ಜೀವನೋಪಾಯಕ್ಕಾಗಿ ಸಿಲಿಕಾನ್ ಸಿಟಿಯನ್ನು ಆಶ್ರಯಿಸಿ ಬದುಕು ಕಟ್ಟಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಸಾವಿರಾರು ವಲಸೆ ಕಾರ್ಮಿಕರ ಬದುಕಿನಲ್ಲಿ ಇದೀಗ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ (SIR) ನೋಟಿಸ್‌ಗಳು ಬಿರುಗಾಳಿ ಎಬ್ಬಿಸಿವೆ. ಮತದಾರರ ಪಟ್ಟಿಯ ಪರಿಶೀಲನೆಯ ನೆಪದಲ್ಲಿ ನೀಡಲಾದ ಈ ನೋಟಿಸ್‌ಗಳಿಂದ ಕಂಗಾಲಾಗಿರುವ ಸುಮಾರು 9,400ಕ್ಕೂ ಹೆಚ್ಚು ಕಾರ್ಮಿಕರು ಕೆಲಸವನ್ನೂ, ಇರುವ ಸೂರುಗಳನ್ನೂ ಬಿಟ್ಟು ರಾತ್ರೋರಾತ್ರಿ ತಮ್ಮ ತವರುಗಳತ್ತ ಮುಖ ಮಾಡಿದ್ದಾರೆ.
ಕರ್ನಾಟಕ ಬೆಂಗಾಲಿ ಕಲ್ಯಾಣ ಸಮಿತಿಯು ನೀಡಿರುವ ಅಂಕಿ-ಅಂಶಗಳ ಪ್ರಕಾರ, ನಗರದಲ್ಲಿ ನೆಲೆಸಿರುವ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಿಗೆ ಏಕಾಏಕಿ ಬಂದೊದಗಿರುವ ಈ ಸಂಕಷ್ಟ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇವರಲ್ಲಿ ಬಹುತೇಕರು ನಾಡಿಯಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಿಂದ ಬಂದವರಾಗಿದ್ದು, ನೋಟಿಸ್‌ಗಳಲ್ಲಿ ನಮೂದಿಸಲಾದ ಅಲ್ಪ ಕಾಲಾವಧಿಯು ಅವರನ್ನು ದಿಕ್ಕೆಡುವಂತೆ ಮಾಡಿದೆ.
ಜನವರಿ 14ರ ನಂತರವಷ್ಟೇ ಬಹುತೇಕ ಕಾರ್ಮಿಕರ ಕೈಸೇರಿದ ಈ ನೋಟಿಸ್‌ಗಳಲ್ಲಿ, ಪರಿಶೀಲನೆಗೆ ಹಾಜರಾಗಲು ಅತ್ಯಂತ ಕಡಿಮೆ ಸಮಯಾವಕಾಶ ನೀಡಲಾಗಿತ್ತು. ಇದರಿಂದಾಗಿ ವಿಮಾನ ಅಥವಾ ರೈಲು ಟಿಕೆಟ್ ಹೊಂದಿಸುವುದು ಬಡ ಕಾರ್ಮಿಕರಿಗೆ ಸವಾಲಾಗಿ ಪರಿಣಮಿಸಿತು. “ನೋಟಿಸ್ ಸಿಕ್ಕ ತಕ್ಷಣ ಊರಿಗೆ ಹೋಗದಿದ್ದರೆ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರನ್ನು ‘ಬಗೆಹರಿಯದ ಪ್ರಕರಣ’ ಎಂದು ಗುರುತಿಸಲಾಗುವುದು ಎಂದು ಮಾಲೀಕರು ಎಚ್ಚರಿಸಿದರು. ಹೀಗಾದರೆ ಮುಂದಿನ ಕರಡು ಪಟ್ಟಿಯಲ್ಲಿ ನಮ್ಮ ಹೆಸರು ಬರುವುದಿಲ್ಲ ಎಂಬ ಭೀತಿ ನಮ್ಮನ್ನು ಆವರಿಸಿತು,” ಎಂದು ಹಲವು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹಣದ ಕೊರತೆಯಿಂದಾಗಿ ಅನೇಕರು ತಮ್ಮ ಮಾಲೀಕರಿಂದ ಮುಂಗಡ ಹಣ ಪಡೆದು ದುಬಾರಿ ಬೆಲೆಯ ವಿಮಾನ ಟಿಕೆಟ್ ಖರೀದಿಸಿ ಊರಿಗೆ ಮರಳಿದ್ದಾರೆ. ಇದು ಕೇವಲ ಪ್ರಯಾಣದ ವೆಚ್ಚದ ಮಾತಲ್ಲ; ಕೆಲಸಕ್ಕೆ ಗೈರಾಗುವುದರಿಂದ ಸಿಗುವ ಕೂಲಿಯೂ ಕಡಿತವಾಗಲಿದ್ದು, ಆರ್ಥಿಕವಾಗಿ ಮತ್ತಷ್ಟು ಜರ್ಜರಿತರಾಗುವಂತೆ ಮಾಡಿದೆ.
