ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೇಪಾಳಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸುಮಾರು 18 ಗಂಟೆಗಳ ಕಾಲ ವಿಳಂಬವಾಗಿದ್ದು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಿದ್ದಾರೆ, ಘೋಷಣೆ ಕೂಗಿದ್ದಾರೆ.
10 ದಿನಗಳ ನೇಪಾಳ ಪ್ರವಾಸಕ್ಕಾಗಿ ರಾಜ್ಯದಿಂದ ಹೊರಟ್ಟಿದ್ದವರು ಈ ವಿಮಾನದಲ್ಲಿ ಅಧಿಕವಾಗಿ ಟಿಕೆಟ್ ಬುಕ್ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ. ವಿಮಾನ ತಡವಾದ ಕಾರಣ ಟರ್ಮಿನಲ್ 2ರ ಬಳಿ ಜಮಾಯಿಸಿದ ಪ್ರಯಾಣಿಕರು ವಿಮಾನಯಾನ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ವಿಡಿಯೋಗಳಲ್ಲಿ ಕಂಡುಬಂದಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ದಟ್ಟ ಮಂಜು; 41 ವಿಮಾನ ಹಾರಾಟ ವಿಳಂಬ
ಪರಿಷ್ಕೃತ ನಿರ್ಗಮನ ಸಮಯದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಲು ವಿಮಾನಯಾನ ಸಂಸ್ಥೆ ವಿಫಲವಾಗಿದೆ. ಇದರಿಂದಾಗಿ ದೀರ್ಘಕಾಲ ನಾವೆಲ್ಲರೂ ಕಾಯುವಂತಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಗುರುವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಿಂದ ಕಠ್ಮಂಡುವಿಗೆ ವಿಮಾನ ಹೊರಟಿದೆ. ಆದರೆ ಪ್ರಯಾಣಿಕರಿಗೆ ಸ್ಪಷ್ಟವಾಗಿ ತಿಳಿಸದೆಯೇ ವಿಮಾನವು ಕಠ್ಮಂಡುವಿನಲ್ಲಿ ಲ್ಯಾಂಡ್ ಆಗದೆಯೇ ಹಿಂತಿರುಗಿದೆ. ಮರುದಿನ ಬೆಳಿಗ್ಗೆ ಅದೇ ವಿಮಾನವು ಟೇಕ್ ಆಫ್ ಆಗಿದೆ. ಆದರೆ ಮತ್ತೆ ಕಠ್ಮಂಡುವಿನಲ್ಲಿ ಲ್ಯಾಂಡ್ ಮಾಡಿಲ್ಲ. ಬಳಿಕ ಲಕ್ನೋಗೆ ಸಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ದೀರ್ಘ ಕಾಲ ಕಾದು, ಆಯಾಸಗೊಂಡ ಪ್ರಯಾಣಿಕರು ವಿಮಾನದೊಳಗೆ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿಗೆಯೇ ವಾಪಸ್ ಕರೆದೊಯ್ಯುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರಿಗೆ ಹಿಂದಿರುಗಿದ ಬಳಿಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ವಿಳಂಬಕ್ಕೆ ‘ಕೆಟ್ಟ ಹವಾಮಾನ’ ಕಾರಣ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೇಳಿದೆ.
“ಕಠ್ಮಂಡುವಿನಲ್ಲಿ ಪ್ರತಿಕೂಲ ಹವಾಮಾನವಿದ್ದು ಫೆಬ್ರವರಿ 26 ಮತ್ತು 27 ರಂದು ನಮ್ಮ ಬೆಂಗಳೂರು-ಕಠ್ಮಂಡು ವಿಮಾನಗಳನ್ನು ಬೇರೆಡೆಗೆ ಹಾರಬೇಕಾಯಿತು. ನಿನ್ನೆ ಸೇವೆಯಲ್ಲಿ ವ್ಯತ್ಯಯವಾದ ಕಾರಣ ಇಂದು ವಿಮಾನ ವ್ಯವಸ್ಥೆ ಮಾಡಿದರೆ, ಅದೇ ಸಮಸ್ಯೆ ಉಂಟಾಗಿದೆ” ಎಂದು ಸಂಸ್ಥೆ ತಿಳಿಸಿದೆ.
“ಪ್ರಯಾಣಿಕರಿಗೆ ಹೋಟೆಲ್ ವಸತಿ ಕಲ್ಪಿಸಲಾಗಿದೆ. ಪೂರ್ಣ ಮರುಪಾವತಿಯ ಆಯ್ಕೆಯ್ನೂ ನೀಡಲಾಗಿದೆ. ನಾಳೆ ಮತ್ತೆ ನೇಪಾಳಕ್ಕೆ ವಿಮಾನ ನಿಗದಿಪಡಿಸಲಾಗುವುದು. ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ” ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.





