ವಿಮಾನ ದುರಂತ | ಪೈಲಟ್ ಶಾಂಭವಿ ಅಜ್ಜಿಗೆ ಕಳುಹಿಸಿದ ಕೊನೆಯ ಸಂದೇಶದಲ್ಲೇನಿದೆ?

Date:

ಸಾಮಾನ್ಯವಾಗಿ, ವಿಮಾನ ಅಪಘಾತದಂತಹ ದುರಂತಗಳಲ್ಲಿ ಪ್ರಭಾವಿಗಳು, ರಾಜಕೀಯ ನಾಯಕರು, ಪ್ರತಿಷ್ಠಿತರು ಸಾವನ್ನಪ್ಪಿದ್ದಾಗ ಅವರ ಹೆಸರು ಮಾತ್ರ ಬರುತ್ತದೆ. ಅವರ ಸಹಾಯಕರು, ಡ್ರೈವರ್‌, ಪೈಲಟ್‌ಗಳ ಸಾವು ಅಷ್ಟೊಂದು ಪ್ರಾಮುಖ್ಯತೆ ಪಡೆಯುವುದಿಲ್ಲ. ಇದೇ ದುರಂತ.

ಮಹಾರಾಷ್ಟ್ರದ ಬಾರಾಮತಿಯಲ್ಲಿ ಬುಧವಾರ (ಜ.೨೮)ನಡೆದ ಭೀಕರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿದ್ದ ವಿಮಾನವನ್ನು ಚಲಾಯಿಸುತ್ತಿದ್ದ ಧೈರ್ಯಶಾಲಿ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಕೂಡ ಸುಟ್ಟು ಹೋಗಿದ್ದಾರೆ. ಲಿಯರ್ ಜೆಟ್ 45 (VT–SSK) ವಿಮಾನವನ್ನು ಲ್ಯಾಂಡ್ ಮಾಡುವ ವೇಳೆ ಈ ದುರ್ಘಟನೆ ನಡೆದಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ.

ದುರಂತ ನಡೆಯುವುದಕ್ಕೂ ಮುನ್ನ ತನ್ನ ಅಜ್ಜಿಗೆ ಯಾವತ್ತೂ ಮೆಸೇಜ್ ಕಳುಹಿಸದ ಕ್ಯಾಪ್ಟನ್ ಶಾಂಭವಿ ಸಂದೇಶವೊಂದನ್ನ ಕಳುಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಹಾಯ್, ಗುಡ್ ಮಾರ್ನಿಂಗ್ ದದ್ದಾ’ – ಇದು ತನ್ನ ಅಜ್ಜಿಗೆ ಶಾಂಭವಿ ಪ್ರೀತಿಯಿಂದ ಕಳುಹಿಸಿದ ಕೊನೆಯ ಸಂದೇಶ.

ಈ ಸಂದೇಶಕ್ಕೆ ಎಂದಿನಂತೆ ಪ್ರತಿಕ್ರಿಯಿಸಿರುವ ಅಜ್ಜಿ ಮೀರಾ ಪಾಠಕ್, ‘ಗುಡ್ ಮಾರ್ನಿಂಗ್ ಚಿನಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂಜಾನೆ ಸುಮಾರು 6:30ಕ್ಕೆ ಕಳುಹಿಸಿದ ಈ ಸಂದೇಶವೇ ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಹಾಗಾಗುತ್ತದೆ ಎಂದು ಅಜ್ಜಿ ಊಹಿಸಿರಲಿಲ್ಲ. ಅಜ್ಜಿಗೆ ಈ ಸಂದೇಶ ತಲುಪುವ ಹೊತ್ತಿಗೆ ಸಂದೇಶ ಕಳುಹಿಸಿದ ಫೋನ್ ಶಾಶ್ವತವಾಗಿ ಸೈಲೆಂಟ್ ಆಗಿತ್ತು.

plane crash 3

ಶಾಂಭವಿ ಅಜ್ಜಿ ಮೀರಾ ಪಾಠಕ್ ಗ್ವಾಲಿಯರ್‌ನ ಬಸಂತ್ ವಿಹಾರ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಅವರ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿದೆ. ಎಲ್ಲರೂ ಪ್ರೀತಿಯಿಂದ ಚಿನಿ ಎಂದು ಕರೆಯುವ ಪುಟ್ಟ ಹುಡುಗಿ ಶಾಂಭವಿ ಅವರ ನೆನಪುಗಳೇ ಈ ಮನೆಯಲ್ಲಿ ಬೇರೂರಿವೆ. ಅವರ ನೆನಪುಗಳ ಮನೆಯಲ್ಲಿಯೇ ಅಜ್ಜಿ ವಾಸಿಸುತ್ತಿದ್ದಾರೆ.