ಕುತೂಹಲಕಾರಿ ಸಂಗತಿಯೆಂದರೆ, ಇಡೀ ಕುಟುಂಬವೇ ಬೆಂಗಳೂರಿಗೆ ವಲಸೆ ಬಂದು ನೆಲೆಸಿದ್ದರೂ, ನೋಟಿಸ್‌ಗಳು ಮಾತ್ರ ಮನೆಯ ಯಜಮಾನ ಅಥವಾ ದುಡಿಯುವ ಪುರುಷ ವರ್ಗಕ್ಕೆ ಹೆಚ್ಚಾಗಿ ಬಂದಿವೆ. ವಿಳಾಸದ ನಿರಂತರತೆ ಇಲ್ಲದಿರುವುದು, ಹಳೆಯ ಪಟ್ಟಿಗಳಲ್ಲಿ ಹೆಸರಿಲ್ಲದಿರುವುದು ಅಥವಾ ಕೊಂಡಿ ಕಳಚಿಕೊಂಡಿರುವುದು ಮುಂತಾದ ತಾಂತ್ರಿಕ ದೋಷಗಳನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಋತುಮಾನಕ್ಕೆ ಅನುಗುಣವಾಗಿ ವಲಸೆ ಹೋಗುವ ದುಡಿಯುವ ವರ್ಗದ ಪುರುಷರ ದಾಖಲೆಗಳಲ್ಲೇ ಇಂತಹ ದೋಷಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬೋರ್ಡ್ ಆಫ್ ಪೀಸ್’ಗೆ ಸೇರದ ಭಾರತದ ನಿಲುವು ಸ್ವಾಗತಾರ್ಹ
ಕುಂದಲಹಳ್ಳಿಯಲ್ಲಿ ಅಡುಗೆ ಕೆಲಸ ಮಾಡುವ ಸಾಹೇಬ್ ಅಲಿ ಶೇಖ್ ಅವರ ಕುಟುಂಬದ ಒಂಬತ್ತು ಮಂದಿ ಇಲ್ಲೇ ನೆಲೆಸಿದ್ದರೂ, ನೋಟಿಸ್ ಬಂದಿದ್ದು ಅವರಿಗೆ ಮತ್ತು ಅವರ ಸಹೋದರನಿಗೆ ಮಾತ್ರ. “ನಾವು ಸುಮಾರು ಐದು ವರ್ಷಗಳಿಂದ ಇಲ್ಲೇ ಇದ್ದೇವೆ. ಎಲ್ಲ ದಾಖಲೆಗಳಿದ್ದರೂ ಜನವರಿ 26ರೊಳಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅಷ್ಟು ಕಡಿಮೆ ಅವಧಿಯಲ್ಲಿ ಹಣ ಹೊಂದಿಸಲಾಗದೆ, ಕೊನೆಗೂ ಮಾಲೀಕರಿಂದ ಸಾಲ ಪಡೆದು ವಿಮಾನದ ಮೂಲಕ ಕೋಲ್ಕತ್ತಾಗೆ ತೆರಳಿ, ಅಲ್ಲಿಂದ ರಸ್ತೆ ಮಾರ್ಗದಲ್ಲಿ ನಾಡಿಯಾ ತಲುಪಿದೆವು,” ಎಂದು ಅವರು ವಿವರಿಸಿದರು.
