ದೆಹಲಿ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಯಲ್ಲೇ ನಾಲ್ಕು ವಿಮಾನಯಾನಗಳನ್ನು ಏರ್ ಇಂಡಿಯಾ ಸಂಸ್ಥೆ ರದ್ದುಗೊಳಿಸಿದ್ದು, ಸಂಸ್ಥೆ ಯಾವುದೇ ಕಾರಣ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಏರ್ ಇಂಡಿಯಾ ಸಂಸ್ಥೆ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆಗೆ ಇಳಿದಿದ್ದಾರೆ.
ಇತ್ತೀಚೆಗೆ ಇಂಡಿಗೋ ಸಂಸ್ಥೆಯು ಸಿಬ್ಬಂದಿ ಕೊರತೆ ಕಾರಣ ನೀಡಿ ಹಲವು ವಿಮಾನಗಳನ್ನು ರದ್ದುಗೊಳಿಸಿತ್ತು. ಇದು ಸಾವಿರಾರು ಪ್ರಯಾಣಿಕರ ಮೇಲೆ ಪ್ರಭಾವ ಬೀರಿತ್ತು. ಇದೀಗ ಏರ್ ಇಂಡಿಯಾ ಕೂಡಾ ದೆಹಲಿಯಲ್ಲಿ ಒಂದಾದ ಬಳಿಕ ಒಂದು ವಿಮಾನಯಾನ ರದ್ದುಗೊಳಿಸುತ್ತಿದ್ದು, ಅದಕ್ಕೆ ಸರಿಯಾದ ಕಾರಣವನ್ನೂ ನೀಡುತ್ತಿಲ್ಲ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ದೆಹಲಿ ವಿಮಾನ ನಿಲ್ದಾಣದ ಸುತ್ತ ಆವರಿಸಿದ ಮಂಜು: 40 ವಿಮಾನಯಾನ ರದ್ದುಗೊಳಿಸಿದ ಏರ್ ಇಂಡಿಯಾ
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿರುವ ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟೂಡಾ ಶಶಿಧರ್ (ಶಶಿಧರ್ ತಿಪಟೂರು), “ಕಳೆದ ಒಂದು ಗಂಟೆಯಲ್ಲಿ ನಾಲ್ಕು ವಿಮಾನಯಾನ ರದ್ದುಗೊಳಿಸಲಾಗಿದೆ. ಬೆಂಗಳೂರಿನ ಎರಡು ಮತ್ತು ಹೈದಾರಾಬಾದ್, ಪುಣೆಯ ತಲಾ ಒಂದು ವಿಮಾನಯಾನ ರದ್ದುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.
ಮುಂಜಾನೆಯೇ ಮಂಜು ಆವರಿಸಿರುವ ಕಾರಣ ನೀಡಿ ಏರ್ ಇಂಡಿಯಾ 40 ವಿಮಾನಯಾನಗಳನ್ನು ರದ್ದುಗೊಳಿಸಿತ್ತು. ಈ ಬಗ್ಗೆಯೂ ಪ್ರತಿಕ್ರಿಯಿಸಿದ ಶಶಿಧರ್ ಅವರು, “ಮುಂಜಾನೆ ಮಂಜಿನ ಕಾರಣ 40 ವಿಮಾನಯಾನಗಳನ್ನು ರದ್ದುಗೊಳಿಸಿದೆ. ಆದರೆ ಈಗ ಸರಿಯಾದ ಕಾರಣವನ್ನೇ ನೀಡುತ್ತಿಲ್ಲ. ನಾನು 7:30 ಗಂಟೆಗೆ ವಿಮಾನ ಹತ್ತಬೇಕಾಗಿತ್ತು. ಆದರೆ ಇನ್ನೂ ಕಾಯುತ್ತಿರುವೆ. ವಿಮಾನ ರದ್ದಾಗಿದೆಯೇ ಅಥವಾ ಇನ್ನಷ್ಟೂ ವಿಳಂಬವಾಗುತ್ತದೆಯೇ ಎಂಬ ಪ್ರಶ್ನೆಗೆ ಮಾಹಿತಿಯೇ ನೀಡುತ್ತಿಲ್ಲ” ಎಂದು ಹೇಳಿದ್ದಾರೆ.
ದೆಹಲಿ ವಿಮಾನ ನಿಲ್ದಾಣದ ಸುತ್ತ ಸೋಮವಾರ ದಟ್ಟವಾದ ಮಂಜು ಆವರಿಸಿದ್ದು ಅನೇಕ ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ. ಸೋಮವಾರ ದೆಹಲಿಗೆ ಮತ್ತು ಅಲ್ಲಿಂದ ಹೊರಡುವ 40 ವಿಮಾನಯಾನಗಳನ್ನು ರದ್ದುಗೊಳಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. ಈ ನಡುವೆ ಕೆಲವು ವಿಮಾನಗಳು ವಿಳಂಬವಾಗಬಹುದು ಎಂದು ಇಂಡಿಗೋ ಕೂಡಾ ಹೇಳಿದೆ. ಆದರೆ ಇದೀಗ ಏರ್ ಇಂಡಿಯಾ ಯಾವ ಕಾರಣಕ್ಕೆ ವಿಮಾನ ರದ್ದುಗೊಳಿಸಿದೆ ಎಂಬುದು ಸ್ಪಷ್ಟವಾಗಿಲ್ಲ.