ಬುಧವಾರ ಬೆಳಿಗ್ಗೆ ಕಣ್ಣೀರು ಹಾಕುತ್ತಾ ತಮ್ಮ ಫೋನ್ ನೋಡುತ್ತಿದ್ದ ಮೀರಾ ಪಾಠಕ್ ಅವರು, ‘ಇದು ಶಾಂಭವಿಯ ಕೊನೆಯ ಸಂದೇಶ ಎಂದು ನನಗೆ ತಿಳಿದಿರಲಿಲ್ಲ” ಎಂದು ದುಖಿಃತರಾಗಿದ್ದಾರೆ. “ಏನೋ ಅವಘಡ ಸಂಭವಿಸಿದೆ ಎಂಬ ಅನುಮಾನ ನನಗೆ ಮೂಡಿತ್ತು” ಎಂದು ಹೇಳಿದ್ದಾರೆ.

“ನನ್ನ ಹಿರಿಯ ಮಗ ವಿಮಾನ ಅಪಘಾತ ಸಂಭವಿಸಿದೆ ಎಂದು ನನಗೆ ಹೇಳಿದ. ನಿನ್ನೆ ರಾತ್ರಿ, ನಾನು ಅವನನ್ನು ಫೋನ್‌ನಲ್ಲಿ ‘ಚಿನಿ ಎಲ್ಲಿದ್ದಾಳೆ?’ ಎಂದು ಕೇಳಿದ್ದೆ. ಅವಳು ಹೆಚ್ಚಾಗಿ ಮುಂಬೈನಲ್ಲಿ ವಾಸಿಸುತ್ತಿದ್ದಳು. ಅವಳು ನನಗೆ ಹೆಚ್ಚಾಗಿ ಕರೆ ಮಾಡುತ್ತಿರಲಿಲ್ಲ. ಸಾಮಾನ್ಯವಾಗಿ ಸಂದೇಶವನ್ನೂ ಕಳುಹಿಸುತ್ತಿರಲಿಲ್ಲ. ಅವಳು ಇಂದು ನನ್ನನ್ನು ಹೇಗೆ ನೆನಪಿಸಿಕೊಂಡಳು ಎಂಬುದೇ ನನಗೆ ಅರ್ಥವಾಗುತ್ತಿಲ್ಲ” ಎಂದಿದ್ದಾರೆ.

“ಬೆಳಿಗ್ಗೆ 9 ಗಂಟೆಗೆ ಶಾಂಭವಿಯ ತಂದೆ ವಿಕ್ರಮ್ ಪಾಠಕ್ ಕರೆ ಮಾಡಿದ್ದರು. ಅವರು ಅಳುತ್ತಿದ್ದರು. ನನಗೆ ಮತ್ತೆ ಕರೆ ಮಾಡುವುದಾಗಿ ಹೇಳಿ ಕರೆಯನ್ನು ಕಟ್ ಮಾಡಿದರು. ಆಗಲೇ ನನಗೆ ಏನೋ ಕೆಟ್ಟದ್ದು ಸಂಭವಿಸಿದೆ ಎಂದು ಅನಿಸುತ್ತಿತ್ತು” ಎಂದು ಹೇಳಿದ್ದಾರೆ. ಎರಡು ಗಂಟೆಗಳ ನಂತರ ಶಾಂಭವಿ ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ ತಿಳಿಯಿತು ಎಂದು ಅವರು ತಿಳಿಸಿದ್ದಾರೆ.

