ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕನಿಷ್ಠ 19 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್‌ರಿಫ್ ಕಫ್ ಸಿರಪ್ ತಯಾರಿಕಾ ಕಂಪನಿ ಶ್ರೀಸನ್ ಫಾರ್ಮಾಸ್ಯೂಟಿಕಲ್ಸ್‌ನ ಮಾಲೀಕ ರಂಗನಾಥನ್ ಅವರನ್ನು ಚೆನ್ನೈನಲ್ಲಿ ಕಳೆದ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿರಪ್‌ನಲ್ಲಿ ವಿಷಕಾರಿ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ರಂಗನಾಥನ್ ಅವರನ್ನು ತನಿಖೆಗಾಗಿ ಮಧ್ಯಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡ ಬಳಿಕ ಬಂಧನಕ್ಕೊಳಗಾಗಿದ್ದಾರೆ. ಅವರನ್ನು ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಗೆ ಕರೆತರಲಾಗುವುದು, ಅಲ್ಲಿ ಹೆಚ್ಚಿನ ಸಾವುಗಳು ವರದಿಯಾಗಿವೆ.
ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯು ಬಿಡುಗಡೆ ಮಾಡಿದ 26 ಪುಟಗಳ ವರದಿಯಲ್ಲಿ, ಕಂಪನಿಯ ಕಾರ್ಖಾನೆಯಲ್ಲಿ ಅಸಹ್ಯಕರ ಪರಿಸ್ಥಿತಿಗಳಲ್ಲಿ ಸಿರಪ್ ತಯಾರಿಸಲಾಗುತ್ತಿದ್ದುದನ್ನು ಬಹಿರಂಗಪಡಿಸಿದೆ. 350ಕ್ಕೂ ಹೆಚ್ಚು ಉಲ್ಲಂಘನೆಗಳನ್ನು ವರದಿ ಮಾಡಲಾಗಿದ್ದು,ಫಾರ್ಮಾ ಗ್ರೇಡ್ ಅಲ್ಲದ ರಾಸಾಯನಿಕಗಳ ಬಳಕೆ, ಮತ್ತು ನೈಜ ಪ್ರಮಾಣಕ್ಕಿಂತ ಹೆಚ್ಚಾದ ವಿಷಕಾರಿ ಡೈಇಥಿಲಿನ್ ಗ್ಲೈಕಾಲ್ (ಶೇ 48) ಮಿಶ್ರಣ ಸೇರಿದಂತೆ ಹಲವು ಗಂಭೀರ ಅಕ್ರಮಗಳು ಪತ್ತೆಯಾಗಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮತ್ತೆ ಬಿಹಾರ ಗೆಲ್ಲಲು ಮೋದಿ ರಣತಂತ್ರ- ಹಣದ ಹೊಳೆ, ಆಶ್ವಾಸನೆಗಳ ಮಳೆ!
ಕಂಪನಿಗೆ ಉತ್ತಮ ತಯಾರಿಕಾ ಪ್ರಮಾಣಪತ್ರ (GMP) ಇರದಿದ್ದರೂ, ಅವರು ಔಷಧ ತಯಾರಿಕೆ ಮತ್ತು ಮಾರಾಟ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ನಿಯಂತ್ರಣ ಮಂಡಳಿ ಕಂಪನಿಯ ಪರವಾನಗಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಉತ್ಪಾದನೆ ನಿಲ್ಲಿಸಲು ಆದೇಶಿಸಿದೆ. ಈ ಬೆಳವಣಿಗೆಯ ನಂತರ, ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (CDSCO) ಮತ್ತು ಆರೋಗ್ಯ ಸಚಿವಾಲಯ ಕಂಪನಿಯ ತಯಾರಿಕಾ ಪರವಾನಗಿ ರದ್ದುಪಡಿಸಲು ಶಿಫಾರಸು ಮಾಡಿವೆ.
ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಔಷಧ ತಯಾರಿಕಾ ಘಟಕಗಳಲ್ಲಿ ನಿಯಮ ಪಾಲನೆ ಖಚಿತಪಡಿಸುವ ಜವಾಬ್ದಾರಿ ರಾಜ್ಯ ಔಷಧ ನಿಯಂತ್ರಕರದ್ದಾಗಿದೆ. ತಯಾರಿಕಾ ಪರವಾನಗಿ (Form 25) ನೀಡುವುದು ಮತ್ತು ರದ್ದುಪಡಿಸುವ ಅಂತಿಮ ನಿರ್ಧಾರವನ್ನು ರಾಜ್ಯ ಔಷಧ ನಿಯಂತ್ರಕವೇ ಕೈಗೊಳ್ಳಲಿದೆ .





