ಮಹಾ ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡುವ ಮತ್ತು ಬಟ್ಟೆ ಬದಲಾಯಿಸುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುವ ಮತ್ತು ಮಾರಾಟ ಮಾಡುತ್ತಿರುವ ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ ಮಹಿಳೆಯರು ಸ್ನಾನ ಮಾಡುವ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದ ಕಾರಣ @neha1224872024 ಎಂಬ ಇನ್‌ಸ್ಟಾಗ್ರಾಂ ಖಾತೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೆಯೇ ಸಿಸಿಟಿವಿ ಚಾನೆಲ್ 11 ಎಂಬ ಟೆಲಿಗ್ರಾಂ ಖಾತೆ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳವನ್ನು ‘ಮೃತ್ಯು ಕುಂಭ’ ಎಂದು ಕರೆದ ಮಮತಾ ಬ್ಯಾನರ್ಜಿ
ಮೊದಲು ಮಹಾ ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡುವ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಬಳಿಕ ಸಣ್ಣ ವಿಡಿಯೋ ತುಣುಕನ್ನು ಹಾಕಿ, ಸಂಪೂರ್ಣ ವಿಡಿಯೋವನ್ನು ಟೆಲಿಗ್ರಾಂ ಮೂಲಕ ಖರೀದಿ ಮಾಡುವಂತೆ ತಿಳಿಸಲಾಗಿದೆ.
‘ಗಂಗಾ ರಿವರ್ ಓಪನ್ ಬಾತಿಂಗ್ ಗ್ರೂಪ್’ ಮತ್ತು ‘ಹಿಡನ್ ಬಾತ್ ವಿಡಿಯೋ ಗ್ರೂಪ್’ ಎಂಬ ಹೆಸರಿನಲ್ಲಿ ಈ ಗುಂಪುಗಳಿವೆ. ಹಾಗೆಯೇ ಭಾರತದಲ್ಲಿ ಕಳೆದ ವಾರ ಓಪನ್ ಬಾತಿಂಗ್ ಎಂಬುದನ್ನು ಹುಡುಕಾಡುವವರ ಸಂಖ್ಯೆಯು ಅಧಿಕವಾಗಿದೆ ಎಂದು ವರದಿಯಾಗಿದೆ. ಈ ಟೆಲಿಗ್ರಾಂ ಚಾನೆಲ್‌ಗಳಿಗೆ ಸೇರಿಕೊಳ್ಳಲು 1999 ರೂಪಾಯಿಯಿಂದ 3 ಸಾವಿರ ರೂಪಾಯಿವರೆಗೆ ಹಣ ಪಡೆಯಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳ ಕಾಲ್ತುಳಿತ | ಈವರೆಗೆ ಮೃತರ ನಿಖರ ಸಂಖ್ಯೆ ಯಾಕೆ ಬಹಿರಂಗಪಡಿಸಿಲ್ಲ: ಅಖಿಲೇಶ್ ಪ್ರಶ್ನೆ
mahakumbh2025, #gangasnan ಮತ್ತು #prayagrajkumbh ಎಂಬ ಹ್ಯಾಷ್‌ಟ್ಯಾಗ್‌ಗಳ ಮೂಲಕ ಫೇಸ್‌ಬುಕ್ ಪೇಜ್‌ನಲ್ಲಿ ಈ ವಿಡಿಯೋಗಳನ್ನು ಹರಡಲಾಗುತ್ತಿದೆ. ಇನ್ನು ಮಹಿಳೆಯರಿಗೆ ತಮ್ಮ ವಿಡಿಯೋವನ್ನು ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ ಎಂಬುದು ವಿಡಿಯೋ ನೋಡಿದಾಗ ತಿಳಿದುಬರುತ್ತದೆ ಎಂದು ವರದಿಯಾಗಿದೆ.
ಈ ಖಾತೆಗಳ ಮೂಲಕ ಮಹಿಳೆಯರು ಕುಂಭಮೇಳದಲ್ಲಿ ಸ್ನಾನ ಮಾಡುವ ವಿಡಿಯೋಗಳನ್ನು ಹರಡುತ್ತಿರುವವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ನಡುವೆ ಮಹಾ ಕುಂಭಮೇಳದ ಬಗ್ಗೆ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ 101 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, 10 ಪ್ರಕರಣಗಳನ್ನು ದಾಖಲಿಸಲಾಗಿದೆ.





