4 ವರ್ಷದ ಬಾಲಕಿಯು 50ರವರೆಗೆ ಎಣಿಸಲು ವಿಫಲಳಾದ ಕಾರಣಕ್ಕೆ ಆಕೆಯನ್ನು ವಿಕೃತ ತಂದೆಯೊಬ್ಬ ಅಮಾನುಷವಾಗಿ ಹೊಡೆದು ಕೊಂದಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಗಳನ್ನು ಕೊಂದು, ಆಕಸ್ಮಿಕವಾಗಿ ಬಿದ್ದಳೆಂದು ಕ್ರೂರಿ ಕತೆ ಕಟ್ಟಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧತನನ್ನು ಫರಿದಾಬಾದ್ ನಿವಾಸಿ ಕೃಷ್ಣ ಜೈಸ್ವಾಲ್ ಎಂದು ಹೆಸರಿಸಲಾಗಿದೆ. ಹಲಗಿನ ಹೊತ್ತಿನಲ್ಲಿ ಜೈಸ್ವಾಲ್ ಪತ್ನಿ ಕೆಲಸಕ್ಕೆ ತೆರಳುತ್ತಿದ್ದರಿಂದ, ಆತನೇ ಮಗಳನ್ನು ನೋಡಿಕೊಳ್ಳುತ್ತಿದ್ದ. ಮನೆಯಲ್ಲಿ ಪಾಠ ಹೇಳಿಕೊಡುತ್ತಿದ್ದ. ಈ ವೇಳೆ, ಬಾಲಕಿಗೆ 50ರವರೆಗೆ ಸಂಖ್ಯೆಯನ್ನು ಎಣಿಸಲು ಹೇಳಿದ್ದಾನೆ. ಆದರೆ, ಬಾಲಕಿ ಎಣಿಕೆಯಲ್ಲಿ ವಿಫಲಳಾಗಿದ್ದಾಳೆ. ಇದರಿಂದ, ಕೋಪಗೊಂಡ ದುರುಳ ತಂದೆ, ಆಕೆಯನ್ನು ತೀವ್ರವಾಗಿ ಹೊಡೆತಿದ್ದಾನೆ. ಆಕೆ ಪ್ರಜ್ಞಾಹೀನಳಾಗಿದ್ದು, ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ, ಬಾಲಕಿ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.
ಬಳಿಕ, ತನ್ನ ಪತ್ನಿಗೆ ಕರೆ ಮಾಡಿರುವ ಜೈಸ್ವಾಲ್, ಮಗಳು ಆಟವಾಡುವಾಗ ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾಳೆಂದು ಕತೆಕಟ್ಟಿದ್ದಾನೆ. ಆತನ ಪತ್ನಿ ಆಸ್ಪತ್ರೆಗೆ ಬಂದಾಗ, ತಮ್ಮ ಮಗಳ ದೇಹದ ಮೇಲೆ ಹಲವಾರು ಗಾಯಗಳು ಇದ್ದುದ್ದನ್ನು ಗಮನಿಸಿದ್ದಾರೆ. ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡು ಪೊಲೀಸರು ಜೈಸ್ವಾಲ್‌ನಲ್ಲಿ ವಿಚಾರಣೆಗೆ ಒಳಪಡಿಸಿದ್ದು, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.




