆ, ಸಮಸ್ಯೆಗಳಿಂದ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.
“ವಿದ್ಯಾರ್ಥಿಗಳಿಗೆ ಆಹಾರ ಮತ್ತು ನೀರಿನ ಸಮಸ್ಯೆಗಳಿದ್ದವು. ಕಳಪೆ ಗುಣಮಟ್ಟ ಕುರಿತು ದೂರುಗಳು ಬಂದಿದ್ದು, ಅವುಗಳು ಬಗೆರಿಯದೇ ಇರುವುದು ಪ್ರತಿಭಟನೆಗೆ ಕಾರಣವಾಗದೆ. ಕಾಮಾಲೆಯಿಂದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂಬ ವದಂತಿಗಳಿವೆ. ಆದರೆ ಇದು ನಿಜವಲ್ಲ. ಸಮಸ್ಯೆಗಳನ್ನು ಪರಿಹರಿಸಲು ನೀರು ಮತ್ತು ಆಹಾರ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.