ಅಜ್ಜಿ ಮೀರಾ ಪಾಠಕ್‌ಗೆ ಶಾಂಭವಿ ಎಂದರೆ ಹೆಚ್ಚು ಪ್ರೀತಿ. ಶಾಂಭವಿ ತಮ್ಮ ಅಜ್ಜಿಯನ್ನು ದಾದಿ ಅಥವಾ ಅಜ್ಜಿ ಎಂದು ಕರೆಯುತ್ತಿರಲಿಲ್ಲ. ಬದಲಾಗಿ, ‘ದದ್ದಾ’ ಎಂದು ಕರೆಯುತ್ತಿದ್ದರು ಎಂಬುದನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು. “ನನ್ನ ಪತಿ ನಿಧನರಾದ ನಂತರ, ನಾನು ಅವಳ ಅಜ್ಜ ಎಂದು ಹೇಳುತ್ತಿದ್ದಳು. ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದವರು ಶಾಂಭವಿ. ಅವರ ಕೆಲಸದ ಕಾರಣದಿಂದಾಗಿ ನಾವು ಆಗಾಗ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ನಾವು ಮಾತನಾಡಿದಾಗಲೆಲ್ಲಾ, ಬಹಳ ಸಮಯ ಮಾತನಾಡುತ್ತಿದ್ದೆವು” ಎಂದು ನೆನಪಿಸಿಕೊಂಡರು.

ajji

ಶಾಂಭವಿ ಇತ್ತೀಚೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಅವರ ಅಜ್ಜಿಯೊಂದಿಗೆ ಎರಡು ಗಂಟೆ ಕಾಲ ಕಳೆದಿದ್ದರು. ಕಳೆದ ವರ್ಷ, ಅವರ ಅಜ್ಜ ನಿಧನರಾದಾಗ, ಶಾಂಭವಿ ಅವರು ಮೀರಾ ಪಾಠಕ್ ಅವರೊಂದಿಗೆ 13 ದಿನಗಳ ಕಾಲ ಇದ್ದರು. ಅಜ್ಜಿಯನ್ನು ಒಬ್ಬಂಟಿಯಾಗಿ ಬಿಡಲು ನಿರಾಕರಿಸಿದ್ದರು.

ಮಧ್ಯಪ್ರದೇಶದ ಗ್ವಾಲಿಯರ್‌ನ ಮುರಾರ್‌ನಲ್ಲಿ ಜನಿಸಿದ ಶಾಂಭವಿ ತಮ್ಮ ಬಾಲ್ಯದ ಬಹುಪಾಲು ದಿನಗಳನ್ನ ಇಲ್ಲಿಯೇ ಕಳೆದಿದ್ದಾರೆ. ಅವರ ಅಜ್ಜ ಶ್ರೀಕಿಶನ್ ಪಾಠಕ್ ವಾಯುಪಡೆಯಿಂದ ವಿಂಗ್ ಕಮಾಂಡರ್ ಆಗಿ ನಿವೃತ್ತರಾದವರು. ಅವರ ತಂದೆ ವಿಕ್ರಮ್ ಪಾಠಕ್, ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದವರು. ವಿಮಾನ ಹಾರಾಟದ ಪ್ರೀತಿ ಅವರ ರಕ್ತದಲ್ಲಿಯೇ ಹರಿಯುತ್ತಿತ್ತು.

“ನನ್ನ ಮಗ ಕಾರ್ಗಿಲ್ ಯುದ್ಧಕ್ಕೆ ಹೋದಾಗ, ಅವಳ ತಾಯಿ ಅವಳನ್ನು ಇಲ್ಲಿಗೆ ಕರೆತಂದಿದ್ದರು. ಅವಳು ವಿಮಾನಗಳನ್ನು ನೋಡುತ್ತ, ಆಕಾಶ ನೋಡುತ್ತ ಕಥೆಗಳನ್ನು ಕೇಳುತ್ತ ಬೆಳೆದಳು. ಬಾಲ್ಯದಿಂದಲೂ ಪ್ರತಿಭಾನ್ವಿತಳಾಗಿದ್ದ ಶಾಂಭವಿ ಯಾವಾಗಲೂ ಹಾರಲು ಬಯಸುತ್ತಿದ್ದಳು” ಎಂದು ಅಜ್ಜಿ ಮೀರಾ ನೆನಪಿಸಿಕೊಂಡರು. ಆದರೆ, ಬುಧವಾರ ನಡೆದ ದುರಂತದಲ್ಲಿ ಆ ಕನಸು ಕೊನೆಯಾಯಿತು.