ಕೆಲವೊಂದು ಕ್ಷೇತ್ರಗಳಲ್ಲಿ ಪಶ್ಚಿಮ ಬಂಗಾಳದ ಸ್ಥಳೀಯ ರಾಜಕೀಯ ಮುಖಂಡರು ಕಾರ್ಮಿಕರು ಮರಳಲು ವಿಮಾನ ಟಿಕೆಟ್ ವ್ಯವಸ್ಥೆ ಮಾಡಿರುವುದು ವರದಿಯಾಗಿದೆ. ಆರ್.ಆರ್. ನಗರದ ಗೃಹ ಕಾರ್ಮಿಕರಾದ ರೇಷ್ಮಾ ಬಾನು ಅವರು, “ನನ್ನ ವಿಮಾನ ಟಿಕೆಟ್ ಅನ್ನು ರಾಜಕಾರಣಿಯೊಬ್ಬರು ಬುಕ್ ಮಾಡಿಕೊಟ್ಟರು. ಹೀಗಾಗಿ ಅಲ್ಪ ಸಮಯದಲ್ಲಿ ಊರು ತಲುಪಲು ಸಾಧ್ಯವಾಯಿತು,” ಎಂದು ತಿಳಿಸಿದರು.
ಈ ಸಂದರ್ಭವನ್ನು 2019ರ ಸಿಎಎ-ಎನ್‌ಆರ್‌ಸಿ ಗಲಾಟೆಯ ದಿನಗಳಿಗೆ ರೇಷ್ಮಾ ಬಾನು ಹೋಲಿಸುತ್ತಾರೆ. “ಆಗ ಜನ ಏಕಾಏಕಿ ಯಾರಿಗೂ ಹೇಳದೆ ಊರುಗಳಿಗೆ ಓಡಿ ಹೋಗಿದ್ದರು. ತಿಂಗಳುಗಟ್ಟಲೆ ಕೆಲಸಕ್ಕೆ ಮರಳಿರಲಿಲ್ಲ. ಆದರೆ ಈ ಬಾರಿ ಕಾರ್ಮಿಕರು ಮಾಲೀಕರಿಗೆ ಮಾಹಿತಿ ನೀಡಿ ಹೋಗುತ್ತಿದ್ದಾರೆ. ಆದರೆ ಪರಿಶೀಲನೆ ಪ್ರಕ್ರಿಯೆ ಯಾವಾಗ ಮುಗಿಯುತ್ತದೆ ಎಂಬ ಸ್ಪಷ್ಟತೆ ಇಲ್ಲದಿರುವುದು ಆತಂಕ ಮೂಡಿಸಿದೆ,” ಎಂದರು.
ಬಾಲಗೆರೆಯಲ್ಲಿ ಗ್ಯಾರೇಜ್ ನಡೆಸುವ ಶರೀಫ್ ಉಲ್ ಶೇಖ್ ಅವರದ್ದು ಮತ್ತೊಂದು ಬಗೆಯ ಗೋಳು. ಜನವರಿ 14 ರಂದು ನೋಟಿಸ್ ಪಡೆದ ಅವರು ಪಾಸ್‌ಪೋರ್ಟ್ ಸೇರಿದಂತೆ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೂ, 2002ರ ಪಟ್ಟಿಯಲ್ಲಿ ಅವರ ತಂದೆಯ ಹೆಸರಿಲ್ಲ (ತಾತನ ಹೆಸರಿದೆ) ಎಂಬ ಕಾರಣಕ್ಕೆ ಅವರ ಸೇರ್ಪಡೆ ಇನ್ನೂ ತೂಗುಯ್ಯಾಲೆಯಲ್ಲಿದೆ. ಬೆಂಗಳೂರಿನಿಂದ ಹೌರಾಗೆ ರೈಲಿನಲ್ಲಿ ಮತ್ತು ಅಲ್ಲಿಂದ ಬಸ್ ಮೂಲಕ ನಾಡಿಯಾಗೆ 36 ಗಂಟೆಗಳ ಸುದೀರ್ಘ ಪ್ರಯಾಣ ಬೆಳೆಸಿ ಅವರು ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
SIR ಪ್ರಕ್ರಿಯೆಯು ಬೆಂಗಳೂರಿನ ಬಂಗಾಳಿ ಕಾರ್ಮಿಕರ ವಲಯದಲ್ಲಿ ಭಾರಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಸಾವಿರಾರು ಕುಟುಂಬಗಳು ದಿಕ್ಕು ತೋಚದಂತಾಗಿವೆ. ಪರಿಶೀಲನೆಯ ನೆಪದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಅವರ ಬದುಕಿನ ಬಂಡಿಯನ್ನು ಹಳಿ ತಪ್ಪಿಸಿರುವುದಂತೂ ಸುಳ್ಳಲ್ಲ.
ಕೃಪೆ- ದಿ ಹಿಂದೂ





