ಕಳೆದ ಕೆಲವು ದಿನಗಳಿಂದ ಹಲವು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ವಿಮಾನಗಳು ರದ್ದಾಗುತ್ತಿವೆ. ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿದೆ. ಸಿಬ್ಬಂದಿಗೆ ಒಂದು ವಾರ ವಿಶ್ರಾಂತಿ ನೀಡುವುದನ್ನು ಕಡ್ಡಾಯಗೊಳಿಸುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿಯಮದಿಂದಾಗಿ ಸಿಬ್ಬಂದಿ ಕೊರತೆ ಉಂಟಾಗಿದೆ. ಇದರಿಂದಾಗಿ ಸುಮಾರು 500ಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಇಂಡಿಗೋ ಹೇಳಿಕೊಂಡಿದೆ. ಇದಾದ ಬಳಿಕ ಡಿಜಿಸಿಎ ನಿಯಮವನ್ನು ಹಿಂಡಪಡೆದಿದೆ. ಆದರೆ ಇಂದೂ ಸುಮಾರು 400ಕ್ಕೂ ಅಧಿಕ ವಿಮಾನಗಳು ರದ್ದಾಗಿವೆ.
ಇದನ್ನು ಓದಿದ್ದೀರಾ? ಇಂಡಿಗೋ ವಿಮಾನ ಸಂಚಾರ ಅಸ್ತವ್ಯಸ್ತ- ಧೂಮಪರದೆಯ ಹಿಂದಿನ ಅಸಲು ಕಾರಣವೇನು? ಏರ್‌ಬಸ್ ತಂತ್ರಾಂಶ ದೋಷವೇ?
ಕಳೆದ ನಾಲ್ಕು ದಿನಗಳಲ್ಲಿ ಸುಮಾರು 2000ಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದು, ಇಂಡಿಗೋ ಅವ್ಯವಸ್ಥೆಯ ವಿರುದ್ಧವಾಗಿ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ. ಸುಮಾರು 3 ಲಕ್ಷ ಪ್ರಯಾಣಿಕರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ವಿಮಾನಗಳು ರದ್ದಾದ ಬಳಿಕ ಸರಿಯಾದ ಮಾಹಿತಿಯನ್ನೂ ಪ್ರಯಾಣಿಕರಿಗೆ ತಿಳಿಸಿಲ್ಲ ಎಂಬ ಆರೋಪವೂ ಇದೆ. ಪ್ರಯಾಣಿಕರಿಗೆ ಸರಿಯಾಗಿ ಮಾಹಿತಿ ನೀಡದ ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ರಾತ್ರಿಯಿಡೀ ಪ್ರಯಾಣಿಕರು ಕಾಯುವಂತಾಗಿದೆ. ಇನ್ನು ಇಂದು ಮತ್ತು ನಾಳೆ ಹೆಚ್ಚುವರಿಯಾಗಿ ಶೇ.25-30 ವಿಮಾನಗಳು ರದ್ದಾಗಬಹುದು ಅಥವಾ ವಿಳಂಬವಾಗಬಹುದು. ಪ್ರತಿದಿನ ಸರಾಸರಿ 500 ವಿಮಾನಗಳು ವಿಳಂಬವಾಗುತ್ತಿವೆ. ಶನಿವಾರ ಮತ್ತು ಭಾನುವಾರ 600ಕ್ಕೂ ಅಧಿಕ ವಿಮಾನಗಳು ರದ್ದಾಗುವ ಸಾಧ್ಯತೆಯಿದೆ.