ಈ ಸುದ್ದಿ ಓದಿದ್ದೀರಾ? ಇದು ಲ್ಯಾಂಡ್‌ಲಾರ್ಡ್‌ ಮಾತ್ರವಲ್ಲ ʼಲ್ಯಾಂಡ್‌ಮಾರ್ಕ್‌ʼ ಕೂಡ: ಕೋಟಿಗಾನಹಳ್ಳಿ ರಾಮಯ್ಯ

2006ರಲ್ಲಿ ಗ್ವಾಲಿಯರ್‌ನ ವಾಯುಪಡೆಯ ವಿದ್ಯಾಭಾರತಿ ಶಾಲೆಯಲ್ಲಿ ಎರಡನೇ ತರಗತಿಗೆ ಸೇರಿದ ಶಾಂಭವಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ, 2016 ಮತ್ತು 2018ರ ನಡುವೆ ಏರ್‌ಫೋರ್ಸ್ ದೆಹಲಿ ಪಬ್ಲಿಕ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ ಮುಂಬೈ ವಿಶ್ವವಿದ್ಯಾಲಯದಿಂದ ಏರೋನಾಟಿಕ್ಸ್, ವಾಯುಯಾನ ಮತ್ತು ಏರೋಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿಯಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದಾರೆ.

Captain Shambhavi Pathak

ನ್ಯೂಜಿಲೆಂಡ್ ಇಂಟರ್ ನ್ಯಾಷನಲ್ ಕಮರ್ಷಿಯಲ್ ಪೈಲಟ್ ಅಕಾಡೆಮಿಯಲ್ಲಿ ವಾಣಿಜ್ಯ ಪೈಲಟ್ ಮತ್ತು ಹಾರಾಟ ತರಬೇತಿಯನ್ನು ಪಡೆದ ಅವರು ಮಧ್ಯಪ್ರದೇಶದ ಫ್ಲೈಯಿಂಗ್ ಕ್ಲಬ್‌ನಲ್ಲಿ ಸಹಾಯಕ ವಿಮಾನ ಬೋಧಕರಾಗಿ ಕೆಲಸ ಮಾಡಿದ್ದಾರೆ. ಫ್ಲೈಟ್ ಇನ್ ಸ್ಟ್ರಕ್ಟರ್ ರೇಟಿಂಗ್ ‘ಎ’ ಹೊಂದಿದ್ದರು. ಮತ್ತು ಡಿಜಿಸಿಎ ನೀಡಿದ ಫ್ರೋಜನ್ ಏರ್ ಲೈನ್ ಟ್ರಾನ್ಸ್ ಪೋರ್ಟ್ ಪೈಲಟ್ ಪರವಾನಗಿ (ಎಟಿಪಿಎಲ್) ಹೊಂದಿದ್ದರು.

ಬಾರಾಮತಿ ವಿಮಾನ ದುರಂತವು ಕೇವಲ ಒಂದು ಅಪಘಾತವಲ್ಲ; ಅದು ಅನೇಕ ಕನಸುಗಳು, ಸಂಬಂಧಗಳು ಮತ್ತು ಭಾವನೆಗಳನ್ನು ಸುಟ್ಟ ದುರಂತದ ಘಟನೆ. ಪೈಲಟ್ ತನ್ನ ಅಜ್ಜಿಗೆ ಕಳುಹಿಸಿದ “Hi, good morning, Dadda” ಎಂಬ ಸರಳ ಸಂದೇಶ ಇಂದು ಅತ್ಯಂತ ಗಾಢ ಅರ್ಥವನ್ನು ಪಡೆದುಕೊಂಡಿದೆ.

ಪ್ರತಿದಿನ ಸಹಜವಾಗಿ ಹೇಳುವ ಮಾತುಗಳು, ವ್ಯಕ್ತಪಡಿಸುವ ಪ್ರೀತಿ ಮತ್ತು ಕಾಳಜಿಯೇ ಕೆಲವೊಮ್ಮೆ ನಮ್ಮ ಕೊನೆಯ ನೆನಪುಗಳಾಗಬಹುದು ಎಂಬುದನ್ನು ಶಾಂಭವಿ ಅವರ ಕಡೆಯ ಸಂದೇಶ ಬೊಟ್ಟುಮಾಡುತ್ತದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...