ಕೋವಿಡ್ ನಿರೋಧಕ ಕೋವ್ಯಾಕ್ಸಿನ್ ಲಸಿಕೆ ಪಡೆದ ಒಂದು ವರ್ಷದ ನಂತರ ಮೂರರಲ್ಲಿ ಒಬ್ಬರು ಎಇಎಸ್‌ಐ ಅಥವಾ ‘ಪ್ರಮುಖ ಸೆಲೆಯಲ್ಲಿ ಉಂಟಾಗುವ ಪ್ರತಿಕೂಲ ಪರಿಣಾಮಗಳು’ ಎಂಬ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ತಂಡವೊಂದು ಹಮ್ಮಿಕೊಂಡ ಅಧ್ಯಯನದಲ್ಲಿ ತಿಳಿದು ಬಂದಿದೆ.
ಒಂದು ವರ್ಷದ ನಂತರ ಕೋವ್ಯಾಕ್ಸಿನ್ ಪಡೆದ 926 ಮಂದಿಯನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಇವರಲ್ಲಿ ಅರ್ಧದಷ್ಟು ಮಂದಿಗೆ ಶ್ವಾಸಕೋಶದ ಮೇಲ್ಭಾಗದಲ್ಲಿ ವೈರಲ್ ಸೋಂಕುಗಳು ಉಂಟಾಗಿವೆ.
ಎಇಎಸ್‌ಐ ಗಂಭೀರ ತೊಂದರೆಗಳಾದ ಪಾರ್ಶ್ವವಾಯುವಿನ ಹೊಡೆತ ಹಾಗೂ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಗುಲಿಯನ್ ಬಾರೆ ಸಿಂಡ್ರೋಮ್ ಕಾಯಿಲೆ ಕೂಡ ಶೇ. 1 ರಷ್ಟು ಜನರಲ್ಲಿ ದಾಖಲಾಗಿವೆ. ಗಂಭೀರ ಸಮಸ್ಯೆ ಉಂಟಾಗಿರುವವರಲ್ಲಿ ವಯಸ್ಕರು ಹಾಗೂ ಹದಿಹರೆಯದವರು ಸೇರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು
ಸಂಶೋಧನಾ ಅಧ್ಯಯನವನ್ನು ಜನವರಿ 2022 ರಿಂದ ಆಗಸ್ಟ್ 2023ರವರೆಗೆ ನಡೆಸಲಾಗಿದ್ದು, ಲಸಿಕೆ ಪಡೆದ ನಂತರ ಉಂಟಾದ ಸಮಸ್ಯೆಗಳಲ್ಲಿ ಚರ್ಮದ ಸಮಸ್ಯೆಗಳು, ನರ ಮಂಡಳ ಸಮಸ್ಯೆ ಹಾಗೂ ಸಾಮಾನ್ಯ ಅಸ್ವಸ್ಥತೆಗಳು ಹೆಚ್ಚಾಗಿ ಕಾಣಿಸಿಕೊಂಡಿವೆ.
ಕೋವ್ಯಾಕ್ಸಿನ್ ಪಡೆದ 635 ಹದಿಹರೆಯದವರು ಹಾಗೂ 291 ವಯಸ್ಕರಲ್ಲಿ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಹದಿಹರೆಯದವರಲ್ಲಿ ಶೇ.10.5 ಮಂದಿಯಲ್ಲಿ ಚರ್ಮದ ಸಮಸ್ಯೆ, ಶೇ.10.2 ಮಂದಿಯಲ್ಲಿ ಸಾಮಾನ್ಯ ಅಸ್ವಸ್ಥತೆ ಹಾಗೂ ಶೇ.4.7 ಮಂದಿಗೆ ನರ ಮಂಡಲ ಅಸ್ವಸ್ಥತೆ ಉಂಟಾಗಿದೆ.
ವಯಸ್ಕರಲ್ಲಿ ಶೇ.8.9 ಮಂದಿಯಲ್ಲಿ ಸಾಮಾನ್ಯ ಅಸ್ವಸ್ಥತೆ, ಶೇ.5.8 ಮಂದಿಗೆ ಮೈಕೈ ನೋವಿನ ಅಸ್ವಸ್ಥತೆ ಹಾಗೂ ಶೇ.5.5 ಮಂದಿಗೆ ನರ ಮಂಡಲ ಅಸ್ವಸ್ಥತೆ ಉಂಟಾಗಿದೆ. ಮಹಿಳೆಯರೂ ಕೂಡ ಎಇಎಸ್‌ಐನ ಗಂಭೀರ ಸಮಸ್ಯೆಗಳಿಂದ ಬಾಧಿತರಾಗಿದ್ದಾರೆ ಎಂದು ಅಧ್ಯಯನ ಹೇಳಿದೆ.





